ಹಾಂಗ್ ಕಾಂಗ್: ಹಾಂಗ್ ಕಾಂಗ್ ನ ಬಹುಮಹಡಿ ಕಟ್ಟಡಗಳಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 128 ದಾಟಿದ್ದು, 300ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ ವಾಂಗ್ ಫುಕ್ ಕೋರ್ಟ್ ಎಂಬ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಕಳೆದ ಎರಡು ದಿನಗಳಿಂದ ಬೆಂಕಿ ಹೊಗೆಯುಗುಳುತ್ತಲೇ ಇದೆ. ಈ ದುರಂತ ಸಂಬಂಧ ಮೂವರು ಶಂಕಿತರನ್ನು ಬಂಧಿಸಲಾಗಿದೆ ಎಂದು ಹಾಂಗ್‌ಕಾಂಗ್ ಪೊಲೀಸರು ಹೇಳಿದ್ದಾರೆ.
ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡನೇ ದಿನವಾದ ಇಂದೂ ಸಹ ಹರ ಸಾಹಸಪಡುತ್ತಲೇ ಇದ್ದಾರೆ. ಹಾಂಕ್ ಕಾಂಗ್ ನಗರದಲ್ಲಿ 1940 ರಿಂದೀಚೆಗೆ ಸಂಭವಿಸಿದ ಭೀಕರ ಬೆಂಕಿ ಅನಾಹುತ ಎಂದು ಹೇಳಲಾಗಿದೆ.
ನಗರದ ಉತ್ತರ ಉಪನಗರವಾದ ತೈ ಪೋ ಜಿಲ್ಲೆಯಲ್ಲಿ ಸಾವಿರಾರು ಜನರು ವಾಸಿಸುವ ಅಪಾರ್ಟ್ ಮೆಂಟ್ ಗಳ ಸಮೂಹವಾದ ವಾಂಗ್ ಫುಡ್ ಕೋರ್ಟ್ ಸಂಕೀರ್ಣದಲ್ಲಿ ಬೆಂಕಿ ಕಾಣಸಿಕೊಂಡಿದೆ. ಹೆಚ್ಚಿನ ಸಾವುನೋವುಗಳು ಸಂಭವಿಸದಂತೆ ಏಳು ಗೋಪುರಗಳಲ್ಲಿರುವ ಎಲ್ಲಾ ಘಟಕಗಳನ್ನು ಪ್ರವೇಶಿಸಲು ಅಗ್ನಿ ಶಾಮಕ ಸಿಬ್ಬಂದಿ ಪ್ರಯತ್ನಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೂ128 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 900 ಜನರನ್ನು ತಾತ್ಕಾಲಿಕ ಆಶ್ರಯ ತಾಣಗಳಿಗೆ ಸ್ಥಳಾಂತರಿಸಲಾಗಿದೆ.

