ಚಿಕ್ಕಮಗಳೂರು: ರಾಜ್ಯದಲ್ಲಿ ಉಳಿದಿದ್ದ ಏಕೈಕ ನಕ್ಸಲ್ ರವೀಂದ್ರ, ಎಸ್ಪಿ ವಿಕ್ರಮ್ ಆಮ್ಟೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ಅವರು ಇಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮುಂದೆ ಶರಣಾಗಿದ್ದಾರೆ. ರವೀಂದ್ರಗೆ ಚಿಕ್ಕಮಗಳೂರು ಜಿಲ್ಲಾಡಳಿತ 7 ಲಕ್ಷ ರೂ. ಪ್ಯಾಕೇಜ್ ಹಣ ಘೋಷಣೆ ಮಾಡಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಆರು ಮಂದಿ ನಕ್ಸಲ್‌ರು ಶರಣಾಗಿದ್ದರು.
ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಕೋಟೆಹೊಂಡ ನಿವಾಸಿಯಾಗಿರುವ ರವೀಂದ್ರ ಕಳೆದ 18 ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್‌ರ ನಾಯಕ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು. ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಗೆ ಒಪ್ಪಿ ರವಿಂದ್ರ ಶರಣಾಗಿದ್ದಾರೆ. ರವೀಂದ್ರ ಒಟ್ಟು 26 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾರೆ. ಇವರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 14 ಪ್ರಕರಣಗಳು ಸೇರಿ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಪ್ರಕರಣಗಳು ದಾಖಲಾಗಿವೆ.
17 ವರ್ಷಗಳ ಹಿಂದೆ ಮೂಲಭೂತ ಹಕ್ಕುಗಳಿಗಾಗಿ ನಕ್ಸಲ್ ಚಳವಳಿಗೆ ದುಮುಕಿದ್ದೆ. ವಾಸದ ಮನೆ ಸೇರಿದಂತೆ ಮೂಲಭೂತ ಸೌಕರ್ಯ ನೀಡಲು ಸರ್ಕಾರ ವಿಫಲವಾಗಿತ್ತು. ಈಗ ಸ್ವಲ್ಪ ಬದಲಾವಣೆ ಕಂಡು ಬರುತ್ತಿದೆ. ಇದರಿಂದ ಸಮಾಜದ ಮುಖ್ಯ ವಾಹಿನಿಗೆ ಬರಲು ನಿರ್ಧಾರ ಮಾಡಿದ್ದೇನೆ. ಸರ್ಕಾರಕ್ಕೆ ನನ್ನ ಬೇಡಿಕೆಯ ಕುರಿತು ಪತ್ರ ನೀಡಿದ್ದೇನೆ ಎಂದು ರವೀಂದ್ರ ಹೇಳಿದ್ದಾರೆ.
ನಕ್ಸಲ್ ರವೀಂದ್ರ ಶರಣಾಗಿರುವುದು ಉತ್ತಮ ಬೆಳವಣಿಗೆ ಎಂದು ಕಾನೂನು ಸಂಸದೀಯ ವ್ಯವಹಾರ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ. ಮನಸ್ಸು ಪರಿವರ್ತನೆ, ಬದಲಾವಣೆ ಮಾಡಿಕೊಂಡು ಮುಖ್ಯ ವೇದಿಕೆಗೆ ಬರುವುದು ಅಗತ್ಯ. ಸಂವಿಧಾನದ ಅಡಿ ಕೆಲಸ ಮಾಡಬೇಕಿರುವುದು ಅತ್ಯಂತ ಮಹತ್ವದ್ದು. ಆ ಹಿನ್ನೆಯಲ್ಲಿ ಅವರು ಮುಖ್ಯ ವಾಹಿನಿಗೆ ಬಂದಿರುವುದನ್ನು ನಾನು ಸ್ವಾಗತ ಮಾಡುತ್ತೇನೆ ಎಂದಿದ್ದಾರೆ. ರಾಜ್ಯದಲ್ಲಿ ನಕ್ಸಲ್ ಶರಣಾಗತಿ ಆಪರೇಷನ್ ಮುಕ್ತಾಯಗೊಂಡಿದೆ. ನಕ್ಸಲ್ ಶರಣಾಗತಿ ಸಂಬಂಧ ಕಾರ್ಯ ನಿರ್ವಹಿಸಿರುವ 22 ಪೊಲೀಸ್ ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪದಕ ಘೋಷಣೆ ಮಾಡಿದ್ದಾರೆ.