ಬೆಂಗಳೂರು: ಹಿಂದುಳಿದವರು, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಶೋಷಿತ ವರ್ಗದ ಜನರು ತಾವು ದುರ್ಬಲರು ಎನ್ನುವ ಮನೋಭಾವವನ್ನು ತೊರೆಯಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಮ್ ಅವರ 118ನೇ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂತ ರವಿದಾಸರು ಹೇಳುವಂತೆ ನನ್ನ ಭಕ್ತಿಯೇ ನನ್ನ ಜಾತಿ, ನನ್ನ ಕರ್ಮವೇ ನನ್ನ ಧರ್ಮ ಎನ್ನುವ ರೀತಿ ಜಗಜೀವನ್ ರಾಮ್ ಅವರು ರಾಜಕಾರಣ ಮಾಡಿ ಬದುಕಿದರು. ವಿದ್ಯಾರ್ಥಿ ನಾಯಕರಾಗಿ ಬೆಳೆದು ದೇಶದ ಇತಿಹಾಸದಲ್ಲಿ ಅತಿ ಹೆಚ್ಚು ವರ್ಷ ಸಚಿವರಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆ ಪಡೆದರು ಎಂದು ಸ್ಮರಿಸಿದರು.
ರಾಜ್ಯದಲ್ಲಿ ನೂರು ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸೂಚಿಸಿದ್ದಾರೆ. ನಿವೇಶನಗಳನ್ನು ನೋಂದಣಿ ಮಾಡಲಾಗುತ್ತಿದೆ. ಕಾಂಗ್ರೆಸ್ ನಡೆದು ಬಂದ ದಾರಿಯ ಬಗ್ಗೆ ವಸ್ತುಪ್ರದರ್ಶನ ಆಯೋಜಿಸಲಾಗುವುದು. ಹತ್ತು ಸಾವಿರ ಚದರ ಅಡಿ ಪ್ರದೇಶದಲ್ಲಿ ಇತಿಹಾಸ ಬಿಂಬಿಸುವ ಕೆಲಸ ಮಾಡಲಾಗುವುದು. ಮಹಾತ್ಮ ಗಾಂಧೀಜಿ ಅವರು ಕುಳಿತ ಜಾಗದಲ್ಲಿ ಕನ್ನಡಿಗರಾದ ಮಲ್ಲಿಕಾರ್ಜುನ ಖರ್ಗೆ ಕುಳಿತಿದ್ದಾರೆ. ಅವರ ಆಶಯವನ್ನು ಕಾರ್ಯಗತಗೊಳಿಸಲು ಕಾಂಗ್ರೆಸ್‌ನ ಹಳೇ ಹುಲಿ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.