ಕೋಲಾರ: ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಮಹಿಳೆಯರ ಸ್ವಾವಲಂಭಿ ಬದುಕಿಗೆ ಒಂದಷ್ಟು ಚೈತನ್ಯ ತುಂಬುತ್ತಿದ್ದ ಕೋಲಾರ ಚಿಕ್ಕಬಳ್ಳಾಪುರ ಸಹಕಾರಿ ಬ್ಯಾಂಕ್ ರಾಜಕೀಯ ಮೇಲಾಟಕ್ಕೆ ಸಿಲುಕಿ ಇತ್ತ ಚುನಾವಣೆಯೂ ನಡೆಸಲಾಗದೇ ಅತ್ತ ಮಹಿಳೆಯರಿಗೆ ಸಾಲವನ್ನೂ ನೀಡಲಾಗದ ಸ್ಥಿತಿಗೆ ಬಂದು ನಿಂತಿದೆ. ಇದರ ಬೆನ್ನ ಹಿಂದೆಯೇ ಶ್ರೀನಿವಾಸಪುರ ತಾಲ್ಲೂಕು ರಾಯಲ್ಪಾಡು ಪೋಲೀಸು ಠಾಣೆಯಲ್ಲಿ ಬೇನಾಮಿ ಕಡತಗಳನ್ನು ಸೃಷ್ಟಿಸಿ ಐದು ಮಹಿಳಾ ಸಂಘಗಳ ಹೆಸರಿನಲ್ಲಿ ಸಾಲ ಪಡೆಯಲಾಗಿದೆಯೆಂದು ಆರೋಪಿಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಸೇರಿದಂತೆ ನಾಲ್ವರ ವಿರುದ್ಧ ದೂರು ದಾಖಲಾಗಿದೆ.
ಸುಣಕಲ್ಲು ಪಾರ್ವತಮ್ಮ ಮತ್ತಿತರ ಮಹಿಳೆಯರು ದೂರು ಸಲ್ಲಿಸಿದಾಗ ಈ ವಂಚನೆ ಬೆಳಕಿಗೆ ಬಂದಿದೆ. ನಮ್ಮ ಕಾಂಚನಾ ಸ್ವ ಸಹಾಯ ಸಂಘದಿಂದ ಈ ಹಿಂದೆ ಪಡೆದಿದ್ದ ಸಾಲವನ್ನು ತೀರಿಸಿದ ನಂತರ ಮತ್ತೆ ಸಾಲ ಕೇಳಲು ಹೋದಾಗ ನಿಮ್ಮ ಸಂಘದ ಹೆಸರಿನಲ್ಲಿ 2 ನೇ ಸಾಲವನ್ನೂ ನೀಡಲಾಗಿದೆಯೆಂದು ತಿಳಿಸಿರುತ್ತಾರೆ. ಕೋಲಾರ ಡಿಸಿಸಿ ಬ್ಯಾಂಕ್ ನಲ್ಲಿ ಈ ಬಗ್ಗೆ ವಿಚಾರಿಸಿದಾಗ ಅಲ್ಲಿಯೂ ಅದೇ ಉತ್ತರ ನೀಡಿರುತ್ತಾರೆ. ಈ ಹಿನ್ನಲೆಯಲ್ಲಿ ಕಾಂಚನಾ ಸ್ವ ಸಹಾಯ ಸಂಘದ ಹಸರಿನಲ್ಲಿ ಅಕ್ರಮವಾಗಿ ಸಾಲ ಪಡೆದ ಆರೋಪದಡಿಯಲ್ಲಿ ಡಿ ಸಿ ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡˌ ಶ್ರೀನಿವಾಸಪುರ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸ್ ಮತ್ತು ರಾಯಲ್ಪಾಡು ಬ್ಯಾಂಕ್ ನ ಸಿಇಒ ನಾರಾಯಣಸ್ವಾಮಿ ಹಾಗೂ ಮಾಜಿ ಸಿಇಒ ವೆಂಕಟಮುನಿಯಪ್ಪ ನವರ ವಿರುದ್ದ ದೂರು ದಾಖಲಿಸಲಾಗಿದೆ ಎಂದು ಸುಣಕಲ್ಲು ಪಾರ್ವತಮ್ಮ ತಿಳಿಸಿದ್ದಾರೆ.
ಈ ವ್ಯಕ್ತಿಗಳು ತಮ್ಮ ಪ್ರಬಾವವನ್ನು ಬಳಸಿ ಐದು ಮಹಿಳಾ ಸಂಘದ ಹೆಸರಿನಲ್ಲಿ ಸುಳ್ಳು ಕಡತ ಸೃಷ್ಟಿಸಿ ಸುಮಾರು 1.75 ಕೋಟಿ ರೂ. ಗಳನ್ನು ಸಾಲ ಪಡೆದು ಬ್ಯಾಂಕ್ ಗೆ ವಂಚಿಸಿದ್ದಾರೆಂದು ಆರೋಪ ಕೇಳಿ ಬಂದಿದೆ. ಸೂಕ್ತ ತನಿಖೆ ನಡೆದರೆ ಸತ್ಯಾಂಶ ಹೊರಬರಲಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.