ಡಾ. ಅಂಬೇಡ್ಕರ್ ಪ್ರತಿಮೆಗೆ ಅವಮಾನ; ಫೇಕ್ ವಿಡಿಯೋ ಹರಿದಾಟ

Most read

ಕಲಬುರಗಿ ಜಿಲ್ಲೆ ಕೋಟನೂರು (ಡಿ) ಗ್ರಾಮದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ದಲಿತ ಸಂಘಟನೆಗಳಿಂದ ನಡೆದ ಪ್ರತಿಭಟನೆಯ ಕುರಿತಾಗಿ ಕೆಲವು ಫೇಕ್ ವಿಡಿಯೋಗಳು ಹರಿದಾಡುತ್ತಿವೆ. ಘಟನೆಯ ನಂತರ ನಗರದಲ್ಲಿ ಉಂಟಾದ ಉದ್ವಿಘ್ನತೆಯನ್ನು ತಿಳಿಗೊಳಿಸಲು ಪೊಲೀಸರು ಮಂಗಳವಾರ ಸಂಜೆಯೇ ಕರ್ಫ್ಯೂ ಜಾರಿಗೊಳಿಸಿದ್ದರು. ತದನಂತರ ನಗರ ಸಹಜಸ್ಥಿತಿಗೆ ಮರಳಿತ್ತು.

ಆದರೆ ಕೆಲ ಕಿಡಿಗೇಡಿಗಳು, ಎಲ್ಲೋ ನಡೆದ ಘಟನೆಗಳನ್ನು ಕಲಬುರಗಿ ಘಟನೆಗೆ ತಳಕುಮಾಡಿದ ವಿಡಿಯೋಗಳನ್ನು ಹರಿಯಬಿಡುತ್ತಿದ್ದಾರೆ. ಡಾ. ಅಂಬೇಡ್ಕರ್ ಪ್ರತಿಮೆ ವಿರೂಪಗೊಳಿಸಿದ ಬೆನ್ನಲ್ಲೇ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿದ್ದಾರೆನ್ನುವಂತೆ ಹಾಗೂ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ರಾಮಭಕ್ತರು ಹಮ್ಮಿಕೊಂಡ ಮೆರವಣಿಗೆ ವೇಳೆ ದಲಿತರು ಕಲ್ಲು ತೂರಾಟ ಮಾಡಿದ್ದಾರೆ ಎನ್ನುವಂತೆ ವೀಡಿಯೋಗಳನ್ನು ಎಡಿಟ್ ಮಾಡಿ ಹರಿಯಬಿಡಲಾಗುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಉದ್ವಿಗ್ನಗೊಳ್ಳುವ ಆತಂಕವನ್ನು ಕೆಲ ಹೋರಾಟಗಾರರು ವ್ಯಕ್ತಪಡಿಸಿದ್ದಾರೆ.

ಈ ಕುರಿತು ಕನ್ನಡ ಪ್ಲಾನೆಟ್.ಕಾಮ್ ಗೆ ಪ್ರತಿಕ್ರಿಯೆ ನೀಡಿರುವ ದಲಿತ ಸಂಘಟನೆ ಮುಖಂಡ ಮಹೇಶ ಕಾಶಿ ಅವರು, “ಘಟನೆ ನಡೆಯುತ್ತಿದ್ದಂತೆ ನಗರದಲ್ಲಿ ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಂಡಿದೆ. ಜಿಲ್ಲೆಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆಯವರ ಹೆಸರು ಕೆಡಿಸಲು ಕಿಡಿಗೇಡಿಗಳು ಮಾಡಿರುವ ಫೇಕ್ ವಿಡೀಯೋಗಳು ಇವು. ಈ ವಿಡೀಯೋದಲ್ಲಿ ಚಿತ್ರೀಕರಣಗೊಂಡ ಯಾವ ಘಟನೆಯೂ ಕಲಬುರಗಿಯಲ್ಲಿ ನಡೆದಿಲ್ಲ. ಡಾ. ಅಂಬೇಡ್ಕರ್ ಅವರಿಗೆ ಅವಮಾನವಾದ ಹಿನ್ನೆಲೆಯಲ್ಲಿ ದಲಿತ ಸಂಘಟನೆಗಳಿಂದ ನಿನ್ನೆ ದಿನ ಪ್ರತಿಭಟನೆಗಳು ನಡೆದಿದ್ದು ನಿಜ. ಸಂಜೆಯಷ್ಟರಲ್ಲಿ ಪರಿಸ್ಥಿತಿ ಹದಬಸ್ತಿಗೆ ತರಲು 144 ಸೆಕ್ಷನ್ ಜಾರಿಗೆ ತರಲಾಗಿತ್ತು. ಇಂದು ದಲಿತ ಸಂಘಟನೆಗಳಿಂದ ಶಾಂತಿಯುತ ಬಂದ್ ಗೆ ಕರೆ ನೀಡಿರುವುದು ಬಿಟ್ಟರೆ ಯಾವ ಅಹಿತಕರ ಘಟನೆ ನಡೆದಿಲ್ಲ. ಇಂತಹ ಸುಳ್ಳು ಸುದ್ದಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಜಿಲ್ಲೆಯ ಹೆಸರು ಹಾಳಾಗಲು ಬಿಡಬಾರದು” ಎಂದು ಮನವಿ ಮಾಡಿದ್ದಾರೆ.

More articles

Latest article