ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ 38 ಒಡನಾಡಿಗಳು ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸುವ ಮೂಲಕ ತಮ್ಮ ಅಪರೂಪದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ಪ್ರಯಾಣ ಮಾಡುವ ಕನಸನ್ನು ನನಸು ಮಾಡಿದವರು ಬಂಗಾರಪ್ಪ ಅವರ ಪುತ್ರ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ. ಅವರು ತಮ್ಮ ತಂದೆಯ ಒಡನಾಡಿಗಳಿಗೆ ಈ ಅವಕಾಶ ಕಲ್ಪಿಸಿದ್ದಾರೆ.
ಬಂಗಾರಪ್ಪ ಅವರೊಂದಿಗೆ ವಿಮಾನದಲ್ಲಿ ಪ್ರಯಾಣಿಸಬೇಕು ಎನ್ನುವುದು ಅವರ ಆಪ್ತರ ಕನಸಾಗಿತ್ತು. ಆದರೆ ಅದು ಬಂಗಾರಪ್ಪ ಅವರ ಜೀವಿತಾವಧಿಯಲ್ಲಿ ಈಡೇರಿರಲಿಲ್ಲ. ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನಯಾನ ಮಾಡುವು ಮೂಲಕ ತಮ್ಮ ದಶಕಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.
ತಮ್ಮ ಹುಟ್ಟು ಹಬ್ಬದ ಅಂಗವಾಗಿ ಮಧು ಬಂಗಾರಪ್ಪ ಈ ವ್ಯವಸ್ಥೆ ಕಲ್ಪಿಸಿದ್ದರು. ಸೊರಬ ಕ್ಷೇತ್ರದ 38 ಬಂಗಾರಪ್ಪ ಅಭಿಮಾನಿಗಳು ಬೆಂಗಳೂರಿಗೆ ವಿಮಾನದಲ್ಲಿ ಆಗಮಿಸಿ ಸಂಭ್ರಮಿಸಿದರು. ಬೆಳಗ್ಗೆಯೇ ಎಲ್ಲ ಅಭಿಮಾನಿಗಳು ಸೊರಬದಿಂದ ಶಿವಮೊಗ್ಗ ನಗರಕ್ಕೆ ಆಗಮಿಸಿ ಅಲ್ಲಿಯೇ ಊಟ ಮಾಡಿಕೊಂಡು ಏರ್ ಪೋರ್ಟ್ ಗೆ ಆಗಮಿಸಿ ವಿಮಾನ ಹತ್ತಿದ್ದರು.
ಮಧು ಅವರೂ ಸಹ ಅವರೊಂದಿಗೆ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಿದರು. ಬೆಂಗಳೂರಿನಲ್ಲಿ ಉಳಿಯಲು ವ್ಯವಸ್ಥೆ ಮಾಡಿದ್ದರು.