ಯಾರದ್ದೋ ಆಸ್ತಿಗೆ ನಕಲಿ ವ್ಯಕ್ತಿತ್ವದ ದಾಖಲೆ ಸೃಷ್ಟಿಸಿ ಅಮಾಯಕರನ್ನು ವಂಚಿಸುವ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಆರ್ಟಿಸಿ ಗೆ ಆಧಾರ್ ಜೋಡಿಸುವ ಅಭಿಯಾನಕ್ಕೆ ಇಂದಿನಿಂದ ಅಧಿಕೃತ ಚಾಲನೆ ನೀಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಸೋಮವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಅಮಾಯಕರ ಜಮೀನುಗಳನ್ನು ವ್ಯವಸ್ಥಿತವಾಗಿ ದೋಚುವ ಕೆಲಸವಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಸತ್ತವರ ಜಮೀನುಗಳನ್ನೂ ಸಹ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಕುರಿತು ರಾಜ್ಯದ ಮೂಲೆ ಮೂಲೆಯಿಂದ ದೂರುಗಳು ಕೇಳಿ ಬರುತ್ತಿವೆ. ಇದರಿಂದ ವಂಚನೆಗೊಳಗಾದವರು ಹಲವು ವರ್ಷಗಳಿಂದ ಕೋರ್ಟ್ ಕಚೇರಿಗೆ ಅಲೆಯುವಂತಾಗಿದೆ. ಇಂತಹ ಪ್ರಕರಣಗಳನ್ನು ತಡೆಯುವ ಹಾಗೂ ಜನಸಾಮಾನ್ಯರ ಪಾಲಿಗೆ ಅವರ ಜಮೀನಿನ ಹಕ್ಕನ್ನು ರಕ್ಷಿಸಿ ಅಧಿಕೃತಗೊಳಿಸುವ ಉದ್ದೇಶದಿಂದ ಆಧಾರ್ ಜೋಡಣೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ” ಎಂದರು.
ಮುಂದುವರೆದು, “ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ದೋಚುವವರ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಹಲವು ಜನರಿಂದ ಕೇಳಿಬಂದಿತ್ತು. ಇತ್ತೀಚೆಗೆ ಹಲವು ಶಾಸಕರು, ಸಚಿವರು ಹಾಗೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಇದೇ ಕಾರಣಕ್ಕೆ ಆಧಾರ್ ಜೋಡಣೆ ಅಭಿಯಾನಕ್ಕೆ ಮೂರು ತಾಲೂಕುಗಳಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಇದೀಗ ಪ್ರಾಯೋಗ ಯಶಸ್ವಿಯಾಗಿದ್ದು ಇಂದಿನಿಂದಲೇ ರಾಜ್ಯಾದ್ಯಂತ ಆಧಾರ್ ಜೋಡನೆ ಅಭಿಯಾನವನ್ನು ವಿಸ್ತರಿಸಲಾಗಿದೆ” ಎಂದು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಜನರಲ್ಲೂ ಮನವಿ ಮಾಡಿದ ಸಚಿವರು, “ಜನ ಸಾಮಾನ್ಯರು ಇದನ್ನು ಅನಾನುಕೂಲ ಎಂದು ಭಾವಿಸದೆ ಜಮೀನಿನ ಮಾಲಿಕತ್ವದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ವಂಚನೆ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ನೋಂದಣಿ ಸಮಯದಲ್ಲಿ ಆಧಾರ್ ಜೋಡಣೆಗೆ ಸಕಾರಾತ್ಮಕವಾಗಿ ಸಹಕಾರ ನೀಡಬೇಕು” ಎಂದು ಮನವಿ ಮಾಡಿದರು.