ಇಪ್ಪತ್ತೈದು ವರ್ಷಗಳನ್ನು ಪೂರೈಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ಆಗಾಗ ಸರ್ಕಾರಕ್ಕೆ, ಸಮಾಜಕ್ಕೆ ಶಾಕ್ ಟ್ರೀಟ್ ಮೆಂಟ್ ಕೊಡುತ್ತಲೇ ಬಂದಿದ್ದು, ಇದೀಗ ಕನ್ನಡ ನಾಮಫಲಕ ಹೋರಾಟದಿಂದ ಮತ್ತೆ ಮುಂಚೂಣಿಗೆ ಬಂದಿದೆ.
ಕಳೆದ ಡಿಸೆಂಬರ್ 27ರಂದು ಕರವೇ ನಡೆಸಿದ ನಾಮಫಲಕ ಅಭಿಯಾನ ಇಡೀ ದೇಶದ ಗಮನ ಸೆಳೆಯುವಂತಾಯಿತು. ಈ ಚಳವಳಿಯ ಸಂದರ್ಭದಲ್ಲಿ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣವೊಂದರ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಇಂದು ಬಿಡುಗಡೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸಂಘಟಿಸಿ ಯಶಸ್ವಿಯಾದ ಐದು ಪ್ರಮುಖ ಹೋರಾಟಗಳ ವಿವರ ನಮ್ಮ ಕನ್ನಡ ಪ್ಲಾನೆಟ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.
ಕನ್ನಡ ನಾಮಫಲಕ ಚಳವಳಿ
ಕರ್ನಾಟಕದ ಎಲ್ಲ ಅಂಗಡಿ ಮುಂಗಟ್ಟು ಉದ್ಯಮಗಳ ನಾಮಫಲಕಗಳು ಕನ್ನಡದಲ್ಲಿರಬೇಕು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹವಾಗಿತ್ತು. 2005ರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರಿನಲ್ಲಿ ಚಳವಳಿಯೊಂದನ್ನು ಸಂಘಟಿಸಿ ಹಲವು ಇಂಗ್ಲಿಷ್ ನಾಮಫಲಕಗಳಿಗೆ ಮಸಿ ಬಳಿದಿದ್ದರು. ನಂತರ ಸ್ವಲ್ಪ ಮಟ್ಟಿಗೆ ನಾಮಫಲಕಗಳಲ್ಲಿ ಕನ್ನಡ ಕಾಣಿಸಿಕೊಂಡಿತ್ತಾದರೂ ಕನ್ನಡ ಅನುಷ್ಠಾನ ಸಂಬಂಧಿಸಿದಂತೆ ಸರ್ಕಾರ ರೂಪಿಸಿದ ಕಾನೂನುಗಳು ಸಂಪೂರ್ಣ ಸಫಲವಾಗಿರಲಿಲ್ಲ. ಈ ಸಂಬಂಧ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಗ್ರ ಕನ್ನಡ ಅನುಷ್ಠಾನ ಕಾಯ್ದೆ ರೂಪುಗೊಂಡು ವಿಧಾನಮಂಡಲದ ಉಭಯಸದನಗಳು ಅದಕ್ಕೆ ಸರ್ವಾನುಮತದ ಅನುಮೋದನೆ ನೀಡಿದ್ದರೂ ಜಾರಿಯಾಗಿರಲಿಲ್ಲ.
ಈ ವರ್ಷ ರಾಜ್ಯೋತ್ಸವ ಸಂದರ್ಭದಲ್ಲಿ ಕನ್ನಡ ನಾಮಫಲಕ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕನ್ನಡ ನಾಮಫಲಕ ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಇದು ಆಗುವವರೆಗೆ ವಿರಮಿಸುವುದಿಲ್ಲ ಎಂದು ಘೋಷಿಸಿದರು. ಕಳೆದ ಡಿಸೆಂಬರ್ 27ರಂದು ನಡೆದ ಚಳವಳಿ ದೇಶಾದ್ಯಂತ ಸಂಚಲನವನ್ನೇ ಮೂಡಿಸಿತು. ಬಹುಶಃ ಚಳವಳಿ ಈ ಸ್ವರೂಪದಲ್ಲಿ ನಡೆಯಬಹುದು ಎಂದು ಯಾರೂ ಊಹಿಸಿರಲಿಲ್ಲ. ಬೆಂಗಳೂರಿನ ನಾನಾ ಭಾಗಗಳಲ್ಲಿ ಏಕಕಾಲಕ್ಕೆ ಸಾವಿರಾರು ಇಂಗ್ಲಿಷ್ ನಾಮಫಲಕಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕಿತ್ತು ಎಸೆದರು.
ಕಳೆದ ವರ್ಷ ನವೆಂಬರ್ 1ರ ರಾಜ್ಯೋತ್ಸವ ಪೂರ್ವದಲ್ಲೇ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು, ಬೆಂಗಳೂರಿನ ನಾಮಫಲಕಗಳಲ್ಲಿ ಕನ್ನಡ ಇಲ್ಲದಿದ್ದರೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು, ಆದರೆ ಇದನ್ನು ವ್ಯಾಪಾರಸ್ಥರಿಂದ ಹಿಡಿದು ಪೊಲೀಸರವರೆಗೆ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಡಿಸೆಂಬರ್ 27ರಂದು ವಿಮಾನನಿಲ್ದಾಣ ರಸ್ತೆಯ ಸಾದಹಳ್ಳಿ ಗೇಟ್ ಬಳಿಯಿಂದ ಪ್ರತಿಭಟನೆ ನಡೆಸುವುದಾಗಿ, ಅಂದಿನ ದಿನಾಂಕದ ಒಳಗೆ ನಾಮಫಲಕಗಳನ್ನು ಬದಲಾಯಿಸಿಕೊಳ್ಳುವಂತೆ ಅವರು ಅಂತಿಮ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಬೆಂಗಳೂರಿನ ಬಹುತೇಕ ವಾಣಿಜ್ಯ ರಸ್ತೆಗಳಲ್ಲಿ ಕರವೇ ಮುಖಂಡರು ಜಾಥಾ ನಡೆಸಿ, ಎಚ್ಚರಿಕೆ ನೀಡುತ್ತ ಬಂದಿದ್ದರು.
ಡಿಸೆಂಬರ್ 27ರಂದು ಪ್ರತಿಭಟನೆಗೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಪ್ರವಾಹದೋಪಾದಿಯಲ್ಲಿ ಹರಿದುಬಂದಿದ್ದರು. ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನೆಯ ನಿರೀಕ್ಷೆ ಇಲ್ಲದ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಹೆಣಗಾಡಿದರು. ಕೊನೆಗೆ ನಾರಾಯಣಗೌಡರನ್ನು ಬಂಧಿಸುವಷ್ಟರಲ್ಲಿ ಪೊಲೀಸರಿಗೆ ಸಾಕುಸಾಕಾಗಿ ಹೋಗಿತ್ತು. ಅಷ್ಟರೊಳಗೆ ಬೆಂಗಳೂರಿನ ನಾನಾ ಭಾಗಗಳಲ್ಲಿ ಇಂಗ್ಲಿಷ್ ಬೋರ್ಡುಗಳು ಕರವೇ ಕಾರ್ಯಕರ್ತರ ಆಕ್ರೋಶಕ್ಕೆ ಧ್ವಂಸವಾಗಿದ್ದವು.
ಮೋರೆ ಮಸಿ ಪ್ರಕರಣ:
ಕರ್ನಾಟಕ ರಕ್ಷಣಾ ವೇದಿಕೆ ಸ್ಥಾಪನೆಯಾಗಿದ್ದು 1999ರಲ್ಲಿ. ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡದೇ ಇರುವುದನ್ನು ಖಂಡಿಸಿ ಅದು ಮೊದಲ ಹೋರಾಟ ಸಂಘಟಿಸಿತ್ತು. ಆದರೆ ಕರ್ನಾಟಕ ರಕ್ಷಣಾ ವೇದಿಕೆ ಮುಂಚೂಣಿಗೆ ಬಂದಿದ್ದು ಬೆಳಗಾವಿ ಮೇಯರ್ ವಿಜಯ್ ಮೋರೆಯವರಿಗೆ ಮಸಿ ಬಳಿದ ಪ್ರಕರಣದಿಂದ. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಿರ್ಣಯ ಅಂಗೀಕರಿಸಿದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಕರವೇ ಮುಖಂಡರು ಬೆಂಗಳೂರಿಗೆ ಬಂದಿದ್ದ ವಿಜಯ ಮೋರೆ ಸೇರಿದಂತೆ ಎಂಇಎಸ್ ಮುಖಂಡರಿಗೆ ಶಾಸಕರ ಭವನದಲ್ಲೇ ಮಸಿ ಬಳಿದಿದ್ದು ಸಂಚಲನ ಮೂಡಿಸಿತ್ತು. ಈ ಪ್ರಕರಣದ ನಂತರ ಇಡೀ ರಾಜ್ಯಾದ್ಯಂತ ಎಂಇಎಸ್ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡ ಹಿನ್ನೆಲೆಯಲ್ಲಿ ಅಂದಿನ ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಬೆಳಗಾವಿ ಮಹಾನಗರಪಾಲಿಕೆಯನ್ನು ಸೂಪರ್ ಸೀಡ್ ಮಾಡಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟ ಮೊದಲ ಬಾರಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ ಪ್ರಕರಣ ಇದು.
ಮೇಯರ್ ಮೋರೆಗೆ ಮಸಿ ಬಳಿದ ಪ್ರಕರಣದ ನಂತರ ಕನ್ನಡದ ಹಲವು ಸಾಹಿತಿಗಳು ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟದ ವಿಧಾನವನ್ನು ಟೀಕಿಸಿದ್ದರು. ಆದರೆ ಸಾಹಿತಿ ಚಂದ್ರಶೇಖರ ಪಾಟೀಲರು (ಚಂಪಾ) ಕರವೇಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ಮತ್ತೋರ್ವ ಸಾಹಿತಿ-ಚಿಂತಕ ಪೂರ್ಣಚಂದ್ರ ತೇಜಸ್ವಿ ಕೂಡ ಕರವೇ ನಡೆಯನ್ನು ಸಮರ್ಥಿಸಿಕೊಳ್ಳುತ್ತ, ʻಅವರಿಗೆ ಮಸಿ ಬಳಿಯದೇ, ಫೇರ್ ಅಂಡ್ ಲವ್ಲಿ ಬಳಿಯಬೇಕಿತ್ತೇ?ʼ ಎಂದು ಹೇಳಿದ್ದರು.
ಆನ್ ಲೈನ್ ಲಾಟರಿ ವಿರುದ್ಧ ಹೋರಾಟ
ಕರ್ನಾಟಕ ರಕ್ಷಣಾ ವೇದಿಕೆ ಪ್ರವರ್ಧಮಾನಕ್ಕೆ ಬರುತ್ತಿದ್ದ ಕಾಲದಲ್ಲೇ ರಾಜ್ಯಾದ್ಯಂತ ಆನ್ ಲೈನ್ ಲಾಟರಿ ಪಿಡುಗು ಆರಂಭವಾಗಿತ್ತು. ರಾಜ್ಯದ ಎಲ್ಲ ನಗರ, ಪಟ್ಟಣಗಳ ರಸ್ತೆರಸ್ತೆಗಳಲ್ಲಿ ಸಾವಿರಾರು ಆನ್ ಲೈನ್ ಲಾಟರಿ ಅಂಗಡಿಗಳು ಆರಂಭವಾದವು. ಲಕ್ಷಾಂತರ ಜನರು ಆನ್ ಲೈನ್ ಲಾಟರಿ ದಾಸರಾದರು. ದುಡಿದ ಹಣವನ್ನೆಲ್ಲ ಲಾಟರಿಗೆ ಹಾಕಿ ಕಳೆದುಕೊಂಡರು. ನೂರಾರು ಮಂದಿ ಆತ್ಮಹತ್ಯೆಗೆ ಶರಣಾದರು. ಸಾವಿರಾರು ಕುಟುಂಬಗಳು ನಿರ್ಗತಿಕವಾದವು.
ಈ ಸಂದರ್ಭದಲ್ಲಿ ಆನ್ ಲೈನ್ ಲಾಟರಿ ವಿರುದ್ಧ ಚಳವಳಿ ಕೈಗೊಂಡ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾದ್ಯಂತ ಏಕಕಾಲಕ್ಕೆ ಆನ್ ಲೈನ್ ಲಾಟರಿ ಅಂಗಡಿಗಳ ವಿರುದ್ಧ ದೊಡ್ಡ ಪ್ರಮಾಣದ ದಾಳಿ ನಡೆಸಿ, ಕಂಪ್ಯೂಟರ್ ಇತ್ಯಾದಿ ಉಪಕರಣಗಳನ್ನು ಒಡೆದು ಹಾಕಿತು. ಸರ್ಕಾರ ಎಚ್ಚೆತ್ತುಕೊಂಡು ತಕ್ಷಣ ಆನ್ ಲೈನ್ ಲಾಟರಿ ನಿಷೇಧಿಸಿರುವುದಾಗಿ ಘೋಷಿಸಿತು. ಕನ್ನಡಿಗರ ಬದುಕನ್ನೇ ನಾಶಗೊಳಿಸುತ್ತಿದ್ದ ಆನ್ ಲೈನ್ ಲಾಟರಿ ವಿರುದ್ಧ ಚಳವಳಿಯ ನಡೆಸಿ ಅದನ್ನು ನಿಲ್ಲಿಸುವಲ್ಲಿ ಕರವೇ ಪ್ರಮುಖ ಪಾತ್ರ ವಹಿಸಿತು.
ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗದ ಚಳವಳಿ
ಕರ್ನಾಟಕ ರಕ್ಷಣಾ ವೇದಿಕೆಯ ಇಪ್ಪತ್ತೈದು ವರ್ಷಗಳ ಇತಿಹಾಸದಲ್ಲಿ ಅದು ಸಾಧಿಸಿದ ದೊಡ್ಡ ಗೆಲುವೆಂದರೆ ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ ನಡೆಸಿದ ಚಳವಳಿ. ಯುಪಿಎ ಮೊದಲ ಸರ್ಕಾರ ಬಂದನಂತರ ನೈರುತ್ಯ ರೈಲ್ವೆಯ ಡಿ ದರ್ಜೆಯ 4500ಕ್ಕೂ ಹೆಚ್ಚು ಹುದ್ದೆಗಳಿಗೆ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ಮಾತ್ರ ನಡೆಯಲಿದ್ದ ಈ ಪರೀಕ್ಷೆಗಳ ಕುರಿತು ಜಾಹೀರಾತುಗಳನ್ನು ಬಿಹಾರ, ಉತ್ತರಪ್ರದೇಶಗಳ ದಿನಪತ್ರಿಕೆಗಳಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಲಾಗಿತ್ತು. ಕರ್ನಾಟಕದ ನಿರುದ್ಯೋಗಿ ಯುವಕರಿಗೆ ಈ ಕುರಿತು ಮಾಹಿತಿಯೇ ಇರಲಿಲ್ಲ.
ಆಗ ಕೇಂದ್ರ ರೈಲ್ವೆ ಸಚಿವರಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರ ಪ್ರಭಾವದಿಂದಾಗಿ, ಬಿಹಾರದಿಂದ ವಿಶೇಷ ರೈಲುಗಳಲ್ಲಿ ಸಾವಿರಾರು ಬಿಹಾರಿ ಯುವಕರು ಪರೀಕ್ಷೆ ಬರೆಯಲು ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿಯ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ಕರ್ನಾಟಕ ರಕ್ಷಣಾ ವೇದಿಕೆ ಮೂರು ಕೇಂದ್ರಗಳಲ್ಲಿ ಪರೀಕ್ಷೆ ನಡೆಯದಂತೆ ತಡೆಯಿತು. ಸತತ ಒಂದು ತಿಂಗಳ ಕಾಲ ಪ್ರತಿಭಟನೆ ಹಮ್ಮಿಕೊಂಡ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಕೊನೆಗೆ ಹುಬ್ಬಳ್ಳಿಯ ಪ್ರಧಾನ ಕಚೇರಿ ಮತ್ತು ಬೆಂಗಳೂರು-ಮೈಸೂರುಗಳ ವಿಭಾಗೀಯ ಕಚೇರಿಗಳಿಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು. ಕರವೇ ಪ್ರತಿಭಟನೆ ತಾರಕಕ್ಕೆ ಏರಿದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪರೀಕ್ಷೆಗಳನ್ನು ಸ್ಥಗಿತಗೊಳಿಸಿತು. ಇದೇ ಮಾದರಿಯಲ್ಲಿ ಮಹಾರಾಷ್ಟ್ರದಲ್ಲೂ ಸಹ ಬಿಹಾರಿ ಯುವಕರನ್ನು ರೈಲ್ವೆ ಡಿ ದರ್ಜೆ ಹುದ್ದೆಗಳಿಗೆ ತುಂಬುವ ಪ್ರಯತ್ನಗಳು ನಡೆದಾಗ ಅಲ್ಲಿನ ಎಂಎನ್ ಎಸ್ ಸಂಘಟನೆ ಪ್ರತಿಭಟನೆ ನಡೆಸಿ ಪರೀಕ್ಷೆಗಳನ್ನು ತಡೆಯಿತು.
ಇದಾದ ನಂತರ ಮಮತಾ ಬ್ಯಾನರ್ಜಿ ರೈಲ್ವೆ ಮಂತ್ರಿಯಾದಾಗ, ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಮಾತ್ರವಲ್ಲದೆ ಎಲ್ಲ ಭಾರತೀಯ ಭಾಷೆಗಳಲ್ಲಿ ನಡೆಸುವ ತೀರ್ಮಾನ ಕೈಗೊಂಡರು. ಅಷ್ಟೇ ಅಲ್ಲದೆ ಪರೀಕ್ಷೆಗಳನ್ನು ಇಡೀ ದೇಶದಾದ್ಯಂತ ಏಕಕಾಲಕ್ಕೆ ನಡೆಸುವ ತೀರ್ಮಾನ ಕೈಗೊಂಡರು. ಹೀಗಾಗಿ ಆಯಾ ರಾಜ್ಯದ ಅಭ್ಯರ್ಥಿಗಳು ತಮ್ಮ ಮಾತೃಭಾಷೆಯಲ್ಲೇ ಪರೀಕ್ಷೆ ಬರೆದು ಆಯ್ಕೆಯಾಗುವ ಅವಕಾಶ ಲಭ್ಯವಾಯಿತು. ಈ ತೀರ್ಮಾನದ ನಂತರ ನೈರುತ್ಯ ರೈಲ್ವೆಯ ಡಿ ದರ್ಜೆಯ ಹುದ್ದೆಗಳಿಗೆ ಪರೀಕ್ಷೆಗಳು ನಡೆದು ಶೇ 90ರಷ್ಟು ಕರ್ನಾಟಕದ ಅಭ್ಯರ್ಥಿಗಳೇ ಆಯ್ಕೆಯಾದರು. ಇದು ಕರ್ನಾಟಕ ರಕ್ಷಣಾ ವೇದಿಕೆಯ ಬಹುದೊಡ್ಡ ಯಶಸ್ವಿ ಹೋರಾಟವಾಗಿ ದಾಖಲಾಯಿತು.
ನಮ್ಮ ಮೆಟ್ರೋದಲ್ಲಿ ಹಿಂದಿ ಓಡಿಸಿದ ಹೋರಾಟ
ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆ ಕೇಂದ್ರ ಸರ್ಕಾರದ ನೆರವಿನೊಂದಿಗೆ ಜಾರಿಗೊಳಿಸಲಾದ ರಾಜ್ಯ ಸರ್ಕಾರದ ಯೋಜನೆ. ಆದರೂ ಸಹ ನಮ್ಮ ಮೆಟ್ರೊದಲ್ಲಿ ಕನ್ನಡ ಮತ್ತು ಇಂಗ್ಲಿಷ್ ನೊಂದಿಗೆ ಹಿಂದಿ ನಾಮಫಲಕಗಳೂ ರಾರಾಜಿಸುತ್ತಿದ್ದವು. ಬೆಂಗಳೂರು ನಗರ ಸಾರಿಗೆ ವ್ಯವಸ್ಥೆಯಾದ ನಮ್ಮ ಮೆಟ್ರೋದಲ್ಲಿ ಹಿಂದಿಹೇರಿಕೆ ಏಕೆ ಎಂಬ ಪ್ರಶ್ನೆ ಉದ್ಭವವಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಖಾಡಕ್ಕೆ ಧುಮುಕಿ ಹಲವು ಹಂತದ ಶಾಂತಿಯುತ ಹೋರಾಟಗಳನ್ನು ಸಂಘಟಿಸಿತು. ಆದರೆ ನಮ್ಮ ಮೆಟ್ರೋದಿಂದ ಹಿಂದಿಯನ್ನು ತೆಗೆಯಲಿಲ್ಲ.
2017ರ ಜೂನ್ 20ರಂದು ಆಗ ಅಸ್ತಿತ್ವದಲ್ಲಿ ಇದ್ದ ಸುಮಾರು 24 ಮೆಟ್ರೋ ನಿಲ್ದಾಣಗಳಿಗೆ ಬೆಳಗಿನ ಜಾವ 4ರಿಂದ 5 ಗಂಟೆಯವರೆಗೆ ನುಗ್ಗಿದ್ದ ಕರವೇ ಕಾರ್ಯಕರ್ತರು ಹಿಂದಿ ನಾಮಫಲಕಗಳಿಗೆ ಮಸಿ ಬಳಿದಿದ್ದರು. ಸುಮಾರು 24 ಕರವೇ ಮುಖಂಡರ ತಂಡಗಳು ಏಕಕಾಲಕ್ಕೆ ಈ ದಾಳಿ ಸಂಘಟಿಸಿದ್ದವು. ಈ ಘಟನೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಈ ಚಳವಳಿಯ ನಂತರ ಎಚ್ಚೆತ್ತುಕೊಂಡ ಆಗಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಮ್ಮ ಮೆಟ್ರೋ ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಇದರಲ್ಲಿ ಹಿಂದಿ ಬಳಕೆಯ ಅವಶ್ಯಕತೆ ಇಲ್ಲ. ಹೀಗಾಗಿ ಹಿಂದಿಯನ್ನು ತೆಗೆದುಹಾಕುವುದಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ನಂತರ ನಮ್ಮ ಮೆಟ್ರೋದಲ್ಲಿ ಇದ್ದ ಹಿಂದಿ ಅಕ್ಷರಗಳು ಮರೆಯಾಗಿದ್ದವು. ಇದೂ ಕೂಡ ಕರ್ನಾಟಕ ರಕ್ಷಣಾ ವೇದಿಕೆಯ ಬಹುದೊಡ್ಡ ಯಶಸ್ವಿ ಚಳವಳಿಯಾಗಿ ಗುರುತಿಸಿಕೊಂಡಿತು.
ಈ ಐದು ಮಹತ್ವದ ಹೋರಾಟಗಳಲ್ಲದೆ, ಕಾವೇರಿ ವಿವಾದದ ಸಂದರ್ಭದ ಹೋರಾಟಗಳು, ಕೃಷ್ಣಾ ನದಿನೀರಿನಲ್ಲಿ ಕರ್ನಾಟಕದ ಹಕ್ಕಿಗಾಗಿ ನಡೆದ ಚಳವಳಿ, ಮಹದಾಯಿ ಚಳವಳಿ, ಫೋಸ್ಕೋ ಓಡಿಸುವ ಹೋರಾಟ, ಚಿತ್ರಾವತಿ ಅಣೆಕಟ್ಟಿಗಾಗಿ ಹೋರಾಟ, ಐಟಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಕ್ಕಾಗಿ ನಡೆಸಿದ ಹೋರಾಟ, ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರುದ್ಧ ನಡೆಸಿದ ಚಳವಳಿ ಹೀಗೆ ಹತ್ತು ಹಲವು ಚಳವಳಿಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ಸಂಘಟಿಸಿದೆ. ಬಹುತೇಕ ಚಳವಳಿಗಳನ್ನು ತಾರ್ಕಿಕ ಗುರಿಯತ್ತ ತೆಗೆದುಕೊಂಡು ಹೋಗಿದೆ. ಹೀಗಾಗಿ ಕರ್ನಾಟಕದಲ್ಲಿ ಕನ್ನಡ ನಾಡು ನುಡಿಗೆ ಏನೇ ಧಕ್ಕೆಯಾದರೂ ಮೊದಲು ಕೇಳಿಬರುವ ಹೆಸರು ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆಯದ್ದೇ ಆಗಿರುತ್ತದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ವ್ಯವಸ್ಥಿತವಾಗಿ ಸಂಘಟನೆಯನ್ನು ಮಾಡುತ್ತ ಬಂದಿರುವ ಗೌಡರು, ಜೀವದ ಹಂಗು ತೊರೆದು ಹೋರಾಡುವ ಕಾರ್ಯಕರ್ತರೇ ನನ್ನ ಶಕ್ತಿ ಎಂದು ಹೇಳಿಕೊಳ್ಳುತ್ತಾರೆ.