ನಕಲಿ ಅಂಕಪಟ್ಟಿ ಸಲ್ಲಿಸಿ ಪಿಎಸ್‌ ಐ ಹುದ್ದೆ ಗಿಟ್ಟಿಸಿದ್ದ ಪೊಲೀಸ್‌ ಕಾನ್‌ ಸ್ಟೇಬಲ್ ವಿರುದ್ಧ ದೂರು

Most read

ಬೆಂಗಳೂರು: ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿಗೆ ನಕಲಿ ಅಂಕಪಟ್ಟಿ
ಸಲ್ಲಿಸಿದ ಆರೋಪದಡಿಯಲ್ಲಿ ಪೊಲೀಸ್‌ ಕಾನ್‌ ಸ್ಟೇಬಲ್‌ವೊಬ್ಬರ ವಿರುದ್ಧ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ಪೈಗಂಬರ್ ನದಾಫ್ ವಿರುದ್ಧ ನಕಲಿ ದಾಖಲೆಗಳನ್ನು ನೀಡಿ ಉದ್ಯೋಗ ಗಿಟ್ಟಿಸಿಕೊಂಡಿರುವ ಪ್ರಕರಣ ದಾಖಲಾಗಿದೆ. ನಗರ ಪೊಲೀಸ್ ಕಮಿಷನರ್ ಕಚೇರಿಯ ನೇಮಕಾತಿ ವಿಭಾಗದ ಅಧಿಕಾರಿಯೊಬ್ಬರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ವಿಧಾನಸೌಧ ಪೊಲೀಸ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

2021-22ನೇ ಸಾಲಿನಲ್ಲಿ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಪಿಎಸ್‌ಐ (ಸಿವಿಲ್) ಹುದ್ದೆಗೆ ಇಬ್ಬರು ಹಾಗೂ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ (ಸಿಪಿಸಿ) ಹುದ್ದೆಗೆ ಏಳು ಮಂದಿ ಕ್ರೀಡಾ ಕೋಟಾದಡಿಯಲ್ಲಿ ಆಯ್ಕೆಯಾಗಿದ್ದರು. ಆಯ್ಕೆಯಾದ ಅಭ್ಯರ್ಥಿಗಳು ಸಲ್ಲಿಸಿದ್ದ ದಾಖಲಾತಿಗಳ ನೈಜತೆ ಪರಿಶೀಲನೆಗಾಗಿ ಆಯಾ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು. ನದಾಫ್ ಸಲ್ಲಿಸಿದ್ದ ಅಂಕಪಟ್ಟಿ ನಕಲಿ ಎನ್ನುವುದು ಪರಿಶೀಲನೆ ವೇಳೆ ಗೊತ್ತಾಗಿದೆ ಎಂದು ತಿಳಿದು ಬಂದಿದೆ.

ಕ್ರೀಡಾಕೋಟಾ ಅಡಿಯಲ್ಲಿ ಸಿಪಿಸಿ ಹುದ್ದೆಗೆ ನೇಮಕವಾಗಿ ಭಾರತಿನಗರ ಠಾಣೆಯಲ್ಲಿ ಪೈಂಗಬರ ನದಾಫ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಮತ್ತೆ ಕ್ರೀಡಾ ಕೋಟಾ ಅಡಿಯಲ್ಲಿ ಪಿಎಸ್‌ ಐ ಹುದ್ದೆಗೂ ಆಯ್ಕೆಯಾಗಿದ್ದರು. ಇವರು ಸಲ್ಲಿಸಿದ್ದ ಅಂಕಪಟ್ಟಿ ಮತ್ತಿತರ ದಾಖಲೆಗಳನ್ನು ಪರಿಶೀಲನೆಗಾಗಿ ಮೈಸೂರು ವಿಶ್ವವಿದ್ಯಾಲಯಕ್ಕೆ ಕಳುಹಿಸಲಾಗಿತ್ತು. ಅಂಕಪಟ್ಟಿಗಳು ನೈಜತೆಯಿಂದ ಕೂಡಿಲ್ಲ. ವಿಶ್ವವಿದ್ಯಾಲಯ ವಿತರಿಸಿದ ಅಂಕಪಟ್ಟಿಯೂ ಆಗಿರುವುದಿಲ್ಲ ಎಂದು ವಿವಿ ಮರಳಿಸಿತ್ತು. ಈ ವರದಿ ನಂತರ ಇಲಾಖೆ ದೂರು
ದಾಖಲಿಸಿದೆ.

More articles

Latest article