ನವದೆಹಲಿ: ಅತಿವೃಷ್ಟಿಯಿಂದಾಗಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯಾಗಿದ್ದು, ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಬೀದರ್ ಸಂಸದ ಸಾಗರ್ ಖಂಡ್ರೆ ಲೋಕಸಭೆಯಲ್ಲಿ ಇಂದು ಒತ್ತಾಯಿಸಿದ್ದಾರೆ.
ಶೂನ್ಯ ವೇಳೆಯಲ್ಲಿ ಕನ್ನಡದಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಅತಿವೃಷ್ಟಿಯಿಂದ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಆದ್ದರಿಂದ ರೈತರಿಗೆ ಸಹಾಯ ಒದಗಿಸುವ ನಿಟ್ಟನಲ್ಲಿ ಕೇಂದ್ರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಆಗ್ರಹಪಡಿಸಿದರು.
ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ನೀರಾವರಿ ಪ್ರದೇಶಕ್ಕೆ ಎಕರೆಗೆ ರೂ.7 ಸಾವಿರ ಹಾಗೂ ಒಣಭೂಮಿ ಪ್ರದೇಶಕ್ಕೆ ಎಕರೆಗೆ ರೂ.3.5 ಸಾವಿರ ಪರಿಹಾರ ನೀಡಲಾಗುತ್ತಿದೆ. ಈ ಪರಿಹಾರ ಮೊತ್ತದಿಂದ ರೈತರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ಆದ್ದರಿಂದ ಈ ನಿಯಮವನ್ನು ಮರು ಪರಿಶೀಲಿಸಿ ರೈತರಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದರು.
ರಾಜ್ಯ ಸರ್ಕಾರ ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾಗಿರುವ ರೈತರಿಗೆ ನೆರವು ನೀಡಿದ್ದು, ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರವೂ ರೈತರ ಕಷ್ಟಕ್ಕೆ ಸ್ಪಂದಿಸಬೇಕು. ಫಸಲ್ ಬಿಮಾ ಯೋಜನೆಯಡಿ ರೈತರು ವಿಮೆ ಕಂತುಗಳನ್ನು ಸಕಾಲದಲ್ಲಿ ಪಾವತಿಸಿದ್ದರೂ ವಿಮೆ ಹಣ ಸರಿಯಾಗಿ ರೈತರ ಕೈ ಸೇರುತ್ತಿಲ್ಲ. ಆದ್ದರಿಂದ ವಿಮೆಯನ್ನು ಸಕಾಲದಲ್ಲಿ ತಲುಪಿಸಲು ಸರ್ಕಾರ ನಿರ್ದೇಶನ ನೀಡಬೇಕು ಎಂದೂ ಸಾಗರ್ ಖಂಡ್ರೆ ಒತ್ತಾಯಿಸಿದರು.

