ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ ನಲ್ಲಿರುವ ಅಕ್ಕಿ ಗಿರಣಿಯ ಡ್ರೈಯರ್ ನಿಂದ ಆಕಸ್ಮಿಕವಾಗಿ ಹೊರಹೊಮ್ಮಿದ ಹೊಗೆ ಸೇವಿಸಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ರಾಜ್ ಗರಿಯಾ ಅಕ್ಕಿ ಗಿರಣಿಯಲ್ಲಿ ಈ ದುರಂತ ನಡೆದಿದೆ. ಈ ಹೊಗೆಯನ್ನು ಸೇವಿಸಿ ಮೂರ್ಛೆ ಹೋದ ಇತರ ಮೂವರು ಕಾರ್ಮಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಮಾನಂದ ಪ್ರಸಾದ್ ಕುಶ್ವಾಹ ಹೇಳಿದ್ದಾರೆ.
ಇಂದು ಬೆಳಿಗ್ಗೆ ಹಲವು ಕಾರ್ಮಿಕರು ಗಿರಣಿಗೆ ಆಗಮಿಸಿ ಡ್ರೈಯರ್ ನಿಂದ ಹೊರಹೊಮ್ಮಿದ ಹೊಗೆಯನ್ನು ಪರಿಶೀಲನೆ ನಡಸುತ್ತಿದ್ದರು. ಆಗ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿದ್ದರಿಂದ ಕೆಲಸದಲ್ಲಿ ನಿರತರಾಗಿದ್ದ ಎಲ್ಲ ಕಾರ್ಮಿಕರು ಮೂರ್ಛೆ ಹೋದರು. ಅಗ್ನಿಶಾಮಕ ದಳವು ಕಾರ್ಮಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದೆ. ಐವರು ಕಾರ್ಮಿಕರು ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ. ಉಳಿದ ಮೂವರು ಕಾರ್ಮಿಕರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ದುರಂತಕ್ಕೆ ಕಾರಣ ಏನೆಂದು ಪತ್ತೆ ಮಾಡಲಾಗುತ್ತದೆ. ಗಿರಣಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.