ಹಾಸನ: ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಹಾದಿಗೆ ಗ್ರಾಮದಲ್ಲಿ ಕಾಫಿ ಪ್ಲಾಂಟರ್ ರವಿ ಅವರಿಗೆ ಸೇರಿದ 12 ಕೋಳಿಗಳಿಗೆ ಅಪರಿಚಿತರು ರಾಸಾಯನಿಕ ಅಥವಾ ವಿಷವಿಟ್ಟಿದ್ದಾರೆ. ಇದರಿಂದ ಎಲ್ಲ 12 ಕೋಳಿಗಳು ಮೃತಪಟ್ಟಿವೆ.
ಈ ಘಟನೆ ಕುತೂಹಲ ಮತ್ತು ಅಚ್ಚರಿಗೆ ಕಾರಣವಾಗಿದೆ. ಮೃತಪಟ್ಟ ಕೋಳಿಯನ್ನು ಅದುಮಿದರೆ ಅದರ ಬಾಯಿಂದ ಬೆಂಕಿ ಮತ್ತು ಹೊಗೆ ಬರುತ್ತಿದೆ. ಇದನ್ನು ನೋಡಲು ಹಾದಿಗೆ ಗ್ರಾಮದ ಜನರಷ್ಟೇ ಅಲ್ಲದೆ, ಸುತ್ತಮುತ್ತಲಿನ ಗ್ರಾಮದ ಜನರೂ ಆಗಮಿಸುತ್ತಿದ್ದಾರೆ.
ಒಂದೊಂದು ಕೋಳಿಯ ಬೆಲೆ ಬರೋಬ್ಬರಿ ರೂ.1000 ಎಂದು ತಿಳಿದು ಬಂದಿದೆ. ಕೋಳಿಗಳು ತಿಂದಿರುವುದು ರಾಸಾಯನಿಕ ವಿಷವೆಂದು ಸ್ಥಳಿಯರು ಅಭಿಪ್ರಾಯಪಟ್ಟಿದ್ದಾರೆ. ಈ ರಾಸಾಯನಿಕವು ಯಾವುದೋ ಫಾರ್ಮುಲಾದಿಂದ ತಯಾರಾಗಿರಬಹುದು ಎಂದು ಅಂದಾಜಿಸಲಾಗಿದೆ. ಇದೇ ರಾಸಾಯನಿಕವನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿದರೆ ಗತಿ ಏನು ಎಂಬ ಪ್ರಶ್ನೆಯೂ ಕಾಡುತ್ತಿದೆ.
ಈ ರೀತಿಯ ರಾಸಾಯನಿಕಗಳನ್ನು ತಯಾರಿಸಲು ವಿಜ್ಞಾನಿಗಳಿಗೆ ಮಾತ್ರ ಸಾಧ್ಯ. ಆದರೆ ಇಂತಹ ರಾಸಾಯನಿಕ ಅಥವಾ ವಿಷ ಜನ ಸಾಮಾನ್ಯರಿಗೆ ಸಿಕ್ಕಿದ್ದಾದರೂ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.ನ
ಕೂಡಲೇ ಕೋಳಿಗಳ ಸಾವಿನ ರಹಸ್ಯವನ್ನು ಭೇದಿಸಬೇಕು ಮತ್ತು ರಾಸಾಯನಿಕ ಅಥವಾ ವಿಷ ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಗ್ರಾಮಸ್ಥರು ಸ್ಥಳೀಯ ಅಧಿಕಾರಗಳ ಬಳಿ ಕೇಳಿಕೊಂಡಿದ್ದಾರೆ.