ಬೆಂಗಳೂರು: ನಗರದ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯ ಯಮಹಾ ಬೈಕ್ ಶೋರೂಂ ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿ, ಸುಮಾರು 60ಕ್ಕೂ ಹೆಚ್ಚು ಬೈಕ್‍ಗಳು ಅಗ್ನಿಗಾಹುತಿಯಾಗಿವೆ. ಮಹದೇವಪುರದ ಬಿ.ನಾರಾಯಣಪುರದಲ್ಲಿ ಈ ದುರಂತ ಸಂಭವಿಸಿದೆ. ಹೊಸ ವರ್ಷದ ದಿನವೇ ಈ ದುರಂತ ನಡೆದಿದ್ದು, ಶೋರೂಂ ಮಾಲೀಕರ ಪಾಲಿಗೆ ಹೊಸ ವರ್ಷದ ಆರಂಭ ಅಶುಭವಾಗಿದೆ. ಬುಧವಾರ ರಾತ್ರಿ 8 ಗಂಟೆ ವೇಳೆಗೆ ಈ ಅವಘಡ ಸಂಭವಿಸಿದೆ. ಹೊಸ ವರ್ಷದ ದಿನ ಎಂಬ ಕಾರಣಕ್ಕೆ 7 ಗಂಟೆಗೆ ಶೋರೂಂನ ಸಿಬ್ಬಂದಿ ಮನೆಗೆ ತೆರಳಿದ್ದರು. ನಂತರ ಅಗ್ನಿ ಅವಘಡ ಸಂಭವಿಸಿದ್ದು, ಶೋರೂಂನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಬೈಕ್ ಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ ಶೋ ರೂಂ ಹಿಂಬದಿಯಲ್ಲಿರುವ ಸರ್ವೀಸ್ ಸೆಂಟರ್ ಗೂ ಬೆಂಕಿ ತಗುಲಿದೆ.
ಕೂಡಲೇ ಸ್ಥಳೀಯರು ಆಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಗ್ನಿ ಅವಘಡ ಸಂಭವಿಸಿದ ಶೋರೂಂ ಪಕ್ಕದಲ್ಲೇ ಮತ್ತೊಂದು ಶೋರೂಂ ಇದ್ದು, ಅಲ್ಲಿಗೂ ಬೆಂಕಿ ವ್ಯಾಪಿಸಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಿನ ಬೈಕ್‍ಗಳನ್ನು ಬೇರೆಡೆಗೆ ಸಾಗಿಸಲಾಗಿದೆ. ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.