ಬೆಂಗಳೂರು: ವಾರ್ತಾಪತ್ರಿಕೆಯನ್ನೇ ಹೋಲುವ ನಕಲಿ ಸುದ್ದಿ ತುಣುಕೊಂದನ್ನು ಸೃಷ್ಟಿಸಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಕುಕೃತ್ಯದಲ್ಲಿ ಭಾಗಿಯಾದ ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್, ವಿಜಯ್ ಹೆರಗು ಮುಂತಾದ ಕಿಡಿಗೇಡಿಗಳ ವಿರುದ್ಧ ದೂರು ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ.
ದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂಬಂತೆ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಸುದ್ದಿ ಪತ್ರಿಕಾ ತುಣುಕು ಹಂಚಿಕೊಂಡು, ಕೋಮುಸಾಮರಸ್ಯಕ್ಕೆ ಧಕ್ಕೆ ತಂದ ಏಳು ಜನ ಕಿಡಿಗೇಡಿಗಳ ವಿರುದ್ಧ ಬೆಂಗಳೂರು ಪಶ್ಚಿಮ ಸಿಇ ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ಆರೋಪಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ-2000ದ ಅಡಿಯಲ್ಲಿ ವಿವಿಧ ಐಪಿಸಿ ಸೆಕ್ಷನ್ ಗಳನ್ನೂ ಅನ್ವಯಿಸಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು ನಿವಾಸಿ ಹರೀಶ್ ನಾಗರಾಜು ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದು, ಪ್ರಭಾಕರ್ ರೆಡ್ಡಿ, ವಸಂತ ಗಿಳಿಯಾರ್ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣ ವೇದಿಕೆಗಳಾದ ವಾಟ್ಸಾಪ್, ಫೇಸ್‌ಬುಕ್ ಮತ್ತು ಎಕ್ಸ್ ಖಾತೆಗಳಲ್ಲಿ ಸಿದ್ದರಾಮಯ್ಯ ಕುರಿತ ಸುಳ್ಳು ಸುದ್ದಿ ಪತ್ರಿಕಾ ತುಣುಕು ಹಂಚಿಕೊಂಡಿರುವವರ ವಿರುದ್ಧ ದೂರು ದಾಖಲಿಸಲಾಗಿದೆ.
ಇದೇ ನಕಲಿ ಸುದ್ದಿಯನ್ನು ಇನ್ನಷ್ಟು ಫೇಸ್ ಬುಕ್, ಟ್ವಿಟರ್, ಇನ್ಸ್ಟಾ ಹ್ಯಾಂಡಲ್ ಗಳಲ್ಲಿ ಮತ್ತು ಹಲವು ವಾಟ್ಸಾಪ್ ಗ್ರೂಪ್ ಗಳಲ್ಲಿ ಶೇರ್ ಮಾಡಲಾಗಿದ್ದು, ಅವರ ವಿರುದ್ಧವೂ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
ಫೇಕ್ ನ್ಯೂಸ್ಗಳ ಸೃಷ್ಟಿ ಮತ್ತು ಹರಡುವಿಕೆಯನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಯಾರೂ ಕೂಡ ಅಂತಹ ಕಾನೂನುಬಾಹಿರ ಕೃತ್ಯಕ್ಕೆ ಕೈಹಾಕಬಾರದು ಎಂದು ಹಲವು ಬಾರಿ ಎಚ್ಚರಿಕೆಯನ್ನೂ ನೀಡಿದ್ದೆವು. ಆದರೂ ನನ್ನ ವಿರುದ್ಧವೇ ಸುಳ್ಳು ಸುದ್ದಿ ಸೃಷ್ಟಿಸಿ, ಜನರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಕಾನೂನಿನ ಮೂಲಕ ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.