ಯತ್ನಾಳ್‌ ಉಚ್ಛಾಟನೆಗೆ ವಿಜಯೇಂದ್ರ ಬಣ ಆಗ್ರಹ;  ವಿಜಯೇಂದ್ರ ವಿರುದ್ಧವೇ ದೂರು ಸಲ್ಲಿಕೆಗೆ ಯತ್ನಾಳ ತಂಡ ನಿರ್ಧಾರ

Most read

ದೆಹಲಿ: ರಾಜ್ಯ ಬಿಜೆಪಿ ಘಟಕದಲ್ಲಿ ನಡೆಯುತ್ತಿರುವ ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಬೀಳುವ ಲಕ್ಷಣಗಳಿಲ್ಲ. ವಿಜಯೇಂದ್ರ ಟೀಂ ಮತ್ತು ಯತ್ನಾಳ ಟೀಂ ನಡುವೆ ಮಾತಿನ ಚಕಮಕಿ ಏಟು ಎದಿರೇಟು ನಡೆದೇ ಇದೆ. ಒಂದು ಕಡೆ ಯತ್ನಾಳ ಅವರನ್ನು ಉಚ್ಛಾಟಿಸುವಂತೆ ಕಾರ್ಯಕರ್ತರು ಆಗ್ರಹಪಡಿಸುತ್ತಿದ್ದರೆ ಶೀಘ್ರದಲ್ಲೇ ವಿಜಯೇಂದ್ರ ವಿರುದ್ಧ ದೂರು ಸಲ್ಲಿಸುವುದಾಗಿ ಯತ್ನಾಳ ತಂಡ ಹೇಳುತ್ತಿದೆ.

ದೆಹಲಿಯಲ್ಲಿ ಮಾತನಾಡಿದ ಯತ್ನಾಳ ತಂಡದ ನಾಯಕ ರಮೇಶ್‌ ಜಾರಕಿಹೊಳಿ, ಸಧ್ಯಕ್ಕೆ ನಾವು ವಕ್ಫ್ ವಿರುದ್ಧ ರೂಪಿಸಿರುವ ಹೋರಾಟದ ವರದಿಯನ್ನು ಜೆಪಿಸಿಗೆ ನೀಡಲು ಬಂದಿದ್ದೇವೆ. ಬಿವೈ ವಿಜಯೇಂದ್ರ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಕ್ಕೆ ದಾಖಲೆಗಳ ಸಹಿತ ವರಿಷ್ಠರಿಗೆ ಮತ್ತೊಮ್ಮೆ ದೂರು ನೀಡಲು ದೆಹಲಿಗೆ ಆಗಮಿಸುತ್ತೇವೆ ಎಂದರು.  ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿರುವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ವರ್ಗದ ಶಾಸಕರನ್ನು ಎತ್ತಿಕಟ್ಟಲೆಂದೇ ಸಭೆಗಳನ್ನು ನಡೆಸುತ್ತಾ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಜಾರಕಿಹೊಳಿ ಆಪದಿಸಿದರು.

ಇತ್ತ ಬೆಂಗಳೂರಿನಲ್ಲಿ ದೆಹಲಿಯಿಂದ ಆಗಮಿಸಿರುವ ಬಿಜೆಪಿ ಮುಖಂಡ ತರುಣ್ ಚುಗ್ ನಡೆಸಿದ ಸಭೆಯಲ್ಲಿ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಶಾಸಕರು, ಮಾಜಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷರು ಆಗ್ರಹಪಡಿಸಿದ್ದಾರೆ.  ಸಭೆಯಲ್ಲಿ ಹಾಜರಿದ್ದ ಶಾಸಕರು, ಮಾಜಿ ಶಾಸಕರು,  ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು  ಯತ್ನಾಳ್ ವಿರುದ್ಧ ಕ್ರಮ ಜರುಗಿಸುವಂತೆ ಒಕ್ಕೊರಲ ಒತ್ತಾಯ ಮಾಡಿದ್ದಾರೆ. ಯತ್ನಾಳ್ ಹೇಳಿಕೆಯಿಂದ ಪಕ್ಷಕ್ಕೆ ಧಕ್ಕೆಯಾಗುತ್ತಿದ್ದು, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗುತ್ತಿದೆ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ಅಡ್ಡಿಯಾಗುತ್ತಿದೆ. ಯತ್ನಾಳ್ ವಿರುದ್ಧ ಕ್ರಮ ಕೈಗೊಂಡರೆ ಎಲ್ಲವೂ ಸರಿಯಾಗುತ್ತದೆ ಎಂದು ಹೇಳಿದ್ದಾರೆ.

‌ ನಿಮ್ಮ ಭಾವನೆಗಳನ್ನು ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಆದರೆ, ಈಗ ನಾನು ಬಂದಿರುವುದು ಸಂಘಟನಾತ್ಮಕ ವಿಚಾರಕ್ಕೆ ಮಾತ್ರ. ಪಕ್ಷದ ಬಲವರ್ಧನೆ ಆಗಬೇಕು. ಇವತ್ತಿನ ಸಭೆ ಸಂಘಟನೆ, ಸದಸ್ಯತ್ವ ಅಭಿಯಾನಕ್ಕೆ ಮಾತ್ರ ಸೀಮಿತ ಎಂದು ಸಮಾಧಾನಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

More articles

Latest article