ನವದೆಹಲಿ : ಪ್ರತಿಭಟನಾ ನಿರತ ರೈತರು ‘ದೆಹಲಿ ಚಲೋ’ ಆಂದೋಲನವನ್ನು ಮುಂದುವರಿಸುವುದಾಗಿ ಇಂದು ಘೋಷಿಸಿದ್ದಾರೆ. ಆದ್ದರಿಂದ ದೆಹಲಿ ಪೊಲೀಸರು ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಟಿಕ್ರಿ, ಸಿಂಘು ಮತ್ತು ಗಾಜಿಪುರ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಕಟ್ಟುನಿಟ್ಟಿನ ಕಟ್ಟೆಚ್ಚರವನ್ನು ತನ್ನ ಸಿಬ್ಬಂದಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಭಾರೀ ನಿಯೋಜನೆಯನ್ನು ದೆಹಲಿ ಪೊಲೀಸರು ಮಾಡಿದ್ದಾರೆ. ದೆಹಲಿಯ ಹಲವು ಮುಖ್ಯರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಆಗಬಹುದು ಮತ್ತು ಪ್ರಯಾಣಿಕರು ಸಂಚಾರ ದಟ್ಟಣೆಯನ್ನು ಎದುರಿಸಬಹುದು ಎಂದು ದೆಹಲಲಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ದೆಹಲಿ ಮತ್ತು ಹರಿಯಾಣ ಕ್ರಮವಾಗಿ ಟಿಕ್ರಿ ಮತ್ತು ಸಿಂಘು ಎರಡು ಗಡಿಗಳಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳ ನಿಯೋಜನೆ ಮಾಡಲಾಗಿದೆ. ಆ ಗಡಿಗಳಲ್ಲಿ ಕಾಂಕ್ರೀಟ್ ಗೋಡೆಗಳು, ಕಬ್ಬಿಣದ ಮೊಳೆಗಳ ಹಾಗು ಬಹು-ಪದರದ ಬ್ಯಾರಿಕೇಡ್‌ಗಳೊಂದಿಗೆ ರೈತರಿಗೆ ತಡೆಯೊಡ್ಡಲಾಗಿದೆ. ಒಬ್ಬ ಪ್ರತಿಭಟನ ನಿರತ ಅಥವಾ ಒಂದು ವಾಹನವು ದೆಹಲಿಗೆ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ.
ಈಗಾಗಲೇ ದೆಹಲಿ ಪೊಲೀಸರು 30,000 ಅಶ್ರುವಾಯು ಶೆಲ್‌ಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ದ್ವಿದಳ ಧಾನ್ಯಗಳು, ಮೆಕ್ಕೆಜೋಳ ಮತ್ತು ಹತ್ತಿ ಬೆಳೆಗಳನ್ನು ಸರ್ಕಾರಿ ಸಂಸ್ಥೆಗಳ ಮೂಲಕ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಐದು ವರ್ಷಗಳವರೆಗೆ ಖರೀದಿಸುವ ಕೇಂದ್ರದ ಪ್ರಸ್ತಾವನೆಯನ್ನು ಪ್ರತಿಭಟನಾನಿರತ ರೈತರು ತಿರಸ್ಕರಿಸಿದ ನಂತರ ಈ ಕ್ರಮವನ್ನು ಕೈಗೊಂಡರು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ “ದೆಹಲಿ ಚಲೋ” ಮೆರವಣಿಗೆಯನ್ನು ಮುನ್ನಡೆಸುತ್ತೆವೆ ಎಂದು ಮತ್ತೋಮ್ಮೆ ಕರೆಕೊಟ್ಟಿದ್ದಾರೆ.