ಕೋಲಾರ: ಶೋಕಿಗಾಗಿ ಮಂಕಿ ಕ್ಯಾಪ್ ಧರಿಸಿ ಸಾವಿರಾರು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳ ಮತ್ತು ಆತನ ಗ್ಯಾಂಗ್ ನ ಸದಸ್ಯರನ್ನು ಕೋಲಾರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಂಕಿ ಕ್ಯಾಪ್ ಧರಿಸಿ ಕಳ್ಳತನ ಮಾಡುತ್ತಿದ್ದರಿಂದ ಈ ಕಳ್ಳನ ಸುಳಿವು ಪತ್ತೆಯಾಗಿರಲಿಲ್ಲ. ಮಂಕಿ ಕ್ಯಾಪ್ ಕಳ್ಳರ ಗ್ಯಾಂಗ್ ನ ನಾಯಕ ರೋಹಿತ್. ಈತನ ಹಿಂಬಾಲಕರಾದ ರಿಯಾನ್, ಪ್ರವೀಣ್ ಕುಮಾರ್, ವಿನೋದ್, ದಾದಾಪೀರ್ ಸೇರಿದಂತೆ ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಒಟ್ಟು ಏಳು ಮಂದಿ ಕಳ್ಳರನ್ನು ಕೋಲಾರ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಕೃತ್ಯಕ್ಕೆ ಬಳಸುತ್ತಿದ್ದ ಮೂರು ಬೈಕ್ಗಳು ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಲಾರದಲ್ಲಿ ಡಿಸೆಂಬರ್ 17 ಮತ್ತು ಜನವರಿ 17 ರ ರಾತ್ರಿ ಟೇಕಲ್ ರಸ್ತೆ, ಎಂ.ಬಿ.ರಸ್ತೆಯಲ್ಲಿನ ಆಧೀಶ್ವರ ಮಾರ್ಕೆಟಿಂಗ್, ಅಪೋಲೋ ಮೆಡಿಕಲ್ಸ್, ಸಲೂನ್, ದಿನಸಿ ಅಂಗಡಿ, ಮೊಬೈಲ್ ಅಂಗಡಿ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿದ್ದಾನೆ. ಈತ ಕಳೆದ ಏಳೆಂಟು ವರ್ಷಗಳಿಂದ ಮಂಕಿಕ್ಯಾಪ್ ಧರಿಸಿ ಬಂದು ಸಿಕ್ಕ ಸಿಕ್ಕ ಅಂಗಡಿಗಳ ಶೆಟರ್ ಮುರಿದು ಸಿಕ್ಕಷ್ಟು ಹಣ ದೋಚಿಕೊಂಡು ಪರಾರಿಯಾಗುತ್ತಿದ್ದ. ಈತನ ಸುಳಿವು ಸಿಗದೆ ಪೊಲೀಸರು ತಲೆ ಬಿಸಿ ಮಾಡಿಕೊಂಡಿದ್ದರು. ಇದೇ ಗ್ಯಾಂಗ್ ಮತ್ತೊಂದು ಕಳ್ಳತನಕ್ಕೆ ತಯಾರಿ ನಡೆಸುತಿದ್ದ ವೇಳೆ ಅನುಮಾನಗೊಂಡು ವಶಕ್ಕೆ ಪಡೆದು ವಿಚಾರಿಸಿದಾಗ ಪೊಲೀಸರಿಗೆ ಖತರ್ನಾಕ್ ಮಂಕಿಕ್ಯಾಪ್ ಕಳ್ಳರ ಗ್ಯಾಂಗ್ ಸಿಕ್ಕಿಬಿದ್ದಿದೆ.
ರೋಹಿತ್ ಸೇರಿದಂತೆ ಎಲ್ಲ ಕಳ್ಳರೂ ಇನ್ನೂ ಚಿಗರು ಮೀಸೆಯ ಹುಡುಗರು. ಕೆಲವರು ಅಪ್ರಾಪ್ತರು ಇದ್ದಾರೆ. ಇವರೆಲ್ಲರಿಗೂ ಹಣ, ಗಾಂಜಾ ಶೋಕಿ ಜೀವನದ ಆಸೆ ತೋರಿಸಿ ತನ್ನೊಂದಿಗೆ ಕಳ್ಳತನಕ್ಕೆ ಬಳಸಿಕೊಳ್ಳುತ್ತಿದ್ದ.
ಅಷ್ಟಕ್ಕೂ ರೋಹಿತ್ ತಂದೆ ನೇಪಾಳಿ. ರೋಹಿತ್ ತನ್ನ 16ನೇ ವಯಸ್ಸಿಗೆ ಕಳ್ಳತನ ಆರಂಭಿಸಿದ್ದ. ಈತ ಬೆಂಗಳೂರಿನ ಸುಧಾಮ ನಗರದ ಸ್ಮಶಾನದಲ್ಲೇ ವಾಸಮಾಡುತ್ತಿದ್ದ. ಚಿಕ್ಕ ಟೆಂಟ್ ಹಾಕಿಕೊಂಡು ಸ್ಮಶಾನದ ಸುತ್ತಲೂ ಬಿಯರ್ ಬಾಟಲ್ ಗಳನ್ನು ಕಟ್ಟಿರುತ್ತಿದ್ದ. ಆಗ ಯಾರಾದರೂ ಬಂದರೆ ಶಬ್ದವಾಗುತ್ತಿತ್ತು. ಕೂಡಲೇ ಅಲ್ಲಿಂದ ರೋಹಿತ್ ಪರಾರಿಯಾಗುತ್ತಿದ್ದ.
ರೋಹಿತ್ ಇದುವರೆಗೂ ಎರಡು ರಾಜ್ಯಗಳ ಆರು ಜಿಲ್ಲೆಗಳಲ್ಲಿ ಸುಮಾರು 1000ಕ್ಕೂ ಹೆಚ್ಚು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿರುವುದಾಗಿ ಪೊಲೀಸರು ಹೇಳಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಬೆಂಗಳೂರು ನಗರ, ರಾಮನಗರ, ತಮಿಳುನಾಡಿನ ಹೊಸೂರು ಪೊಲೀಸರು ಇವನನ್ನು ಹುಡುಕುತ್ತಿದ್ದರು. ಇದೀಗ ಸಿಕ್ಕಿಬಿದ್ದಿದ್ದು ಅಂಗಡಿ ಮಾಲೀಖರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.