ಉಗ್ರರಿಗೆ ನೆರವು: ಇಡಿ ವಶಕ್ಕೆ ಅಲ್‌ ಫಲಾಹ್ ಗ್ರೂಪ್‌ ಅಧ್ಯಕ್ಷ ಜಾವದ್ ಅಹ್ಮದ್ ಸಿದ್ದಿಕಿ

Most read

ನವದೆಹಲಿ: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿರುವುದಕ್ಕೆ ಸಂಬಂಧಪಟ್ಟ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಲ್‌ ಫಲಾಹ್ ಗ್ರೂಪ್‌ ಅಧ್ಯಕ್ಷ ಜಾವದ್ ಅಹ್ಮದ್ ಸಿದ್ದಿಕಿ ಅವರನ್ನು ದೆಹಲಿಯ ನ್ಯಾಯಾಲಯ 13 ದಿನಗಳ ಅವಧಿಗೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಒಪ್ಪಿಸಿದೆ.

ಸಿದ್ಧಿಕಿಯನ್ನು ಮಂಗಳವಾರ ತಡರಾತ್ರಿ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಶೀತಲ್ ಚೌಧರಿ ಪ್ರಧಾನ್ ಅವರ ನಿವಾಸದಲ್ಲಿ ಹಾಜರುಪಡಿಸಲಾಯಿತು ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಈ ಮಧ್ಯೆ ಆತ ಭಾರತವನ್ನು ತೊರೆದು ಗಲ್ಫ್‌ ಗೆ ಪರಾರಿಯಾಗಲು ಸಿದ್ದತೆ ನಡೆಸಿದ್ದ ಎಂದೂ ತಿಳಿದು ಬಂದಿದೆ.

ನ್ಯಾಯಾಧೀಶೆ ಶೀತಲ್ ಚೌಧರಿ  ಅವರು ಸಿದ್ಧಿಕಿ ಬಂಧಿಸುವಾಗ ಅಕ್ರಮ ಹಣ ವರ್ಗಾವಣೆ ತಡೆ (ಪಿಎಂಎಲ್‌ಎ) ಕಾಯ್ದೆಯ ಸೆ. 19ರ ಅಡಿಯಲ್ಲಿ ಎಲ್ಲಾ ನಿಯಮಗಳನ್ನು ಪಾಲಿಸಲಾಗಿದೆ. ಅಪರಾಧದ ಗಾಂಭೀರ್ಯ ಆಧರಿಸಿ ಆರೋಪಿಯನ್ನು 13 ದಿನಗಳ ಕಾಲ ಇ.ಡಿ ಸುಪರ್ದಿಗೆ ಒಪ್ಪಿಸಲಾಗಿದೆ ಎಂದು ಹೇಳಿದ್ದಾರೆ.

ನವಂಬರ್‌ 10 ರಂದು ದೆಹಲಿಯ ಕೆಂಪು ಕೋಟೆ ಸಮೀಪ ಸಂಭವಿಸಿದ ಐ-20 ಕಾರು ಸ್ಫೋಟ ಕುರಿತು ಇಡಿ ಅದಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದು, ನಿನ್ನೆ ಮಂಗಳವಾರ ಅಲ್ ಫಲಾಹ್ ವಿಶ್ವವಿದ್ಯಾಲಯ, ಅದರ  ಟ್ರಸ್ಟಿಗಳಿಗೆ ಸಂಬಂಧಿಸಿದ 35 ಸ್ಥಳಗಳಲ್ಲಿ ಶೋಧ ನಡೆಸಿದ್ದರು. ಸಿದ್ದಿಕಿ ಮನೆಯಲ್ಲಿ ತಪಾಸಣೆ ನಡೆಸಿದಾಗ 48 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಹಲವಾರು ಮಹತ್ವದ ದಾಖಲೆಗಳನ್ನೂ ಸಂಗ್ರಹಿಸಲಾಗಿದೆ ಏಂದು ಇಡಿ ಮೂಲಗಳು ತಿಳಿಸಿವೆ.

ನವೆಂಬ‌ರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡು 15 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ತನಿಖಾ ಸಂಸ್ಥೆಯ ಹಲವು ತಂಡಗಳು ಸಂಚುಕೋರರ ಬಂಧನಕ್ಕಾಗಿ ಹಲವು ರಾಜ್ಯಗಳಲ್ಲಿ ಶೋಧ ನಡೆಸುತ್ತಿವೆ.

ಜಾವದ್ ಅಹ್ಮದ್ ಸಿದ್ದಿಕಿ ಅವರ ನಿಕಟವರ್ತಿಗಳು ಮತ್ತು ಸಂಬಂಧಿಕರು ಗಲ್ಫ್‌ ನಲ್ಲಿ ವಾಸಿಸುತ್ತಿದ್ದು ಅಲ್ಲಿಗೆ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಇಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

More articles

Latest article