2013ರ ಚುನಾವಣೆಯಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ಸ್ಪರ್ಧಿಸಿದ್ದ ಮುಳಬಾಗಲು ಮಾಜಿ ಶಾಸಕ ಜಿ.ಮಂಜುನಾಥ (ಈಗ ಕೋಲಾರದ ಹಾಲಿ ಶಾಸಕರಾಗಿದ್ದಾರೆ) ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಮಂಜುನಾಥ ಅವರು ಬುಡಗ ಜಂಗಮ ಜಾತಿಗೆ ಸೇರಿದವರಲ್ಲ ಎಂದು ಡಿಸಿವಿಸಿ 2021ರ ಅಕ್ಟೋಬರ್ 27ರಂದು ಸಲ್ಲಿಸಿದ್ದ ವರದಿಯಲ್ಲಿನ ಅಂಶಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ, “ಅರ್ಜಿದಾರರು ಸುಳ್ಳು ಜಾತಿ ಪ್ರಮಾಣ ಪತ್ರದ ಮೇಲೆ ಚುನಾವಣೆಗೆ ಸ್ಪರ್ಧಿಸಿದ್ದು, ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಗೆ ಮೀಸಲಾದ ಕ್ಷೇತ್ರವನ್ನು ಕಸಿದುಕೊಂಡು ಶಾಸಕರೂ ಆಗಿರುವುದು ಸ್ಪಷ್ಟ ಪ್ರಕರಣವಾಗಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಹೇಳಿದ್ದಾರೆ.
ಬುಡಗ ಜಂಗಮ ಜಾತಿಗೆ ಸೇರಿದವರು ಎಂದು ಸಾಬೀತುಪಡಿಸಲು ಅರ್ಜಿದಾರರಿಂದ ಯಾವುದೇ ದಾಖಲೆಗಳಿಲ್ಲ ಎಂದು ನ್ಯಾಯಾಲಯ ಹೇಳಿದೆ.
2012ರ ಏಪ್ರಿಲ್ 3ರಂದು ತಹಶೀಲ್ದಾರ್ ನೀಡಿದ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ಮಂಜುನಾಥ ಅವರು ಬುಡಗ ಜಂಗಮ ಪರಿಶಿಷ್ಟ ಜಾತಿಗೆ ಸೇರಿದವರೆಂದು 2013ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದ ಮುಳಬಾಗಲು ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
2018ರಲ್ಲಿ ಅರ್ಜಿದಾರರು ಬುಡಗ ಜಂಗಮ ಜಾತಿಗೆ ಸೇರಿದವರಲ್ಲ ಬದಲಿಗೆ ಬೈರಾಗಿ ಜಾತಿಗೆ ಸೇರಿದವರು ಎಂದು ಹೈಕೋರ್ಟ್ ನೀಡಿದ್ದ ಆದೇಶವನ್ನು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊತ್ತೂರು ಜಿ ಮಂಜುನಾಥ್ ಅವರು 2023ರಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.