ನವದೆಹಲಿ:ದೇಶದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ. 92 ವರ್ಷದ ಸಿಂಗ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಡಾ.ಸಿಂಗ್ ಅವರು ಆರ್ಥಿಕ ಸುಧಾರಣೆಗಳಿಗಾಗಿ ಅವರು ಪ್ರಖ್ಯಾತಿ ಪಡೆದಿದ್ದರು. ಸ್ವತಃ ಆರ್ಥಿಕ ತಜ್ಞರಾಗಿದ್ದ ಡಾ. ಸಿಂಗ್ ಅವರು 90ರ ದಶಕದಲ್ಲಿ ಜಾರಿಗೊಳಿಸಿದ ಸುಧಾರಣೆಗಳಿಗಾಗಿ ದೇಶ ಗಟ್ಟಿಯಾಗಿ ನಿಂತುಕೊಂಡಿತು ಎನ್ನುವುದು ಅತಿಶಯೋಕ್ತಿಯೇನಲ್ಲ.
ಸುಧೀರ್ಘ ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ಕಳೆದ ಏಪ್ರಿಲ್ ನಲ್ಲಿ ಅವರು ನಿವೃತಿಹೊಂದಿದರು. 1991ರಿಂದ ರಾಜ್ಯಸಭಾ ಸದಸ್ಯರಾಗಿದ್ದರು.
ಪ್ರಧಾನಿ ನರಸಿಂಹರಾವ್ ಅವರ ಸಂಪುಟದಲ್ಲಿ ಡಾ.ಮನಮೋಹನ್ ಸಿಂಗ್ ಅವರು 1991-1996 ರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದರು. ಈ ಅವಧಿಯಲ್ಲಿ ಇಡೀ ಜಗತ್ತು ಆರ್ಥಿಕ ಬಿಕ್ಕಟುಗಳಿಂದ ಬಳಲುತ್ತಿದ್ದಾಗ ಆರ್ಥಿಕ ಸಚಿವರಾಗಿ ಕೈಗೊಂಡ ನಿರ್ಣಯಗಳಿಂದಾಗಿ ಭಾರತ ಮತ್ತೆ ಪುಟಿದೆದ್ದಿದ್ದರಲ್ಲಿ ಸಂಶಯಗಳಿಲ್ಲ.
ನಂತರ 2004ರಿಂದ 2014ರವರೆಗೆ ದೇಶದ 13ನೇ ಪ್ರಧಾನಮಂತ್ರಿಗಳಾಗಿ ಸೇವೆ ಸಲ್ಲಿಸಿದ್ದರು. ಪ್ರತಿಪಕ್ಷಗಳು ಇವರನ್ನು ಮೌನಿ ಸಿಂಗ್ ಎಂದು ಟೀಕಿಸುತ್ತಾ ಬಂದಿದ್ದವು. ಆದರೆ ಇವರು ಅಂತಹ ಟೀಕೆಗಳಿಗೆ ಕಿವಿಗೊಡದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಾ ಬಂದಿದ್ದರು. ವರ್ತಮಾನ ನನ್ನನ್ನು ಗೌರವಿಸದೇ ಇರಬಹುದು. ಆದರೆ ಇತಿಹಾಸ ನನ್ನ ಕೆಲಸಗಳನ್ನು ಗೌರವಿಸದೇ ಇರದು ಎಂದು ಅವರು ಪ್ರಧಾನಿಯಾಗಿ ತಮ್ಮ ಕೊನೆಯ ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತುಗಳು ನೆನಪಾಗುತ್ತವೆ. ಡಾ.ಸಿಂಗ್ ಅವರು ಓರ್ವ ಮುತ್ಸದ್ದಿ, ಚಿಂತಕ ಮತ್ತು ವಿದ್ವಾಂಸರೆಂದು ಕರೆಯುತ್ತಾರೆ.
ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ನರೇಂದ್ರ ಮೋದಿ ನಂತರ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ನಾಲ್ಕನೇ ಪ್ರಧಾನಿಯಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದ ಸಿಂಗ್ ಭಾರತದ ಮೊದಲ ಸಿಖ್ ಪ್ರಧಾನಿಯೂ ಹೌದು. ಜವಾಹರಲಾಲ್ ನೆಹರೂ ನಂತರ ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ ನಂತರ ಮರು ಆಯ್ಕೆಯಾದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಅವರು ಭಾಜನರಾಗಿದ್ದಾರೆ
ಇವರು 1932ರ ಸೆಪ್ಟೆಂಬರ್ 26ರಂದು ಅವಿಭಜಿತ ಭಾರತದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದರು. ಮೆಟ್ರಿಕ್ಯುಲೇಷನ್ ಪರೀಕ್ಷೆಯನ್ನು 1948ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರೆ, ಇಂಗ್ಲೆಂಡ್ ನ ಕೇಂಬ್ರಿಜ್ ವಿಶ್ವವಿದ್ಯಾಲಯಕದಲ್ಲಿ ಅರ್ಥಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದರು. ನಂತರ ಅವರು 1962ರಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ನಫ್ ಫೀಲ್ಡ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಡಿ.ಫಿಲ್ ಗೌರವ ಪಡೆದರು. ಇವರು ಆರ್ಥಿಕ ಸ್ಥಿತಿಗತಿಗಳನ್ನು ಕುರಿತು ಅನೇಕ ಕೃತಿಗಳನ್ನು ರಚಿಸಿದ್ದಾರೆ. ನಂತರ ಇವರು ಕೆಲವು ವರ್ಷಗಳ ಅವಧಿಗೆ ವಿಶ್ವಸಂಸ್ಥೆಯಲ್ಲಿ ಕೆಲಸ ಮಾಡಿದ್ದರು. 1971ರಲ್ಲಿ ಡಾ. ಸಿಂಗ್ ಅವರು ವಾಣಿಜ್ಯ ಸಚಿವಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ನೇಮಕಗೊಂಡರು. 1972ರಲ್ಲಿ ಇವರನ್ನು ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಯಿತು. ನಂತರ ಡಾ. ಸಿಂಗ್ ಅವರು ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿ, ಯೋಜನಾ ಆಯೋಗದ ಉಪಾಧ್ಯಕ್ಷ, ಭಾರತೀಯ ರಿಜರ್ವ್ ಬ್ಯಾಂಕ್ ಗೌರ್ನರ್, ಪ್ರಧಾನಮಂತ್ರಿಗಳ ಸಲಹೆಗಾರ, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾಗಿ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ್ದರು.
ಆರಂಭದಲ್ಲೇ ಹೇಳಿದಂತೆ 1991ರಿಂದ 1996ರವರೆಗೆ ಡಾ. ಸಿಂಗ್ ಅವರು ಹಣಕಾಸು ಸಚಿವರಾಗಿ ಜಾರಿಗೊಳಿಸಿದ ಆರ್ಥಿಕ ಸುಧಾರಣೆಗಳು ಈಗಲೂ ವಿಶ್ವಮಾನ್ಯತೆ ಪಡೆದಿವೆ. ಪದ್ಮ ವಿಭೂಷಣ (1987), ವಿಜ್ಞಾನ ಕಾಂಗ್ರೆಸ್ ನ ಜವಾಹರಲಾಲ್ ನೆಹರೂ ಜನ್ಮ ಶತಮಾನೋತ್ಸವ ಪ್ರಶಸ್ತಿ (1995), ಹಣಕಾಸು ಸಚಿವರಿಗೆ ನೀಡುವ ಏಷ್ಯಾ ವಿತ್ತ ಪ್ರಶಸ್ತಿ (1993 ಮತ್ತು 1994) ಹಣಕಾಸು ಸಚಿವರಿಗೆ ನೀಡುವ ಯೂರೋ ಹಣ ಪ್ರಶಸ್ತಿ (1993), ಕೇಂಬ್ರಿಜ್ ವಿಶ್ವವಿದ್ಯಾಲಯದ ಆಡಮ್ ಸ್ಮಿತ್ ಬಹುಮಾನ (1956), ಕೇಂಬ್ರಿಜ್ ನ ಸೇಂಟ್ ಜಾನ್ ಕಾಲೇಜಿನಲ್ಲಿ ಅತ್ಯತ್ತುಮ ಸಾಧನೆಗಾಗಿ ರೈಟ್ಸ್ ಪ್ರಶಸ್ತಿ (1955) ಇವರ ಮುಡಿಗೇರಿವೆ. ಅಕ್ಸ್ ಫರ್ಡ್ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳ ಗೌರವ ಪದವಿಗೂ ಡಾ. ಸಿಂಗ್ ಪಾತ್ರರಾಗಿದ್ದಾರೆ.
ಡಾ. ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಅವರ ಜೀವಿತಾವಧಿಯಲ್ಲಿ ಅವರಿಗೆ ಸಲ್ಲಬೇಕಾದ ಗೌರವವನ್ನು ದೇಶ ಸಲ್ಲಿಸಿಲ್ಲ ಎಂದು ಹೇಳಲೇಬೇಕಾಗುತ್ತದೆ. ರಾಜಕೀಯ ದೊಂಬರಾಟದಲ್ಲಿ ಅವರ ಕೊಡುಗೆಗಳನ್ನು ಕುರಿತು ಗಂಭೀರವಾಗಿ ಚರ್ಚೆ ನಡೆಯಲೇ ಇಲ್ಲ. ಅವರು ಪ್ರಧಾನಿಯಾಗಿ ಜಾರಿಗೊಳಿಸಿದ ಹತ್ತಾರು ಯೋಜನೆಗಳ ಪ್ರಯೋಜನವನ್ನು ದೇಶದ ಕಟ್ಟಕಡೆಯ ನಾಗರೀಕನವರೆಗೂ ಅನುಭವಿಸುತ್ತಲೇ ಇದ್ದಾರೆ. ನರೇಗಾ, ಆಧಾರ್, ಗ್ರಾಮೀಣ ಆರೋಗ್ಯ ಮಿಷನ್, ಶಿಕ್ಷಣ ಹಕ್ಕು, ಮಾಹಿತಿ ಹಕ್ಕು ಕಾಯಿದೆ… ಹೀಗೆ ಅವರ ಕೊಡುಗೆಗಳ ಸರಮಾಲೆ ಮುಂದುವರೆಯುತ್ತದೆ. ಅವರ ಅಗಲಿಕೆಯ ನಂತರವಾದರೂ ದೇಶ ಅವರ ಕೊಡುಗೆಗಳನ್ನು ಸ್ಮರಿಸಲೇಬೇಕಾಗುತ್ತದೆ.