ಗುತ್ತಿಗೆದಾರನಿಂದ ಹಣ ಸುಲಿಗೆ; ಮೂವರ ಬಂಧನ, ಓರ್ವ ಮಹಿಳೆ ಸೇರಿ ನಾಲ್ವರು ಎಸ್ಕೇಪ್

Most read

ಬೆಂಗಳೂರು: ಪರಿಚಯವಿದ್ದ ಮಹಿಳೆ ಮನೆಗೆ ಆಹ್ವಾನಿಸಿದರು ಎಂದು ಗುತ್ತಿಗೆದಾರರೊಬ್ಬರು ಆಕೆಯ ಮನೆಗೆ ಹೋದಾಗ ನಗದು ಮತ್ತು ಚಿನ್ನಾಭರಣ ದೋಚಿದ್ದ ಮೂವರು ಆರೋಪಿಗಳನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಸಿವಿಲ್ ಗುತ್ತಿಗೆದಾರ ರಂಗನಾಥ್ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಂತೋಷ್, ಅಜಯ್ ಹಾಗೂ ಜಯರಾಜ್ ಅವರನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಮುಖ್ಯ ಆರೋಪಿ ನಯನಾ ಮತ್ತು ಇತರ ನಾಲ್ವರು ಪರಾರಿಯಾಗಿದ್ದಾರೆ. ರಂಗನಾಥ್ ಅವರಿಂದ ನಯನಾ ತನ್ನ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಹಣವನ್ನು ಪಡೆದುಕೊಂಡಿದ್ದು, ಮನೆಗೆ ಬಂದು ಹೋಗುವಂತೆ ಪದೇ ಪದೇ ಕರೆಯುತ್ತಿದ್ದಳು. ಡಿಸೆಂಬರ್ 9ರಂದು ಮಾಗಡಿ ರಸ್ತೆಯ ತುಂಗಾನಗರ ಕ್ರಾಸ್ ಬಳಿ ಆಕಸ್ಮಿಕವಾಗಿ ಭೇಟಿಯಾಗಿದ್ದ ನಯನಾ ತಮ್ಮ ಮನೆ ಇಲ್ಲೇ ಸಮೀಪದಲ್ಲಿದ್ದು, ಚಹಾ ಕುಡಿದು ಹೋಗುವಂತೆ ಆಹ್ವಾನಿಸಿದ್ದಳು. ಆಕೆಯ ಮನೆಗೆ ತೆರಳಿ ಕುಳಿತುಕೊಂಡಿದ್ದಾಗ ಏಕಾಏಕಿ ಬಂದ ಮೂವರು ಅಪರಿಚಿತ ವ್ಯಕ್ತಿಗಳು, ನಾವು ಸಿಸಿಬಿ ಇಲಾಖೆಯ ಪೊಲೀಸರು ಎಂದು ಧಮಕಿ ಹಾಕಿ ನೀವು ವ್ಯಭಿಚಾರದಲ್ಲಿ ಭಾಗಿಯಾಗಿದ್ದೀರಾ ಎಂದು ಹೆದರಿಸಿ ನನ್ನ ಉಡುಪು ಬಿಚ್ಚಿಸಿ, ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದರು. ಬಳಿಕ ಎರಡು ಲಕ್ಷ ರೂಪಾಯಿ ನೀಡಬೇಕು. ಇಲ್ಲವಾದರೆ ಅಕ್ರಮ ಸಂಬಂಧ ಕುರಿತು ನನ್ನ ಪತ್ನಿಗೆ ಹೇಳುವುದಾಗಿ ಬೆದರಿಸಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ.

ನನ್ನ ಮೈಮೇಲಿದ್ದ ಚಿನ್ನದ ಸರ, ಉಂಗುರ ಕಿತ್ತುಕೊಂಡು 55 ಸಾವಿರ ನಗದು ಹಣವನ್ನು ಕಿತ್ತುಕೊಂಡು ಹೋಗಿದ್ದರು. ಆರೋಪಿಗಳ ಜತೆ ನಯನಾ ಕೂಡಾ ಪರಾರಿಯಾಗಿದ್ದಳು. ಈ ಬಗ್ಗೆ ಶಂಕೆಗೊಂಡು ನಯನಾರಿಗೆ ಮೊಬೈಲ್ ಕರೆ ಮಾಡಿ ಪೊಲೀಸರಿಗೆ ದೂರು ನೀಡಲು ಬರುವಂತೆ ಹೇಳಿದೆ. ಆದರೆ, ಆಕೆ ಪೊಲೀಸರಿಗೆ ದೂರು ನೀಡಿದರೆ ಮಗುವಿನ ಜತೆ ನಿಮ್ಮ ಮನೆಗೆ ಬಂದು ನಮ್ಮಿಬ್ಬರಿಗೆ ಅಕ್ರಮ ಸಂಬಂಧವಿದೆ ಎಂದು ಪತ್ನಿಗೆ ಹೇಳುವುದಾಗಿ ಬೆದರಿಸಿದ್ದಳು ಎಂದು ದೂರಿನಲ್ಲಿ ವಿವರಣೆ ನೀಡಿದ್ದಾರೆ.

ಗುತ್ತಿಗೆದಾರ ರಂಗನಾಥ್ ಅವರನ್ನು ಮಹಿಳೆ ತನ್ನ ಮನೆಗೆ ಆಹ್ವಾನಿಸಿ ಮೂವರು ಆರೋಪಿಗಳ ಜತೆ ಸೇರಿಕೊಂಡು ಸಿಸಿಬಿ ಪೊಲೀಸರ ಸೋಗಿನಲ್ಲಿ ಅವರನ್ನು ಹೆದರಿಸಿ, ಬೆದರಿಸಿ, ಗೂಗಲ್ ಪೇ ಮೂಲಕ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮೂವರನ್ನು ಬಂಧಿಸಿರುವ ಪೊಲೀಸರು ನಾಲ್ವರು ಆರೋಪಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಹೇಳಿದ್ದಾರೆ.

More articles

Latest article