ಕೋಲಾರ: ಕೋಲಾರ ತಾಲ್ಲೂಕಿನ ಮುದುವಾಡಿ ಹೊಸಹಳ್ಳಿ ಗ್ರಾಮದಲ್ಲಿ ಕೊರಿಯರ್ ಪಾರ್ಸೆಲ್ ಕೊಡುವ ವಿಚಾರವಾಗಿ ಆರಂಭಗೊಂಡ ಗಲಾಟೆಯು ವಿಕೋಪಕ್ಕೆ ತಿರುಗಿ ಇಬ್ಬರು ಯುವಕರಿಗೆ ಚಾಕುವಿನಿಂದ ತಿವಿಯಲಾಗಿದೆ. ಗ್ರಾಮಸ್ಥರು ಆರೋಪಿಗಳನ್ನು ಹಿಡಿದು ವಿದ್ಯುತ್ ಕಂಬಕ್ಕೆ ಕಟ್ಟಿ ಮನಸೋ ಇಚ್ಛೆ ಥಳಿಸಿದ್ದಾರೆ.
ಮುದುವಾಡಿ ಹೊಸಹಳ್ಳಿ ಗ್ರಾಮದ ಚೇತನ್ ಹಾಗೂ ಯುವರಾಜ್ ಇವರಿಗೆ ಕೋಲಾರದ ಕೀಲುಕೋಟೆ ನಿವಾಸಿ, ಕೊರಿಯರ್ ಬಾಯ್ ಪವನ್ ಹಾಗೂ ಆತನ ಸಹೋದರ ಮೋಹನ್ ಚಾಕುವಿನಿಂದ ಇರಿದಿದ್ದಾರೆ. ಇವರ ಜತೆಗೆ ಬಂದಿದ್ದ ತೊರದೇವಂಡಹಳ್ಳಿ ಗ್ರಾಮದ ಇನ್ನಿಬ್ಬರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ.
ಮುದುವಾಡಿ ಹೊಸಹಳ್ಳಿಯ ಚೇತನ್ ಎಂಬುವರು ಆನ್ಲೈನ್ನಲ್ಲಿ ಡ್ರೈಫ್ರೂಟ್ಸ್ ಆರ್ಡರ್ ಮಾಡಿದ್ದರು. ಇವರಿಗೆ ಬಾನುವಾರ ತಲುಪಲಿದೆ ಎಂದು ಮೊಬೈಲ್ಗೆ ಸಂದೇಶ ಬಂದಿತ್ತು. ಡೆಲಿವರಿ ಬಾಯ್ ಪವನ್ ಎಂಬುವರಿಗೆ ಕರೆ ಮಾಡಿ ವಿಚಾರಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಅತಿರೇಕಕ್ಕೆ ತಿರುಗಿದ ಪರಿಣಾಮ ಪವನ್ ಹಾಗೂ ಆತನ ಸೋದರ ಮೋಹನ್ ಮುದುವಾಡಿ ಹೊಸಹಳ್ಳಿ ಗ್ರಾಮಕ್ಕೆ ತೆರಳಿದ್ದಾರೆ.
ಚೇತನ್ ಹಾಗೂ ಆತನ ಗೆಳೆಯ ಯುವರಾಜ್ ಜತೆ ಜೋರು ಗಲಾಟೆ ನಡೆದಿದ್ದು, ಚಾಕುವಿನಿಂದ ಇರಿಯಲಾಗಿದೆ. ಕೂಡಲೇ ಗ್ರಾಮಸ್ಥರು ಸೇರಿದ್ದರಿಂದ ಸ್ಥಳದಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿತ್ತು. ಕೊರಿಯರ್ ಬಾಯ್ ಪವನ್ ಹಾಗೂ ಮೋಹನ್ ಎಂಬುವರನ್ನು ಹಿಡಿದು ಬಟ್ಟೆ ಬಿಚ್ಚಿ ಕಂಬಕ್ಕೆ ಕಟ್ಟಿ ಹೊಡೆದಿದ್ದಾರೆ. ಗಾಯಾಳುಗಳನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮುದುವಾಡಿ ಗೇಟ್ನಲ್ಲಿ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿ ರಸ್ತೆ ತಡೆ ನಡೆಸಿದರು. ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಕಾಂತರಾಜ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆರೋಪಿಗಳನ್ನು ವಶಕ್ಕೆ ಪಡೆದು, ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ಶಾಂತವಾಯಿತು.