ಮತಗಟ್ಟೆ ಸಮೀಕ್ಷೆ; ಚನ್ನಪಟ್ಟಣದಲ್ಲಿ ಅಚ್ಚರಿ ಫಲಿತಾಂಶ ಏಕೆ ?

Most read

ಬೆಂಗಳೂರು: ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾವಿ ಕ್ಷೇತ್ರ ಗಳಿಗೆ ನಡೆದ ಉಪಚುನಾವಣೆಯ ಮತ ಎಣಿಕೆ ಶನಿವಾರ ನಡೆಯಲಿದೆ. ನೆನ್ನೆ ಸಂಜೆ ಬಹಿರಂಗವಾದ ಮತಗಟ್ಟೆ ಸಮೀಕ್ಷೆಗಳು ಮೂರರಲ್ಲಿ ಎರಡು ಎನ್ ಡಿಎ ಒಕ್ಕೂಟ ಮಾತು ಒಂದರಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳಿವೆ. P- MARQ ಸಮೀಕ್ಷೆ ಪ್ರಕಾರ ಎರಡರಲ್ಲಿ ಎನ್ ಡಿಎ ಅಂದರೆ ಚನ್ನಪಟ್ಟಣ ಮತ್ತು ಶಿಗ್ಗಾಂವಿಯಲ್ಲಿ ಗೆಲುವು ಸಾಧಿಸಲಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ ಚೊಚ್ಚಲ ಗೆಲುವು ಸಾಧಿಸಿ ವಿಧಾನಸೌಧ ಪ್ರವೇಶಿಸಲಿದ್ದಾರೆ. ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವಿನ ನಗೆ ಬೀರಲಿದ್ದಾರೆ.

ಕನ್ನಡದ ಬಹುತೇಕ ಚಾನೆಲ್ ಗಳೂ ಇದೇ ಸಮೀಕ್ಷೆಯನ್ನು ಪುಷ್ಟಿಕರಿಸಿವೆ. ಆದರೆ ಪವರ್ ಚಾನೆಲ್ ಮಾತ್ರ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಕೂದಲೆಳೆ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಪವರ್ ಚಾನೆಲ್ ಸಮೀಕ್ಷೆ ಹೇಳಿದೆ.

ಚನ್ನಪಟ್ಟಣ  ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಎನ್ ಡಿಎ ಮೈತ್ರಿ ಕೂಟದ ಉಮೇದುವಾರರಾಗಿ ನಿಖಿಲ್‌ ಕುಮಾರಸ್ವಾಮಿ ಎದುರಾಳಿಗಳಾಗಿದ್ದರು. ನಿಖಿಲ್‌ ಕುಮಾರಸ್ವಾಮಿ ಗೆಲುವು ಸಾಧಿಸಲಿದ್ದಾರೆ ಎಂದು  ಸಮೀಕ್ಷೆ ಹೇಳಿದೆ. ಜೆಡಿಎಸ್ ಶೇ.45 ಮತ್ತು ಕಾಂಗ್ರೆಸ್ ಶೇ.41 ರಷ್ಟು ಮತ ಗಳಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ.

ಚನ್ನಪಟ್ಟಣ ಕ್ಷೇತ್ರದ ಫಲಿತಾಂಶ ಏರುಪೇರು ಆದರೂ ಅಚ್ಚರಿ ಇಲ್ಲ. ಯಾರೇ ಗೆದ್ದರೂ ಕೂದಲೆಳೆ ಅಂತರದಲ್ಲಿ ಗೆಲ್ಲಲಿದ್ದಾರೆ. ಚನ್ನಪಟ್ಟಣಕ್ಕೆ ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ಎಂಟ್ರಿ ಕೊಡುವವರೆಗೂ ಬೊಂಬೆ ನಾಡು ಕೈನತ್ತ ವಾಲಿತ್ತು. ಜಮೀರ್ ಇಲ್ಲಸಲ್ಲದ ಮಾತುಗಳನ್ನಾಡಿದ್ದರ ಪರಿಣಾಮ ವಿಶೇಷವಾಗಿ ಒಕ್ಕಲಿಗ ಸಮುದಾಯದ ಮತಗಳು ನಿಖಿಲ್ ಪರ ವರ್ಗಾವಣೆಯಾಗಿವೆ ಎನ್ನಲಾಗುತ್ತಿದೆ.  ಕುಮಾರಸ್ವಾಮಿ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ ಆಯ್ಕೆಯಾಗಿ ರಾಜೀನಾಮೆ ನೀಡಿದ್ದರಿಂದ ಮರು ಚುನಾವಣೆ ನಡೆದಿತ್ತು.

ಚನ್ನಪಟ್ಟಣ ಕ್ಷೇತ್ರದಲ್ಲಿ 2,32,949 ಮತದಾರರಿದ್ದು 1,20,617 ಮಹಿಳಾ ಮತ್ತು 1,12,324 ಪುರುಷ ಮತದಾರರಿದ್ದಾರೆ. ಈ ಬಾರಿ ಡಿ.ಕೆ. ಸಹೋದರರು ಮತ್ತು ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದವು.

 ಯಾರೇ ಸೋತರೂ ಅದು ಹ್ಯಾಟ್ರಿಕ್ ಸೋಲಾಗುತ್ತದೆ. ಯೋಗೇಶ್ವರ್ 2018 ಮತ್ತು 2023 ರಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಎದುರು ಸೋತಿದ್ದರು. ನಿಖಿಲ್ 2019 ರಲ್ಲಿ ಮಂಡ್ಯ ಲೋಕಸಭೆ ಮತ್ತು 2023ರಲ್ಲಿ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರು. ಈಗ ಹ್ಯಾಟ್ರಿಕ್ ಸೋಲು ಯಾರದ್ದು ಎನ್ನುವುದನ್ನು ತಿಳಿಯಲು 23 ರವರೆಗೆ ಕಾಯಲೇಬೇಕು.

More articles

Latest article