ಮೈಸೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಹೋರಾಟ ನಡೆಸುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ನೀಡಿದ ದೂರಿನ ಮೇರೆಗೆ ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಂಗಳವಾರ ರಾತ್ರಿ ಲಕ್ಷ್ಮಣ್ ದೂರು ಸಲ್ಲಿಸಿದ್ದರು.
ಸಿಎಂ ಸಿದ್ದರಾಮಯ್ಯರ ಪತ್ನಿ ಪಾರ್ವತಿ ಮುಡಾದಿಂದ ಪಡೆದ ನಿವೇಶನದ ಕ್ರಯ ಪತ್ರದ ಮುದ್ರಾಂಕ ಶುಲ್ಕ ಪಾವತಿ ಕುರಿತು ಸ್ನೇಹಮಯಿ ಕೃಷ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಸ್ನೇಹಮಯಿ ಕೃಷ್ಣ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಪ್ರತಿನಿತ್ಯ ಒಂದಿಲ್ಲೊಂದು ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡಿ ಒತ್ತಡ ಹೇರುತ್ತಿದ್ದಾರೆ. ಆದ್ದರಿಂದ ಕೃಷ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಲಕ್ಷ್ಮಣ್ ದೂರಿನಲ್ಲಿ ತಿಳಿಸಿದ್ದರು.
ಈ ಮಧ್ಯೆ ಸ್ನೇಹಮಯಿ ಕೃಷ್ಣ ಲಕ್ಷ್ಮಣ್ ಅವರಿಗೆ ಬಹಿರಂಗ ಸವಾಲು ಹಾಕಿದ್ದು, ನನ್ನ ಪರವಾಗಿ ನೂರು ಕೋಟಿ ರೂ ಕೇಳಿದ ವ್ಯಕ್ತಿ ಯಾರು ಎನ್ನುವುದನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ್ದಾರೆ. ನನ್ನ ವಿರುದ್ಧ 44 ಪ್ರಕರಣ ದಾಖಲಾಗಿವೆ ಎಂದು ಆರೋಪ ಮಾಡಿದ್ದೀರಿ. ಎಲ್ಲ ಪ್ರಕರಣಗಳ ಎಫ್ ಐ ಆರ್ ಬಿಡುಗಡೆ ಮಾಡಿ ಸಾಕ್ಷಿಗಳನ್ನು ಜನರ ಮುಂದಿಟ್ಟರೆ ನಾನು ನನ್ನ ಹೋರಾಟ ನಿಲ್ಲಿಸುತ್ತೇನೆ. ಇಲ್ಲದಿದ್ದರೆ ನೀವು ರಾಜಕೀಯ ನಿವೃತ್ತಿ ಹೊಂದುತ್ತೀರಾ ಎಂದು ಪ್ರಶ್ನಿಸಿದ್ದಾರೆ. ನನ್ನ ಮೇಲೆ ಸುಳ್ಳು ಆರೋಪ ಮಾಡಿದರೆ ಸುಮ್ಮನಿರಲ್ಲ. ನಾನು ಬ್ಲಾಕ್ ಮೇಲರ್ ಅಲ್ಲ. ರಾಜ್ಯದ ಜನರು ಇದನ್ನು ನಂಬುವುದು ಇಲ್ಲ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ನೇಹಮಯಿ ಕೃಷ್ಣ ಕಿಡಿಕಾರಿದ್ದಾರೆ.