ಬೆಂಗಳೂರಿನ ಆರ್‌ ಆರ್‌ ನಗರದಲ್ಲಿ ಇಂದು ಮತ್ತು ನಾಳೆ ರೈತಸಂತೆ; ರೈತರಿಂದ ನೇರವಾಗಿ ಖರೀದಿಗೆ ಅವಕಾಶ

Most read

ಬೆಂಗಳೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದ ಐಡಿಯಲ್‌ ಹೋಮ್ಸ್‌ ಲೇಔಟ್‌ ನಲ್ಲಿರುವ ಮುನಿವೆಂಕಟಯ್ಯ ಸ್ಮಾರಕ ಬಯಲು ರಂಗಮಂದಿರದಲ್ಲಿ ಇಂದು ಮತ್ತು ನಾಳೆ ಎರಡು ದಿನಗಳ ರೈತಸಂತೆ ನಡೆಯುತ್ತಿದೆ. ವಿವಿಧ ಜಿಲ್ಲೆಗಳ ರೈತರೇ ನೇರವಾಗಿ ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

ಕೃಷಿ ಉತ್ಪನ್ನಗಳ ಬೆಲೆ ಕುಸಿಯುತ್ತಿದ್ದು, ರೈತರು ಸಂಕಷ್ಟದಲ್ಲಿದ್ದಾರೆ. ಅವರಲ್ಲಿ ವಿಶ್ವಾಸ ಮೂಡಿಸಲು ರೈತಸಂತೆಯನ್ನು ಹಮ್ಮಿಕೊಳ್ಳಲಾಗಿದೆ. ಇಲ್ಲಿ ರೈತರು ತಾವು ಬೆಳೆದ ಉತ್ಪನ್ನಗಳಿಗೆ ತಾವೇ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಿದ್ದಾರೆ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ತಿಳಿಸಿದ್ದಾರೆ.

ಈ ಹಿಂದೆ ಮೊದಲ ಬಾರಿಗೆ ಆರ್‌ ಆರ್‌ ನಗರದಲ್ಲಿ ಇದೇ ತಿಂಗಳ ಏಪ್ರಿಲ್‌ 12 ರಿಂದ 14ರವರೆಗೆ ರೈತಸಂತೆ ನಡೆದಿತ್ತು. ಇದರಿಂದ ಉತ್ತೇಜನಗೊಂಡ ಸಂಘಟಕರು ಇನ್ನು ಮುಂದೆ ನಿಯಮಿತವಾಗಿ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ರೈತಸಂತೆ ನಡೆಸಲು ನಿರ್ಧರಿಸಿದ್ದಾರೆ. ಇಲ್ಲಿ ಮಧ್ಯವರ್ತಿಗಳ ಹಾವಳಿ ಇರುವುದಿಲ್ಲ. ರೈತರೇ ನೇರವಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ.

ರಂಗಕರ್ಮಿ ಅಕ್ಷತಾ ಪಾಂಡವಪುರ ಅವರಿಂದ ಇಂದು ಸಂಜೆ ʼಅಡುಗೆ ಮಾತುʼ ಎಂಬ ನಾಟಕ ಪ್ರದರ್ಶನ ನಡೆಯಲಿದೆ. ಮೈಸೂರು, ಹಾಸನ, ತುಮಕೂರು, ಚಾಮರಾಜನಗರ, ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ ಜಿಲ್ಲೆಗಳಿಂದ ರೈತರು ಆಗಮಿಸುತ್ತಿದ್ದಾರೆ. ವಿವಿಧ ರೀತಿಯ ಕಾಳುಗಳು, ತರಕಾರಿ, ಹಣ್ಣು, ಜೇನು ತುಪ್ಪ, ಅಡುಗೆ ಎಣ್ಣೆ ಮಾರಾಟವಾಗುತ್ತಿದೆ. ಹಳಸಿನ ಹಣ್ಣು ಮತ್ತು ಮಾವಿನ ಹಣ್ಣಿಗೆ ಬೇಡಿಕೆ ಹೆಚ್ಚಿದೆ.

More articles

Latest article