ಬಿಜೆಪಿ, ಸಂಘ ಪರಿವಾರದ ಮೀಸಲಾತಿ ವಿರೋಧಿ ಕ್ರಮಗಳ ವಿರುದ್ಧ ಹೋರಾಟ: ರಾಹುಲ್ ಗಾಂಧಿ

Most read

ನವದೆಹಲಿ: ಬಿಜೆಪಿ ಆರ್ ಎಸ್ ಎಸ್ ಮೀಸಲಾತಿ ವಿರೋಧಿ ಕ್ರಮಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇಂದು ಈ ಕುರಿತು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಯೋಗ್ಯರಲ್ಲ’ ಎಂಬುದು ಹೊಸ ‘ಮನುವಾದ’ ಆಗಿದೆ ಎಂದು ಟೀಕಿಸಿದ್ದಾರೆ. ಎಸ್ ಸಿ, ಎಸ್ ಟಿ ಮತ್ತು ಒಬಿಸಿ ಸಮುದಾಯಗಳ ಅರ್ಹ ಅಭ್ಯರ್ಥಿಗಳನ್ನು ಶಿಕ್ಷಣ ಹಾಗೂ ನಾಯಕತ್ವದಿಂದ ವಂಚಿತರಾಗಿಸಲು ಉದ್ದೇಶಪೂರ್ವಕವಾಗಿ ಅನರ್ಹಗೊಳಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸಂಬಂಧ ಡಾ.ಬಿ.ಆರ್. ಅಂಬೇಡ್ಕರ್ ಹೇಳಿಕೆಯನ್ನು ರಾಹುಲ್ ಉಲ್ಲೇಖಿಸಿದ್ದಾರೆ. ಸಮಾನತೆಗೆ ಶಿಕ್ಷಣವು ದೊಡ್ಡ ಅಸ್ತ್ರವಾಗಿದೆ ಎಂದು ಬಾಬಾ ಸಾಹೇಬರು ಹೇಳಿದ್ದರು. ಆದರೆ ಆ ಅಸ್ತ್ರವನ್ನು ಮುರಿಯಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಪ್ರಯತ್ನಿಸುತ್ತಿದೆ. ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರ ಮೀಸಲು ಹುದ್ದೆಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಮತ್ತು ಸಹಾಯಕ ಪ್ರಾಧ್ಯಾಪಕರ ಮೀಸಲು ಹುದ್ದೆಗಳಲ್ಲಿ ಶೇ 30ಕ್ಕಿಂತ ಹೆಚ್ಚು ಹುದ್ದೆಗಳನ್ನು ‘ನಾಟ್ ಫೌಂಡ್ ಸೂಟೇಬಲ್’ (ಎನ್ ಎಫ್ ಎಸ್) ಎಂದು ಕಾರಣ ನೀಡುತ್ತಾ ಖಾಲಿ ಬಿಡಲಾಗಿದೆ ಎಂದು ಆರೋಪಿಸಿದ್ದಾರೆ.

ಐಐಟಿ, ಕೇಂದ್ರೀಯ ವಿಶ್ವವಿದ್ಯಾಲಯಗಳು ಇದಕ್ಕೆ ಹೊರತಲ್ಲ. ಎಲ್ಲ ಕಡೆಯೂ ಒಂದೇ ರೀತಿಯ ಪಿತೂರಿ ನಡೆಯುತ್ತಿದೆ. ಸಂವಿಧಾನ ಹಾಗೂ ಸಾಮಾಜಿಕ ನ್ಯಾಯದ ಮೇಲೆ ಎನ್ ಎಫ್ ಎಸ್ ದಾಳಿ ನಡೆದಿದೆ ಎಂದು ಗಂಭೀರವಾದ ಆರೋಪ ಮಾಡಿದ್ದಾರೆ. ಇದು ಕೇವಲ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಅಲ್ಲ. ಹಕ್ಕು, ಗೌರವ, ಸಮಾನ ಪಾಲುದಾರಿಕೆಗಾಗಿ ನಡೆಯುವ ಹೋರಾಟ ಎಂದು ಉಲ್ಲೇಖಿಸಿದ್ದಾರೆ.

ನಾನು ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದೊಂದಿಗೆ (ಡಿಯುಎಸ್ ಯು) ಚರ್ಚಿಸಿದ್ದೇನೆ. ನಾವೆಲ್ಲರೂ ಒಗ್ಗಟ್ಟಾಗಿ ಬಿಜೆಪಿ, ಆರ್ ಎಸ್ ಎಸ್ ನ ಮೀಸಲಾತಿ ವಿರೋಧಿ ಕ್ರಮಗಳ ವಿರುದ್ಧ ಸಂವಿಧಾನದ ಶಕ್ತಿಯೊಂದಿಗೆ ಹೋರಾಡಲಿದ್ದೇವೆ ಎಂದು ಅವರು ಪ್ರತಿಪಾದಿಸಿದ್ದಾರೆ.

More articles

Latest article