ಚೆನ್ನೈ: ಕ್ಷೇತ್ರ ಮರುವಿಂಗಡನೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳು ಆಯೋಜಿಸಿರುವ ಜಂಟಿ ಕಾರ್ಯಪಡೆ ಸಮಿತಿಯ ಮುಂದಿನ ಸಭೆಯು ಹೈದರಾಬಾದ್‌ನಲ್ಲಿ ನಡೆಯಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಿಳಿಸಿದ್ದಾರೆ. ಕ್ಷೇತ್ರ ಪುನರ್ ವಿಂಗಡನೆ ಪ್ರಕ್ರಿಯೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಲೋಕಸಭೆಯಲ್ಲಿ ದಕ್ಷಿಣದ ರಾಜ್ಯಗಳ ಪ್ರಾತಿನಿಧ್ಯವನ್ನು ಕಡಿಮೆಗೊಳಿಸುವ ಷಡ್ಯಂತ್ರ ನಡೆಸಿದೆ. ಇದನ್ನು ಪ್ರತಿಭಟಿಸುವಲ್ಲಿ ವಿರೋಧ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಿದೆ ಎಂದು ಹೇಳಿದ್ದಾರೆ.
ಎಲ್ಲ ರಾಜ್ಯಗಳಿಗೂ ನ್ಯಾಯ ಸಿಗಬೇಕಾದರೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಗೆ ಕಾನೂನು ತಜ್ಞರ ಸಮಿತಿ ರಚಿಸುವ ಅಗತ್ಯವಿದೆ. ಜತೆಗೆ ಕಾನೂನಿನ ಮಾರ್ಗದಲ್ಲೇ ರಾಜಕೀಯ ಹೆಜ್ಜೆಗಳನ್ನಿಡುವ ಸಂಬಂಧ ಸಮಿತಿ ಸದಸ್ಯರು ಸಲಹೆಗಳನ್ನು ನೀಡಬೇಕು. ನಾವು ಒಗ್ಗಟ್ಟಿನಿಂದ ಹೋರಾಡಿದರೆ ಮಾತ್ರ, ಗೆಲುವು ಸಾಧಿಸಲು ಸಾಧ್ಯ ಎಂದಿದ್ದಾರೆ.
ನ್ಯಾಯಯುತ ಬೇಡಿಕೆಗೆ ಒಗ್ಗಟ್ಟಿನಿಂದ ಹೋರಾಡೋಣ. ನಮ್ಮ ಪ್ರಾತಿನಿಧ್ಯ ಯಾವುದೇ ಹಂತದಲ್ಲೂ ಕುಂಠಿತವಾಗದಂತೆ ಎಚ್ಚರವಹಿಸೋಣ. ನ್ಯಾಯಯುತ ಕ್ಷೇತ್ರ ಪುನರ್ ವಿಂಗಡನೆ ಆಗುವವರೆಗೂ ಪಟ್ಟು ಬಿಡದೆ ಹೋರಾಡೋಣ. ಜನಸಂಖ್ಯೆ ನಿಯಂತ್ರಣದಲ್ಲಿ ದಕ್ಷಿಣದ ರಾಜ್ಯಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಈಗ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್ ವಿಂಗಡನೆ ಮಾಡಿದರೆ, ಅದು ತಮಿಳುನಾಡು ಒಳಗೊಂಡಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಲೋಕಸಭೆಯಲ್ಲಿ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾದರೆ, ಅದು ನೇರವಾಗಿ ರಾಜ್ಯದ ರಾಜಕೀಯ ಬಲದ ಮೇಲೆ ಪರಿಣಾಮ ಬೀರಲಿದೆ. ಬಹುಮತವೇ ಇಲ್ಲದೆ ನಮಗೆ ಧ್ವನಿಯೇ ಇಲ್ಲದಂತಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕ್ಷೇತ್ರ ಪುನರ್ ವಿಂಗಡನೆಗೆ ವಿರೋಧ ಪಕ್ಷಗಳ ವಿರೋಧವಿಲ್ಲ. ಬದಲಿಗೆ ಅದನ್ನು ನ್ಯಾಯಯುತವಾಗಿ ನಡೆಸಿ ಮತ್ತು ಯಾವುದೇ ರಾಜಕೀಯ ದುರುದ್ದೇಶ ನುಸುಳದಂತೆ ಎಚ್ಚರವಹಿಸಬೇಕು ಎಂಬುದಷ್ಟೇ ನಮ್ಮ ಬೇಡಿಕೆ ಎಂದು ಸ್ಟಾಲಿನ್ ಒತ್ತಿ ಹೇಳಿದರು.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ಯಾವುದೇ ರಾಜ್ಯವನ್ನೂ ಸಂಪರ್ಕಿಸದೇ ಏಕಾಏಕಿ ಕ್ಷೇತ್ರ ಪುನರ್ ವಿಂಗಡನೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿರುವುದು ಸಂವಿಧಾನದ ತತ್ವ ಪಾಲನೆ ಇಲ್ಲದ ಕ್ಷಲ್ಲಕ ರಾಜಕೀಯ ಹಿತಾಸಕ್ತಿಯಾಗಿದೆ ಎಂದು ಟೀಕಿಸಿದ್ದಾರೆ. ಜನಸಂಖ್ಯೆ ಆಧಾರದಲ್ಲೇ ಕ್ಷೇತ್ರ ಪುನರ್ ವಿಂಗಡನೆ ಮಾಡುವುದಾದರೆ, ಈಗಿರುವ ಕ್ಷೇತ್ರಗಳ ಸಂಖ್ಯೆ ಕಳೆದುಕೊಳ್ಳುವ ರಾಜ್ಯಗಳಲ್ಲಿ ಕೇರಳವೂ ಸೇರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸಭೆಯಲ್ಲಿ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ ದಾಸ್ ಮತ್ತು ಬಿಜು ಜನತಾ ದಳ ಮುಖಂಡ ಸಂಜಯ್ ಕುಮಾರ್ ದಾಸ್ ಬರ್ಮಾ ಭಾಗವಹಿಸಿದ್ದರು.