ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ನಟಿ ಪವಿತ್ರ ಗೌಡ ಸೇರಿದಂತೆ 13 ಮಂದಿ ಆರೋಪಿಗಳು ಈಗ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರಾದ ದರ್ಶನ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಾಗಿನಿಂದ ಕರ್ನಾಟಕವೇ ಬೆಚ್ಚಿ ಬಿದ್ದಿದ್ದು, ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಪತಿಯ ಬಂಧನ ಕುರಿತು ಯಾವುದೇ ಹೇಳಿಕೆಯನ್ನು ನೀಡದೇ ಇದ್ದರೂ ತಮ್ಮ ಇನ್ಸ್ಟಾಗ್ರಾಂ ನಲ್ಲಿ ದರ್ಶನ್ ಅವರೊಂದಿಗಿದ್ದ ಭಾವಚಿತ್ರದ ಡಿಪಿಯನ್ನು ತೆಗೆದುಹಾಕಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ನೀಡಿಲ್ಲ.
ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಗಳಿಗೆ 15 ವರ್ಷ ವಯಸ್ಸಿನ ವಿನೀಶ್ ಎಂಬ ಪುತ್ರನಿದ್ದು, ನಡೆಯುತ್ತಿರುವ ಘಟನಾವಳಿಗಳಿಂದ ನೊಂದು ಇನ್ಸ್ಟಾಗ್ರಾಂ ಸ್ಟೋರಿ ಒಂದನ್ನು ಹಾಕಿದ್ದಾರೆ.
ತಂದೆಯ ಬಂಧನ ಮತ್ತು ಅದರ ನಂತರದ ಬೆಳವಣಿಗೆಗಳಿಂದ ನೊಂದಿರುವ ಬಾಲಕ ತನಗಿನ್ನೂ ಹದಿನೈದು ವರ್ಷ ಎಂದು ಹೇಳುತ್ತಲೇ ನನ್ನ ತಂದೆಯ ಬಗ್ಗೆ ಕೆಟ್ಟದಾಗಿ, ಅಸಭ್ಯವಾಗಿ ನಿಂದಿಸುತ್ತಿರುವವರಿಗೆ ಧನ್ಯವಾದ. ಈ ಕಷ್ಟದ ಸಂದರ್ಭದಲ್ಲಿ ನನ್ನ ತಂದೆ ತಾಯಿಗೆ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪಟ್ಟಣಗೆರೆಯ ಶೆಡ್ ಒಂದರಲ್ಲಿ ಜೂನ್ 8ರಂದು ನಡೆದ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಎಂಬಾತನನ್ನು ದಾರುಣವಾಗಿ ಹಲ್ಲೆ ಮಾಡಿ ಕೊಲ್ಲಲಾಗಿತ್ತು. ನಂತರ ಮೃತದೇಹವನ್ನು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಸುಮನಹಳ್ಳಿ ರಾಜಕಾಲುವೆ ಬಳಿ ಎಸೆಯಲಾಗಿತ್ತು. ಮೃತ ದೇಹದ ಕುರಿತು ಮಾಹಿತಿ ಪಡೆದ ಪೊಲೀಸರು ತನಿಖೆ ಆರಂಭಿಸಿ ಈ ಕೊಲೆಯಲ್ಲಿ ದರ್ಶನ್ ಪಾತ್ರ ಇರುವುದನ್ನು ಕಂಡುಹಿಡಿದಿದ್ದರು.
ನಂತರ ಚಿತ್ರನಟ ದರ್ಶನ್, ಆತನ ಗೆಳತಿ ಪವಿತ್ರ ಗೌಡ ಸೇರಿದಂತೆ 13 ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪೊಲೀಸರ ವಿನಂತಿಯ ಮೇರೆಗೆ ನ್ಯಾಯಾಲಯವು ಎಲ್ಲ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದ್ದು, ದರ್ಶನ್ ಮತ್ತು ಸಂಗಡಿಗರ ವಿಚಾರಣೆ ಸತತ ಮೂರನೇ ದಿನವೂ ನಡೆಯುತ್ತಿದೆ.