ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿ ಜನವರಿ 5ರಂದು ಚಿತ್ರಸಂತೆ ನಡೆಯಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ ಆಯೋಜಿಸುತ್ತಿರುವ 22ನೇ ಚಿತ್ರಸಂತೆ ಇದಾಗಿದೆ. ಜ.5ರಂದು ಸಿಎಂ ಸಿದ್ದರಾಮಯ್ಯ ಅವರು ಚಿತ್ರಸಂತೆ ಉದ್ಘಾಟಿಸಲಿದ್ದಾರೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 9ರವರೆಗೆ ನಡೆಯಲಿದೆ. ಚಿತ್ರಸಂತೆಯಲ್ಲಿ ಭಾಗವಹಿಸಲು 3,177 ಕಲಾವಿದರು ಅರ್ಜಿ ಸಲ್ಲಿಸಿದ್ದು 20 ರಾಜ್ಯಗಳ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶನಗೊಳ್ಳಲಿವೆ. ಈ ಬಾರಿ ಚಿತ್ರ ಸಂತೆಯನ್ನು ಹೆಣ್ಣು ಮಗುವಿಗೆ ಸಮರ್ಪಣೆ ಮಾಡಲಾಗುತ್ತಿದೆ.
ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿಎಲ್ ಶಂಕರ್ ಸುದ್ದಿಗೋಷ್ಟಿಯಲ್ಲಿ ಚಿತ್ರಸಂತೆಯ ವಿವರ ಒದಗಿಸಿದರು. ಚಿತ್ರಸಂತೆ ಕಾರ್ಯಕ್ರಮದ ಅಂಗವಾಗಿ ಜನವರಿ 4 ರಂದು ಪ್ರಶಸ್ತಿ ನೀಡಲಾಗುತ್ತದೆ. ಐವರು ಕಲಾವಿದರಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಚಿವ ಹೆಚ್.ಕೆ ಪಾಟೀಲ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.
ನವೆಂಬರ್ ತಿಂಗಳಲ್ಲೇ ಕರ್ನಾಟಕ ಚಿತ್ರಕಲಾ ಪರಿಷತ್ತು 2025ರ ಚಿತ್ರಸಂತೆಗೆ ಕಲಾವಿದರಿಂದ ಅರ್ಜಿಗಳಿಗೆ ಆಹ್ವಾನಿಸಲಾಗಿತ್ತು. ಕರ್ನಾಟಕ, ಕೇರಳ, ಗೋವಾ, ಮಹಾರಾಷ್ಟ್ರ, ಪಂಜಾಬ್, ಸೇರಿದಂತೆ ವಿವಿಧ ರಾಜ್ಯಗಳ ಕಲಾವಿದರು ಚಿತ್ರಸಂತೆಯಲ್ಲಿ ಭಾಗಿಯಾಗಲು ನೋಂದಣಿ ಮಾಡಿಕೊಂಡಿದ್ದಾರೆ. ಚಿತ್ರಸಂತೆ ಹಿನ್ನೆಲೆ ಜನವರಿ 5 ರಂದು ಕಲಾಭಿಮಾನಿಗಳು ಮತ್ತು ಪ್ರಯಾಣಿಕರು ಸುಲಭವಾಗಿ ಕುಮಾರ ಕೃಪಾ ರಸ್ತೆ ತಲುಪಲು ಮೆಜೆಸ್ಟಿಕ್ ನಿಂದ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ 10 ನಿಮಿಷಗಳಿಗೊಮ್ಮೆ ಬಸ್ ಸಂಚರಿಸಲಿದ್ದು, ಆ ದಿನದಂದು ಬೆಳಿಗ್ಗೆ 5 ರಿಂದ ರಾತ್ರಿ 9 ರವರೆಗೆ ಕಾರ್ಯನಿರ್ವಹಿಸಲಿವೆ. ಟಿಕೆಟ್ ದರ 15 ರೂ. ನಿಗದಿಯಾಗಿದೆ.