“ಒಂದೊಂದು ಹನಿಗೂ ಲೆಕ್ಕ”

Most read

2024 ರ ಮಾರ್ಚ್ ನಲ್ಲಿ ವರದಿಯೊಂದು ಪ್ರಕಟವಾಗಿತ್ತು.

ವರದಿಯ ಸಾರಾಂಶವೇನೆಂದರೆ ವಿವಾಹಕ್ಕೆ ಸಜ್ಜಾಗಿದ್ದ ಹುಡುಗನೊಬ್ಬ ಬೆಂಗಳೂರಿನಲ್ಲಿ ನೆಲೆಸಿದ್ದಾನೆ ಎಂಬ ಒಂದೇ ಕಾರಣಕ್ಕೆ ಯುವತಿಯೊಬ್ಬಳು ಅವನನ್ನು ನಿರಾಕರಿಸಿದಳು ಎಂಬುದು. ನೀರಿನ ಅಭಾವವಿರುವ ಪ್ರದೇಶದಲ್ಲಿ ನೆಲೆಸಲು ಅವಳಿಗಿಷ್ಟವಿಲ್ಲ ಎಂಬುದು ಇಲ್ಲಿ ನೀಡಲಾಗಿದ್ದ ಕಾರಣ. ಈ ವರದಿಯಲ್ಲಿ ಅದೆಷ್ಟು ನಿಜಾಂಶವಿದೆ ಎಂಬುದು ಬೇರೆ ಸಂಗತಿ. ಸುಮ್ಮನೆ ಒಂದು ಚರ್ಚೆಗೋಸ್ಕರ ಈ ವರದಿಯಲ್ಲಿ ಕೊಂಚ ಉತ್ಪ್ರೇಕ್ಷೆಯೂ ಇದೆ ಎಂದಿಟ್ಟುಕೊಳ್ಳೋಣ. ಏಕೆಂದರೆ ಪ್ರಮುಖ ಸುದ್ದಿವಾಹಿನಿಗಳ ಜಾಲತಾಣದಲ್ಲಿ ಪ್ರಕಟವಾಗುವ ಸುದ್ದಿಗಳನ್ನು ಕೂಡ ನಂಬಲಾರದ “ಪೋಸ್ಟ್ ಟ್ರುಥ್” ಯುಗದಲ್ಲಿ ನಾವಿಂದು ಬದುಕುತ್ತಿದ್ದೇವೆ. ಹೀಗಾಗಿ ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡುವುದು ಈಗ ನಮ್ಮೆಲ್ಲರ ಅನಿವಾರ್ಯತೆ.

ಅದೇನೇ ಇರಲಿ. ನಮ್ಮ ಬೆಂಗಳೂರಿನಲ್ಲಿ ಉದ್ಭವಿಸಿರುವ ನೀರಿನ ಸಮಸ್ಯೆಯು ಈಗ ಗುಟ್ಟಿನ ವಿಚಾರವಾಗಿಯೇನೂ ಉಳಿದಿಲ್ಲ. ಜಲಕ್ಷಾಮಕ್ಕೆ ಸಂಬಂಧಪಟ್ಟಂತೆ ಅಪಾಯಕಾರಿ ಹಂತವನ್ನು ತಲುಪಿದ್ದ ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಗರದೊಂದಿಗೆ ಬೆಂಗಳೂರನ್ನು ತಳುಕು ಹಾಕಿದ್ದ ವಿಚಾರವು ಹಳತಾಗಿ ಈಗ ಬರೋಬ್ಬರಿ ಒಂದು ದಶಕವೇ ಕಳೆದಿದೆ. ಇವುಗಳೆಲ್ಲಾ ಕಾಲ್ಪನಿಕ ಫ್ಯಾಂಟಸಿ ಕತೆಗಳಲ್ಲ, ಬದಲಾಗಿ ನೈಜ ಸಮಸ್ಯೆ ಎಂಬುದು ನಮ್ಮಲ್ಲಿ ಬಹುತೇಕರಿಗೆ ಈಗ ನಿಧಾನವಾಗಿ ಮನದಟ್ಟಾಗುತ್ತಿದೆ ಕೂಡ. ಇದಕ್ಕೆ ಸರಕಾರವೂ ಹೊರತಲ್ಲ. ಆದರೆ ಇದು ಬೆಂಗಳೂರಿಗೆ ಮಾತ್ರ ಸೀಮಿತವೇ ಎಂಬುದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ. ಹೀಗಾಗಿ ನನ್ನನ್ನೂ ಸೇರಿದಂತೆ ಸದ್ಯ ಮೆಟ್ರೋ ಮಹಾನಗರಿಗಳಲ್ಲಿ ಬದುಕುತ್ತಿರುವ ಮಂದಿ ಇದನ್ನು ಒಮ್ಮೆಯಾದರೂ ಯೋಚಿಸಿರಲಿಕ್ಕಿಲ್ಲ ಎಂದರೆ ಅದು ಸತ್ಯಕ್ಕೆ ದೂರವಾದ ಮಾತಾಗಿಬಿಡುತ್ತದೆ.

ಬೆಂಗಳುರಿನಲ್ಲಿ ನೀರಿಗೆ ಹಾಹಾಕಾರ

ಉತ್ತರ ಕೊರಿಯಾದಲ್ಲಿರುವ ತೀವ್ರ ಬಡತನಕ್ಕೆ ಸಂಬಂಧಪಟ್ಟಂತೆ ಕೊರಿಯನ್ ಲೇಖಕಿ ಮತ್ತು ಸಾಮಾಜಿಕ ಹೋರಾಟಗಾರ್ತಿ ಯೋನ್ಮಿ ಪಾರ್ಕ್ ತನ್ನ ಬಾಲ್ಯ ಮತ್ತು ನಂತರದ ದಿನಗಳ ಬಗ್ಗೆ ಮನೋಜ್ಞವಾಗಿ ಬರೆಯುತ್ತಾರೆ. 90 ರ ದಶಕದಲ್ಲಾಗಿದ್ದ ಭೀಕರ ಕ್ಷಾಮದ ಅವಧಿಯಲ್ಲಿ ಅವರಿಗೆ ಒಂದು ಹೊತ್ತಿನ ಊಟ ಸಿಕ್ಕರೆ ಅದುವೇ ಒಂದು ದೊಡ್ಡ ಸಂಭ್ರಮವಾಗಿತ್ತು. ಯೋನ್ಮಿಗೆ ಅವಳ ಬಾಲ್ಯದಲ್ಲಿ ಬ್ರೆಡ್ಡುಗಳೇ ಕನಸಿನಲ್ಲಿ ಬರುತ್ತಿದ್ದವಂತೆ. ದೊಡ್ಡವಳಾಗಿ ಏನಾಗಬೇಕಮ್ಮಾ ಎಂದು ಯಾರಾದರೂ ಕೇಳಿದರೆ ತೃಪ್ತಿಯಾಗುವಷ್ಟು ರೊಟ್ಟಿ ತಿನ್ನಬೇಕು ಎಂಬುದೇ ಏಕೈಕ ಕನಸು. ಹಸಿವೆಯು ಮಿತಿ ಮೀರಿದಾಗ ಕಣ್ಣಿಗೆ ಸಿಕ್ಕ ಎಲೆಗಳನ್ನು ಜಗಿಯುತ್ತಿದ್ದಿದ್ದು, ಅದ್ಯಾವುದೋ ಎಲೆಯನ್ನು ತಿಂದು ನಾಲಗೆ ಪೂರಿಯಂತೆ ಬಾತುಹೋಗಿದ್ದು, ಬದು-ಬಿಲಗಳಲ್ಲಿ ಅಡಗಿ ಕೂರುತ್ತಿದ್ದ ಇಲಿಗಳ ಆಹಾರವನ್ನು ಕದ್ದು ತಿಂದಿದ್ದು, ಕೊನೆಗೇ ಏನೂ ಇಲ್ಲವೆಂದಾಗ ಹಾತೆಗಳನ್ನೇ ಸುಟ್ಟು ತಿಂದಿದ್ದು… ಹೀಗೆ ಬರೆಯುತ್ತಾ ಹೋಗುತ್ತಾರೆ ಯೋನ್ಮಿ. ಒಂದೇ ಒಂದು ಅನ್ನದ ಅಗುಳನ್ನು ಚೆಲ್ಲುವುದಿರಲಿ, ಅದು ಕಂಡರೇನೇ ಮುಕ್ಕಿಬಿಡುವಷ್ಟು ಹಪಾಹಪಿಯಿದ್ದ ದಿನಗಳವು ಎಂದು ಆ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅಭಾವ ಎನ್ನುವುದು ಜೀವನ್ಮರಣದ ಪ್ರಶ್ನೆಯಾಗಿ ಕಾಡುವುದು ಇಂತಹ ಭಯಾನಕ ಸನ್ನಿವೇಶಗಳಲ್ಲೇ.

ಇನ್ನು ನೀರಿನ ವಿಚಾರದಲ್ಲಿ ಇಂತಹ ಪರಿಸ್ಥಿತಿಯನ್ನು ನಾನು ಆಫ್ರಿಕಾದಲ್ಲಿ ಸ್ವತಃ ನೋಡಿದ್ದೆ. ಮನೆಯಂಗಳದಲ್ಲಿ ನಲ್ಲಿಯನ್ನು ಫಿಟ್ ಮಾಡಿಸಿಕೊಟ್ಟು, ಅದರಲ್ಲಿ ಸ್ಥಳೀಯ ನಗರ ನಿಗಮದಿಂದ ಸರಬರಾಜಾಗುತ್ತಿದ್ದ ನೀರು ಧಾರೆಯಾಗಿ ಬರುತ್ತಿದ್ದರೆ ಅಲ್ಲಿದ್ದ ಮಹಿಳೆಯರ ಕಂಗಳಲ್ಲಿ ಅಂದು ಅಶ್ರುಧಾರೆ. ಮುಚ್ಚಿಟ್ಟುಕೊಂಡಷ್ಟು ಉಕ್ಕುತ್ತಿದ್ದ ಆನಂದಬಾಷ್ಪ. ಇಂಥದ್ದೊಂದು ದಿನವನ್ನೂ ನೋಡುವಂತಾಗಲಿ ಎಂಬುದು ಇವರೆಲ್ಲರ ಬಹುದಿನಗಳ ಕನಸಾಗಿತ್ತಂತೆ. ನೀರೆಂದರೆ ಜೀವಜಲ ಎಂಬ ಉಕ್ತಿಯ ಮೌಲ್ಯವನ್ನು ನಿಜವಾಗಿ ಹೇಳಬಲ್ಲವರು ಇಂಥದ್ದೇ ಮಹಿಳೆಯರು. ಇದು ಗ್ರಾಮೀಣ ಭಾರತವೂ ಸೇರಿದಂತೆ ಹಲವು ದೇಶಗಳಲ್ಲಿ ಕಾಣಸಿಗುವ ಒಂದು ದೊಡ್ಡ ಸತ್ಯ.

ಆಫ್ರಿಕಾದಲ್ಲಿ ನೀರಿನ ಬವಣೆ

ಈ ಕಾರಣಕ್ಕಾಗಿಯೇ ನಾನು ನೀರನ್ನು ಗ್ರಾಮೀಣ ಮಹಿಳೆಯರ ಬದುಕಿಗೆ ಮತ್ತು ಅವರ ಸ್ವಾತಂತ್ರ್ಯದೊಂದಿಗೆ ತಳುಕು ಹಾಕುತ್ತೇನೆ. ಉದಾಹರಣೆಗೆ ಮನೆಯಂಗಳದ ನಲ್ಲಿಯಲ್ಲಿ ನೀರು ಬಂದರೆ ಅಂಗೋಲನ್ ಹಳ್ಳಿಯ ಆ ಗುಡಿಸಲಿನಲ್ಲಿರುವ ಹೆಣ್ಣುಮಕ್ಕಳು, ತಲೆಯ ಮೇಲೆ ಬಕೆಟ್ಟನ್ನು ಹೊತ್ತು ದಿನಕ್ಕೆರಡು ಬಾರಿ ಐದೈದು ಕಿಲೋಮೀಟರುಗಳಷ್ಟು ದೂರ ನಡೆಯಬೇಕಿಲ್ಲ. ಆ ಸಮಯದಲ್ಲಿ ಅವರು ಜೀವನೋಪಾಯಕ್ಕಾಗಿ ನಾಲ್ಕು ಕಾಸು ಹೆಚ್ಚು ಸಂಪಾದಿಸಬಹುದು. ತಮ್ಮ ಪುಟ್ಟ ಮಕ್ಕಳನ್ನು ನೋಡಿಕೊಳ್ಳಬಹುದು. ಒಂದರ್ಧ ತಾಸು ನಿರಾಳವಾಗಿ ನಿದ್ದೆ ಹೋಗಬಹುದು. ಇನ್ನುಳಿದಂತೆ ವಾರಕ್ಕೆರಡು ಬಾರಿಯಾದರೂ ಸ್ನಾನ ಮಾಡಬಹುದು. ಶುದ್ಧ ನೀರನ್ನು ಬಳಸುತ್ತಾ ತಮ್ಮ ಕುಟುಂಬದ ಸದಸ್ಯರನ್ನು ಅನಗತ್ಯ ಖಾಯಿಲೆಗಳಿಂದ ರಕ್ಷಿಸಿಕೊಳ್ಳಬಹುದು.

ಸಾಮಾನ್ಯವಾಗಿ ದೈನಂದಿನ ಚಟುವಟಿಕೆಗಳಿಗಾಗಿ ನೀರನ್ನು ತಂದು ಹೊತ್ತುಹಾಕುವ ಜವಾಬ್ದಾರಿಯು ಹೆಣ್ಣುಮಕ್ಕಳ ಮೇಲೆಯೇ ಹೆಚ್ಚಿರುವುದರಿಂದ ಅವರು ಈ ಬಗೆಯ ಸನ್ನಿವೇಶಗಳೊಂದಿಗೆ ತಮ್ಮನ್ನು ತಾವು ಸುಲಭವಾಗಿ ಗುರುತಿಸಿಕೊಳ್ಳ  ಬಲ್ಲರು. ಹೀಗಾಗಿ ಜಲಸಂಬಂಧಿ ಚಳುವಳಿಗಳಲ್ಲಿ, ಚರ್ಚೆಗಳಲ್ಲಿ, ಸಂಕಿರಣಗಳಲ್ಲಿ ಅವರ ಭಾಗವಹಿಸುವಿಕೆಯ ಪ್ರಮಾಣವೂ ಹೆಚ್ಚಿರುತ್ತದೆ. ಆದರೆ ಸೊಮಾಲಿಯನ್ ಸೂಪರ್ ಮಾಡೆಲ್ ಮತ್ತು ಲೇಖಕಿ ವಾರಿಸ್ ಡಿರೀ ಈ ಬಗೆಯ ಅದ್ದೂರಿ ಸಂಕಿರಣಗಳನ್ನೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಜಗತ್ತಿನಾದ್ಯಂತ ವರ್ಷಕ್ಕೆ ಹಲವು ಬಾರಿ ವಿವಿಧ ಐಷಾರಾಮಿ ಹೋಟೇಲುಗಳಲ್ಲಿ ಆಯೋಜಿಸಲಾಗುವ ಈ ಸಂಕಿರಣಗಳಲ್ಲಿ ಚರ್ಚೆಯಾಗುವ ಅದೆಷ್ಟು ವಿಚಾರಗಳು ಆಯಾ ದೇಶಗಳ ಸಂಸತ್ತು-ಸರಕಾರಗಳನ್ನು ತಲುಪುತ್ತವೆ, ಇಲ್ಲಿ ಪ್ರಸ್ತುತ ಪಡಿಸಲಾಗುವ ಅದೆಷ್ಟು ಸಂಶೋಧನಾ ಪ್ರಬಂಧಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ, ಇಲ್ಲಿಯ ಅದೆಷ್ಟು ಭಾಷಣಗಳು ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರವಾಗುತ್ತವೆ ಅಂತೆಲ್ಲಾ ಕೇಳಿ ಚಿಂತನಾರ್ಹ ಪ್ರಶ್ನೆಗಳನ್ನು ಎತ್ತುತ್ತಾರೆ. ಹಾಗೆ ನೋಡಿದರೆ ಜಲಸಂಪತ್ತಿನ ಸಂರಕ್ಷಣೆಯನ್ನೂ ಸೇರಿಸಿ ಇದು ಬಹುತೇಕ ಎಲ್ಲಾ ಕಾರ್ಯಕ್ಷೇತ್ರಗಳಿಗೂ ಅನ್ವಯವಾಗುವ ಪ್ರಶ್ನೆ. 

ಜಲ ಸಂರಕ್ಷಣೆ ನಮ್ಮ ಜವಾಬ್ದಾರಿ

ಅಂದಹಾಗೆ ಈ ಅಂಕಣವನ್ನು ಬರೆಯುತ್ತಿರುವ ಹೊತ್ತಿಗೆ ಪಿ. ಸಾಯಿನಾಥ್ ನೇತೃತ್ವದ “ಪರಿ” ತಂಡದ ಬರಹಗಾರರಲ್ಲೊಬ್ಬರಾದ ಪಾರ್ಥ ಎಮ್. ಎನ್. ರವರು ಪ್ರತಿಷ್ಠಿತ ವನ್ ವರ್ಲ್ಡ್‌ ಮೀಡಿಯಾ ಪುರಸ್ಕಾರದ ಲಾಂಗ್ ಲಿಸ್ಟ್ ಗೆ ಆಯ್ಕೆಯಾಗಿರುವ ಸುದ್ದಿ ಬಂದು ತಲುಪಿದೆ. 110 ಕ್ಕೂ ಹೆಚ್ಚು ದೇಶಗಳ ಮಾಧ್ಯಮ ಬರಹಗಾರರು ಭಾಗಿಯಾಗಿದ್ದ ಈ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ, ಫ್ರೀಲ್ಯಾನ್ಸ್ ಪತ್ರಕರ್ತರಾಗಿರುವ ಪಾರ್ಥ ಟಾಪ್ – 10 ರಲ್ಲೊಂದು ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಾರತದಲ್ಲಿ ಭಯಾನಕವಾಗಿ ಕ್ಷೀಣಿಸುತ್ತಿರುವ ಜಲಸಂಪತ್ತು ಸೇರಿದಂತೆ ಒಟ್ಟಾರೆಯಾಗಿ ಗ್ರಾಮೀಣ ಭಾರತದ ವಿವಿಧ ಆಯಾಮಗಳ ಬಗೆಗಿನ ಹಲವು ವರದಿಗಳನ್ನು ಓದುಗರ ಮುಂದಿಟ್ಟ ಹೆಗ್ಗಳಿಕೆ “ಪರಿ” (ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾ: https://ruralindiaonline.org/en/) ತಂಡದ್ದು. “ಪರಿ” ತಂಡವು ದಾಖಲಿಸುತ್ತಿರುವ ಕಥನಗಳು ಮುಂಬರುವ ದಿನಗಳಲ್ಲಿ ಗ್ರಾಮೀಣ ಭಾರತದ ಬಗ್ಗೆ ಬರಹ-ಆಡಿಯೋ ಮತ್ತು ವೀಡಿಯೋ ರೂಪಗಳಲ್ಲಿ ಲಭ್ಯವಾಗಬಲ್ಲ ದೈತ್ಯ ಮತ್ತು ಏಕೈಕ ಡಾಟಾಬೇಸ್ ಆಗಲಿದೆ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಇಲ್ಲಿರುವ ವರದಿಗಳು ಇಂದು ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ.

ಮಹಾನಗರಗಳಲ್ಲಿ ಈವರೆಗೆ ನಾವು ಕಂಡಿರುವ ಸಾಮಾನ್ಯ ದೃಶ್ಯಗಳೆಂದರೆ ಯಾವತ್ತೂ ಬತ್ತದಿರುವ ನಲ್ಲಿಗಳು, ಖಾತೆ-ರಸೀದಿಗಳ ಲೆಕ್ಕವಿಲ್ಲದ ಪೋಲು ಮತ್ತು ಚರ್ಚೆಯ ವಿಷಯವೇ ಆಗದಿರುವ ನೀರಿನ ದೈನಂದಿನ ಬಳಕೆ. ಆದರೆ ಈ ದುಬಾರಿ ವಿಲಾಸವು ಮುಂದೆಯೂ ಇರಲಿದೆ ಎಂಬ ಬಗ್ಗೆ ಮಾತ್ರ ಹೇಳುವುದು ಕಷ್ಟ. ಹೀಗಿರುವಾಗ ಇಂದು ಮಹಾನಗರಿಯಲ್ಲಿರುವ ನಮ್ಮ ಚಂದದ ಆಫೀಸಿನಲ್ಲಿ, ವೈಭವೋಪೇತ ಅಪಾರ್ಟ್‍ಮೆಂಟ್ ಗಳಲ್ಲಿ ದಿನವಿಡೀ ನೀರಿನ ವ್ಯವಸ್ಥೆಯಿದೆ ಎಂದಾದಲ್ಲಿ, ಅದು ಮತ್ಯಾವುದೋ ನಗರೇತರ ಪ್ರದೇಶದಲ್ಲಿರುವ ವ್ಯಕ್ತಿಯೊಬ್ಬನಿಂದ ಕಸಿದುಕೊಂಡ ಅವನ ಪಾಲು ಎಂಬ ಕಾಳಜಿಯು ನಮಗಿರಬೇಕಾಗಿರುವುದು ಅತ್ಯವಶ್ಯಕ. 

ಏಕೆಂದರೆ ನಮ್ಮ ನಡುವೆ ನೀರೆಂಬ ಟಿಕ್-ಟಿಕ್ ಬಾಂಬಿನ ಕ್ಷಣಗಣನೆಯು ಅದಾಗಲೇ ಶುರುವಾಗಿದೆ.

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್, ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article