ತಂತ್ರಜ್ಞಾನ ಬಳಸಿ ಮಿಶ್ರ ಬೇಸಾಯ ಪದ್ದತಿ ಅನುಸರಿಸಿ: ಸಚಿವ ಚಲುವರಾಯಸ್ವಾಮಿ

Most read

ಬೆಂಗಳೂರು: ಆಧುನಿಕ ತಂತ್ರಜ್ಞಾನದೊಂದಿಗಿನ ಸಮಗ್ರ ಬೇಸಾಯ ಅಳವಡಿಕೆ ಸುಸ್ಥಿರ ಹಾಗೂ ಲಾಭದಾಯಕ ಕೃಷಿಗೆ ದಾರಿಯಾಗಿದೆ ರೈತರು ಈ ನಿಟ್ಟಿನಲ್ಲಿ ಗಮನ ಹರಿಸುವ ಅಗತ್ಯವಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಜಿ.ಕೆ.ವಿ.ಕೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಮೂರು ದಿನಗಳ ಕೃಷಿ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರೈತರು ಕೃಷಿ ವಿಶ್ವವಿದ್ಯಾಲಯಗಳು ನಡೆಸುವ ಸಂಶೋಧನೆಗಳು ಹಾಗೂ ತಂತ್ರಜ್ಞಾನಗಳನ್ನು ಬಳಸಿ ಮಿಶ್ರ ಬೇಸಾಯ ಪದ್ದತಿ ಮಾಡಿದರೆ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದರು.
ರಾಷ್ಟ್ರದಲ್ಲಿ 75% ಜನರು ಕೃಷಿಯನ್ನು ಅವಲಂಭಿಸಿದ್ದು 60ರ ದಶಕದಲ್ಲಿ ದೇಶದಲ್ಲಿ ನಡೆದ ಹಸಿರು ಕ್ರಾಂತಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಸ್ವಾವಲಂಭನೆ ಸಾಧಿಸಲು ಸಾಧ್ಯವಾಯಿತು. 1964-65ರಲ್ಲಿ ಆಹಾರ ಉತ್ಪಾದನೆ ರಾಷ್ಟ್ರಮಟ್ಟದಲ್ಲಿ 45.4 ಮಿಲಿಯನ್ ಟನ್ಗಳಷ್ಟಿದ್ದು, 2023-24ರ ಸಾಲಿಗೆ 332.22 ಮಿಲಿಯನ್ ಟನ್ಗಳಿಗೆ ಏರಿಕೆಯಾಗಿದೆ. 2047ರ ವೇಳೆಗೆ 437 ಮಿಲಿಯನ್ ಟನ್ಗೆ ಯೋಜನೆಯನ್ನು ರೂಪಿಸಿದೆ ಎಂದ ಅವರು ವಿವರ ನೀಡಿದರು.


ಆಹಾರ ಉತ್ಪಾದನೆ ಹೆಚ್ಚಳದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳ ಸಂಶೋಧನೆಗಳ ಪಾತ್ರವೂ ಮಹತ್ವದಾಗಿದೆ. ವಿ.ವಿಗಳು ನಿರಂತರವಾಗಿ ಹೊಸ ತಳಿಗಳನ್ನು ಸಂಶೋಧಿಸಿ ಬಿಡುಗಡೆ ಮಾಡುತ್ತಿದ್ದು ಕಡಿಮೆ ನೀರು ಹಾಗೂ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆಯಬಹುದಾಗಿದೆ ರೈತರು ಇವುಗಳ ಲಾಭ ಪಡೆಯಬೇಕು ಎಂದು ಕರೆ ನೀಡಿದರು.


ಈ ಬಾರಿ “ಹವಾಮಾನ ಚತುರ ಡಿಜಿಟಲ್ ಕೃಷಿ” ಎಂಬ ಘೋಷವಾಕ್ಯದೊಂದಿಗೆ ಈ ಮೇಳವನ್ನು ಆಯೋಜಿಸುತ್ತಿರುವುದು ಕೃಷಿ ಕ್ಷೇತ್ರದ ಸಕಾಲಿಕ ಚಿಂತನೆಯಾಗಿ ಎದ್ದು ಕಾಣುತ್ತಿದೆ. ರೈತ ಕುಟುಂಬಗಳಿಗೆ ಇದೊಂದು ಒಳ್ಳೆಯ ಅವಕಾಶವಾಗಿದೆ. ರೈತರುತಮ್ಮ ಶ್ರಮ ಮತ್ತು ಚಿಂತನೆಯಿಂದ ಆರ್ಥಿಕವಾಗಿ ಸಬಲರಾಗಲು ಒಂದು ಒಳ್ಳೆ ಅವಕಾಶವನ್ನು ಕಲ್ಪಿಸಿದೆ ಎಂದು ಚಲುವರಾಯಸ್ವಾಮಿ ಹೇಳಿದರು.


ರಾಜ್ಯದಲ್ಲಿ ಸುಮಾರು78 ಲಕ್ಷಕ್ಕೂ ಹೆಚ್ಚು ರೈತರು ಹಾಗೂ 125 ಲಕ್ಷಕ್ಕೂ ಹೆಚ್ಚು ಕೃಷಿ ಕಾರ್ಮಿಕರು ಕೃಷಿಯಲ್ಲಿ ತೊಡಗಿದ್ದಾರೆ. ರಾಜ್ಯ ಸರ್ಕಾರ ಕೃಷಿಗೆ ಗರಿಷ್ಠ ಆದ್ಯತೆ ನೀಡಿದೆ ಕಳೆದ ಸಾಲಿನಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ಸಬ್ಸಿಡಿಯೊಂದಿಗೆ ಯಂತ್ರೋಪಕರಣ, ನೀರಾವರಿ ಸಲಕರಣೆಗಳನ್ನು ವಿತರಿಸಿದೆ. 2100 ಕೋಟಿ ರೂಪಾಯಿ ಬೆಳೆವಿಮೆ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ರೈತರಿಗೆ ಭರಿಸಲಾಗಿದೆ. ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆ ರೂಪಿಸಿ ಅತ್ಯಧಿಕ ಆರ್ಥಿಕ ನೆರವಿನೊಂದಿಗೆ ಬೃಹತ್ ಬೆಳೆ ಕಟಾವು ಯಂತ್ರಗಳನ್ನು ವಿತರಿಸಲಾಗಿದೆ. ಐದು ಗ್ಯಾರಂಟಿ ಯೋಜನೆಗಳ ಮೂಲಕವು ಕೃಷಿ ಸಮುದಾಯ ಹಾಗೂ ಜನ ಸಾಮಾನ್ಯರಿಗೆ ನಮ್ಮ ಸರ್ಕಾರ ನೆರವು ಒದಗಿಸಿದೆ ಎಂದು ಸಚಿವರು ತಿಳಿಸಿದರು.
ಕೃಷಿ ಮೇಳದ ವ್ಯವಸ್ಥೆ ಶ್ಲಾಘಿಸಿದ ಸಚಿವರು ಕೃಷಿ ಪದವವೀಧರರು ಸ್ವಯಂ ಉದ್ಯೋಗ ಅಳವಡಿಸಿಕೊಂಡು ಇತರರಿಗೆ ಉದ್ಯೋಗ ಹಾಗೂ ಮಾರ್ಗದರ್ಶನ ನೀಡಬೇಕು ಎಂದರು.


ಟ್ರಾಕ್ಟರ್ ಮೂಲಕ ಔಷಧಿ ಸಿಂಪಡಣೆ: ಕೃಷಿ ಸಚಿವರು ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಅತ್ಯಾಧುನಿಕ ಸ್ವಯಂಚಾಲಿತ ಯಂತ್ರಗಳನ್ನು ಒಳಗೊಂಡ ಔಷಧಿ ಸಿಂಪಡಣಾ ಟ್ರಾಕ್ಟರ್ ಕೂಡ ಚಾಲನೆ ನೀಡಿದರು. ಶಾಸಕರಾದ ಎಸ್.ಆರ್.ವಿಶ್ವನಾಥ್ ಹಾಗೂ ಶರತ್ ಬಚ್ಚೇಗೌಡ ಅವರು ಸಹ ಸಚಿವರೊಂದಿಗೆ ಟ್ರಾಕ್ಟರ್ನಲ್ಲಿ ಕುಳಿತಿದ್ದು ವಿಶೇಷವಾಗಿತ್ತು.


650 ಮಳಿಗೆ: ಕೃಷಿಮೇಳದ ಬೃಹತ್ ಜನಾಕರ್ಷಣೆ: ಅಚ್ಚುಕಟ್ಟಾದ ಹಾಗೂ ವಿಶಾಲ ಜಾಗದಲ್ಲಿ ನಡೆಯುವ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕೃಷಿಮೇಳ ದೇಶದಲ್ಲೇ ಹೆಸರುವಾಸಿಯಾಗಿದೆ. ಈ ಭಾರಿ ಸುಮಾರು 650 ಮಳಿಗೆಗಳನ್ನು ತೆರೆಯಲಾಗಿದ್ದು ಹೊಸ ಹೊಸ ತಂತ್ರಜ್ಞಾನಗಳು, ತಳಿಗಳ ಪ್ರದರ್ಶನ ಮತ್ತು ಮಾರಾಟ ಮೇಳ ಲಕ್ಷಾಂತರ ಜನರನ್ನು ಆಕರ್ಷಿಸುತ್ತಿದೆ.

More articles

Latest article