ಬೆಂಗಳೂರು: ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಮಹಾತ್ಮಾ ಗಾಂಧೀಜಿಯವರ ಹೆಸರನ್ನು ಅಳಿಸಿ ಹಾಕಿ ವಿಬಿಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯ ವಿರುದ್ಧ ಪ್ರಬಲವಾಗಿ ಧ್ವನಿ ಎತ್ತುವಂತೆ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿಎಸ್ ಉಗ್ರಪ್ಪ ಪಕ್ಷದ ವಕ್ತಾರರಿಗೆ ಕರೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ವಕ್ತಾರರ ಆಯ್ಕೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಸಂವಿಧಾನದ ಆರ್ಟಿಕಲ್ 51-A ಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಕೊಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಆದರೆ ಬಿಜೆಪಿ ಮುಖಂಡರು ಇದನ್ನು ಕಡೆಗಣಿಸಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಆಪಾದಿಸಿದರು.
ಗಾಂಧೀಜಿಯವರು ರಾಜಕಾರಣಿಯಲ್ಲ, ಅವರು ರಾಜಋಷಿಗಳು. ಆದರೆ ಇಂದು ಗೋಡ್ಸೆವಾದಿಗಳ ಬಲ ಹೆಚ್ಚುತ್ತಿದೆ ಎಂದು ಉಗ್ರಪ್ಪ ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ ವಕ್ತಾರರು ಕೇವಲ ಪಕ್ಷದ ಬಗ್ಗೆ ತಿಳಿದ್ದಿದರೆ ಸಾಲದು, ವಿರೋಧಿಗಳ ಬಗ್ಗೆಯೂ ತಿಳಿದುಕೊಳ್ಳಬೇಕು. ಅವರ ಸಿದ್ಧಾಂತ, ಅವರ ದೌರ್ಬಲ್ಯಗಳ ಬಗ್ಗೆ ಅರಿವಿರಬೇಕು. ಉಡುಪು, ಪ್ರಸ್ತುತಿ, ವಿದ್ವತ್ ಈ ಮೂರು ವಿಷಯಗಳು ವಕ್ತಾರರಿಗೆ ಬಹು ಮುಖ್ಯ ಇದನ್ನು ಎಲ್ಲಾ ವಕ್ತಾರರು ಅರ್ಥ ಮಾಡಿಕೊಳ್ಳಬೇಕು ಎದು ಕಿವಿಮಾತು ಹೇಳಿದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಅರ್.ವಿ. ಸುದರ್ಶನ್ ಮಾತನಾಡಿ ವಕ್ತಾರರು ಮತ್ತು ಕಾರ್ಯಕರ್ತರು ಪಕ್ಷದ ನಿಜವಾದ ಶಕ್ತಿ. ಒಬ್ಬ ಒಳ್ಳೆಯ ವಕ್ತಾರರಾಗಬೇಕೆಂದಿದ್ದಾರೆ ವಿಷಯದ ಬಗ್ಗೆ ತಿಳುವಳಿಕೆ ಅತಿ ಮುಖ್ಯ. ಅದಕ್ಕಾಗಿ ಸರಿಯಾದ ಸಂಶೋಧನೆ ಮಾಡಬೇಕು. ವಿರೋಧಿಗಳ ವೈಫಲ್ಯಗಳನ್ನು ಕುರಿತು ನಾಗರಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಕೆಪಿಸಿಸಿಯ ಮಾಧ್ಯಮದ ವಿಭಾಗದ ಅಧ್ಯಕ್ಷ, ವಿಧಾನಪರಿಷತ್ತಿನ ಸದಸ್ಯ ರಮೇಶ್ ಬಾಬು ಮಾತನಾಡಿ ವಕ್ತಾರರ ಆಯ್ಕೆ ಯಾವ ರೀತಿ ನಡೆಯಲಿದೆ ಎಂದು ವಿವರಿಸಿದರು. ಈ ಸಭೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ದ್ವಾರಕಾನಾಥ್, ವಿಜಯ ಮುಳಗುಂದ್, ವಕ್ತಾರರಾದ ದರ್ಶನ್ ಅವರು ಉಪಸ್ಥಿತರಿದ್ದರು.

