ಖ್ಯಾತ ಪರಿಸರ ತಜ್ಞ, ವಿಜ್ಞಾನಿ ಮಾಧವ ಗಾಡ್ಗೀಳ್ ನಿಧನ; ಗಣ್ಯರ ಕಂಬನಿ

Most read

ನವದೆಹಲಿ: ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ಕಳೆದ ರಾತ್ರಿ ಪುಣೆಯಲ್ಲಿ ನಿಧನರಾಗಿದ್ದಾರೆ. . 83 ವರ್ಷದ ಅವರು ಕೆಲವು ತಿಂಗಳಿನಿಂದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು. ಇಂದು ಸಂಜೆ ಪುಣೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮಾಧವ ಗಾಡ್ಗೀಳ್ ಅವರು ಪಶ್ಚಿಮ ಘಟ್ಟ ಹಾಗೂ ಪರಿಸರ ಸಂರಕ್ಷಣೆಗೆ ಸಾಕಷ್ಟು ಶ್ರಮಿಸಿದ್ದರು. ಅವರು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. 2011 ರಲ್ಲಿ, ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲು ಶಿಫಾರಸು ಮಾಡಿದ್ದರು. ಇವರು ಅಧ್ಯಯನ ನಡೆಸಿ ತಯಾರಿಸಿದ್ದ ವರದಿಯನ್ನು ಗಾಡ್ಗೀಳ್‌ ಆಯೋಗದ ವರದಿ ಎಂದೇ ಹೆಸರುವಾಸಿಯಾಗಿತ್ತು.

1942 ಮೇ 24 ರಂದು ಪುಣೆಯಲ್ಲಿ ಜನಿಸಿದ ಗಾಡ್ಗೀಳ್ ಅವರು ಪುಣೆಯ ಫರ್ಗುಸನ್ ಕಾಲೇಜಿನಿಂದ ಬಿಎಸ್ಸಿ ಪದವಿ ಪಡೆದು ನಂತರ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ಸಿ , 1969 ರಲ್ಲಿ ಹಾರ್ವರ್ಡ್‌ನಿಂದ ಜೀವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.

1971 ರಲ್ಲಿ ಭಾರತಕ್ಕೆ ಮರಳಿದ ಅವರು 1973 ರಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯನ್ನು ಸೇರಿದ್ದರು. 2004 ರಲ್ಲಿ ಐಐಎಸ್‌ ಸಿ ಅಧ್ಯಕ್ಷರಾಗಿಯೂ ಗಮನ ಸೆಳೆದಿದ್ದರು.

ಪರಿಸರ ಶಾಸ್ತ್ರಜ್ಞ, ಬರಹಗಾರ ಹಾಗೂ ಅಂಕಣಕಾರರಾಗಿಯೂ ಅವರು ಗುರುತಿಸಿಕೊಂಡಿದ್ದರು.  ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಮಂಡಳಿಯ ಸದಸ್ಯರಾಗಿದ್ದರು.  1981 ರಲ್ಲಿ ಅವರಿಗೆ ಪದ್ಮಶ್ರೀ , 2006 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.  2024 ರಲ್ಲಿ ಚಾಂಪಿಯನ್ಸ್ ಆಫ್ ದಿ ಅರ್ಥ್ ಪ್ರಶಸ್ತಿಗೆ ಭಾಜನರಾಗಿದ್ದರು.

ಇವರ ನಿಧನಕ್ಕೆ ದೇಶದ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

More articles

Latest article