ರೂ. 99 ಲಕ್ಷ ಸಾಲ ಮರಳಿಸದ ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ದೂರು ದಾಖಲು

Most read

ಬಸವಕಲ್ಯಾಣ: ರೂ.99 ಲಕ್ಷ ಹಣವನ್ನು ಮರಳಿಸದೆ ವಂಚನೆ ಎಸಗಿದ ಆರೋಪದಡಿಯಲ್ಲಿ ಬಿಜೆಪಿ ಶಾಸಕ ಶರಣು ಸಲಗರ  ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಲಗರ ಅವರ ಸಂಬಂಧಿ ಮತ್ತು ಆಪ್ತರೂ ಆಗಿರುವ ಉದ್ಯಮಿ ಸಂಜೀವಕುಮಾರ ಸುಗೂರೆ ದೂರು ನೀಡಿದ್ದರು. ದೂರು ದಾಖಲಿಸಿಕೊಳ್ಳುವಂತೆ ಬೆಂಗಳೂರಿನ ಎಸಿಜೆಎಂ ನ್ಯಾಯಾಲಯ ಸೂಚನೆ ನೀಡಿತ್ತು.

2023ರ ವಿಧಾನಸಭಾ ಚುನಾವಣೆ ಸಂರ್ಭದಲ್ಲಿ ಸಂಜೀವ್ ಕುಮಾರ್‌ ಅವರಿಂದ ಸಲಗರ ಅವರು 99 ಲಕ್ಷ ರೂ. ಹಣವನ್ನು ಸಾಲವಾಗಿ ಪಡೆದಿದ್ದರು. 2023ರ ಜನವರಿ ಮತ್ತು ಫೆಬ್ರುವರಿ ನಡುವೆ ಹಲವು ಕಂತುಗಳಲ್ಲಿ ಹಣವನ್ನು ಪಡೆದಿದ್ದು, ಆರು ತಿಂಗಳಲ್ಲಿ ಸಾಲ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.

ಆದರೆ ಸಾಲವನ್ನು ಹಿಂತಿರುಗಿಸಿರಲಿಲ್ಲ. ಶಾಸಕರು ಸಾಲವನ್ನು ಮರಳಿಸುವ ಮುನ್ಸೂಚನೆಯೂ ಇರಲಿಲ್ಲ. ಆಗ ಸಂಜೀವ್‌ ಅವರು, ಕೆಲವು ಮುಖಂಡರ ಪಂಚಾಯಿತಿ ನಡೆಸಿ ಸಾಲ ಮರಳಿಸುವಂತೆ ಒತ್ತಡ ಹೇರಿದ್ದರು.  ಆಗ ಶರಣು ಸಲಗರ ಅವರು ಚೆಕ್ ನೀಡಿದ್ದರು. ಆದರೆ ಚೆಕ್‌ ಬ್ಯಾಂಕ್‌ ನಲ್ಲಿ ಬೌನ್ಸ್‌ ಆಗಿತ್ತು.  ಮೇಲಾಗಿ ಅವರು ಖಾತೆಯನ್ನೇ ಸ್ಥಗಿತಗೊಳಿಸಿದ್ದರು.

ಈ ಬಗ್ಗೆ ವಿಚಾರಿಸಲು ಮನೆಗೆ ಹೋಗಿದ್ದಾಗ ಶಾಸಕರು, ಪತ್ನಿ ಮತ್ತು ಪುತ್ರ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಸಂಜೀವಕುಮಾರ ಅವರ ದೂರಿನಲ್ಲಿ ಉಲ್ಲೇಖಿಸಿದ್ದರು. ಶಾಸಕರು ಮತ್ತು ಅವರ ಕುಟುಂಬದವರು ಬೆದರಿಕೆ ಹಾಕಿದ್ದನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ಅದನ್ನು ಡಿಜಿಟಲ್‌ ಸಾಕ್ಷಿಯಾಗಿ ದೂರಿನ ಜತೆಗೆ ಸಲ್ಲಿಸಿದ್ದರು.

ನಂತರ ಸೆಪ್ಟೆಂಬರ್ 22 ರಂದು ನಿಗದಿತ ಅವಧಿಯೊಳಗೆ ಹಣ ಪಾವತಿಸುವಂತೆ ಕೋರಿ ಶಾಸಕರಿಗೆ ಕಾನೂನು ನೋಟಿಸ್ ನೀಡಲಾಗಿತ್ತು. ಆಗಲೂ ಶರಣು ಸಲಗರ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 27 ರಂದು ಬಸವ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 (ಕೊಲೆ ಯತ್ನ), 314 (ಅಪ್ರಾಮಾಣಿಕ ಆಸ್ತಿ ದುರುಪಯೋಗ), 318 (ವಂಚನೆ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 351 (ಕ್ರಿಮಿನಲ್ ಬೆದರಿಕೆ) ಮತ್ತು 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article