ಕೇಂದ್ರ ಬಜೆಟ್ ವಿರೋಧಿಸಿ ವಿಪಕ್ಷ INDIA ಮೈತ್ರಿಕೂಟ ಸಂಸತ್ ನಲ್ಲಿ ಸಾಲು ಸಾಲು ಆರೋಪಗಳನ್ನು ಮಾಡುತ್ತಿದೆ. ಇದರ ನಡುವೆಯೇ ಸುದೀರ್ಘ 56 ನಿಮಿಷ ಮಾತನಾಡಿದ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ರಾಷ್ಟ್ರದ ಸ್ವಾಸ್ಥ್ಯವನ್ನು ಪಣಕ್ಕಿಟ್ಟು ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ರಾಜಕೀಯ ಉಳಿವಿಗಾಗಿ ಹೂಡಿಕೆ ಮಾಡುತ್ತಿರುವುದು ದುರದೃಷ್ಟಕರ. ಮುಂದೆ ದೊಡ್ಡ ರಾಜಕೀಯ ಬಿಕ್ಕಟ್ಟು ಎದುರಾಗಬಹುದು ನಿಮ್ಮ ಸೀಟ್ ಬೆಲ್ಟ್‌ಗಳನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ ಎಂದು ಮೋದಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಬಜೆಟ್ ದೇಶದ ಜನರಿಗೆ ದ್ರೋಹವನ್ನೆಸಗಿದೆ ಎಂದು ಬಣ್ಣಿಸಿರುವ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ, ದೇಶದ ಬಡವರು, ಮಹಿಳೆಯರು, ದಲಿತರು ಮತ್ತು ಮುಸ್ಲಿಮರು ಈ ಮೈತ್ರಿ ರಾಜಕೀಯದಿಂದಾಗಿ ನೊಂದಿದ್ದಾರೆ. ಬಿಜೆಪಿ ನಾಯಕ ಸುವೇಂದು ಅಧಿಕಾರಿಯವರು ಹೇಳುವಂತೆ “ನಮ್ಮನ್ನು ಬೆಂಬಲಿಸುವವರೊಂದಿಗೆ ನಾವು ಇದ್ದೇವೆ” ಎಂಬ ನೀತಿಯನ್ನು ಕೇಂದ್ರ ಬಿಜೆಪಿ ಸರ್ಕಾರ ಅನುಸರಿಸಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕಾಲ ಬದಲಾಗುತ್ತೆ ಎಂಬ ಸಂದೇಶವನ್ನು ದೇಶದ ಜನರು ಈ ಚುನಾವಣೆ ತೀರ್ಪಿನ ಮೂಲಕ ಸ್ಪಷ್ಟಪಡಿಸಿದ್ದಾರೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಇಂತಹ ದುರಹಂಕಾರಿ ಆಡಳಿತ, ಹೊಡೆದಾಳುವ ರಾಜಕೀಯ ಮತ್ತು ಪೊಳ್ಳು ಭರವಸೆಗಳನ್ನು ನಾವು ಒಪ್ಪುವುದಿಲ್ಲ ಎಂಬ ಸಂದೇಶವನ್ನು ದೇಶದ ಜನ ಜೋರಾಗಿ ಕೂಗಿ ಹೇಳಿದ್ದಾರೆ ಎಂದು ವಾಕ್ಸಮರ ನಡೆಸಿದರು.
ನೋಟು ಅಮಾನ್ಯೀಕರಣದ ಬಗ್ಗೆ ಉಲ್ಲೇಖಿಸಿ ಮಾತನಾಡಿದ ಅಭಿಷೇಕ್ ಬ್ಯಾನರ್ಜಿ, ಕಪ್ಪುಹಣ ಹೊರತರಲು ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸಲು ಸರ್ಕಾರ ವಿಫಲವಾಗಿದೆ ಎಂದು ಹೇಳಿದರು. ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್ ಓಂ ಬಿರ್ಲಾ, 2016ರಲ್ಲಿ ಆದ ಘಟನೆಗಳನ್ನುಈಗ ಯಾಕೆ ಚರ್ಚೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಅಭಿಷೇಕ್ ಬ್ಯಾನರ್ಜಿ, ವಿರೋಧವನ್ನು ಎದುರಿಸಲು ಬಿಜೆಪಿಯು 50 ವರ್ಷದ ಹಿಂದೆ ನಡೆದ ತುರ್ತು ಪರಿಸ್ಥಿತಿ & ನೆಹರೂ ಬಗ್ಗೆ ಮಾತನಾಡುವಾಗ ಏಕೆ ನಿಲ್ಲಿಸಲಿಲ್ಲ ಎಂದು ಸ್ಪೀಕರ್ ಅವರಿಗೆ ಪ್ರಶ್ನಿಸಿ ಬೆವರಿಳಿಸಿದ ಘಟನೆ ನಡೆದಿದೆ.
ತಮ್ಮ ಭಾಷಣವನ್ನು ಕೊನೆಗೊಳಿಸುತ್ತಾ, ಪ್ರಧಾನಿ ನರೇಂದ್ರ ಮೋದಿ ಅವರು ಎನ್‌ಡಿಎ ಸಮ್ಮಿಶ್ರ ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ, ಅದು ಸ್ಫೋಟಗೊಳ್ಳಲು ಕಾಯುತ್ತಿದೆ. ದೇಶದ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದಕ್ಕಿಂತ, ರಾಷ್ಟ್ರದ ಸ್ವಾಸ್ಥ್ಯವನ್ನು ಪಣಕ್ಕಿಟ್ಟು ಮೋದಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ರಾಜಕೀಯ ಉಳಿವಿಗಾಗಿ ಹೂಡಿಕೆ ಮಾಡುತ್ತಿರುವುದು ದುರದೃಷ್ಟಕರ. ಮುಂದೆ ದೊಡ್ಡ ರಾಜಕೀಯ ಬಿಕ್ಕಟ್ಟು ಎದುರಾಗಬಹುದು ನಿಮ್ಮ ಸೀಟ್ ಬೆಲ್ಟ್‌ಗಳನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ ಎಂದು ಮೋದಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.