ಪ್ರಜ್ವಲ್ ಗೆದ್ದರೂ ಆತನನ್ನು ಬಿಡೋದಿಲ್ಲ: ಬಡಗಲಪುರ ನಾಗೇಂದ್ರ

Most read

ಹಾಸನ: ಪ್ರಜ್ವಲ್‌ ರೇವಣ್ಣ ಎಸಗಿರುವುದು ಇಡೀ ನಾಗರಿಕ ಸಮಾಜವೇ ತಲೆತಗ್ಗಿಸಬೇಕಾದ ಪ್ರಕರಣ. ಈ ದೇಶದಲ್ಲಿ ಕಾನೂನಿದೆ. ತಪ್ಪಿತಸ್ಥರು ಕಾನೂನಿಗೆ ಒಳಪಟ್ಟು ಶಿಕ್ಷೆಗೆ ಗುರಿಯಾಗಲೇಬೇಕು. ಅದನ್ನು ನೋಡಿಕೊಳ್ಳಲು ವ್ಯವಸ್ಥೆಯಿದೆ. ವ್ಯವಸ್ಥೆಯೇ ದಾರಿ ತಪ್ಪುದ್ರೆ ಅದನ್ನು ದಾರಿಗೆ ತರಲು ನಾವಿದ್ದೇವೆ. ಆ ಸಂದೇಶವನ್ನು ಈ ಹೋರಾಟ ಕೊಡುತ್ತಿದೆ ಎಂದು ರೈತಸಂಘದ ಮುಖಂಡ ಬಡಗಲಪುರ ನಾಗೇಂದ್ರ ಹೇಳಿದರು.

ಕಾಮಕಾಂಡ ನಡೆಸಿ ವಿದೇಶಕ್ಕೆ ಪರಾರಿಯಾಗಿರುವ ಸಂಸದ, ಎನ್ ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣನನ್ನು ಬಂಧಿಸಬೇಕು ಮತ್ತು ಸಂತ್ರಸ್ತೆಯರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಇಂದು ನಡೆಯುತ್ತಿರುವ ಬೃಹತ್ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ವಿಕೃತ ಲೈಂಗಿಕ ಹಗರಣಕ್ಕೆ ಸಮನಾಗಿ, ಅದರ ಜತೆಗೆ ಪೆನ್ ಡ್ರೈವ್ ಹಂಚಿಕೆ ‌ ಆಗಿದೆ. ಇದೆಲ್ಲವೂ ಅಧಿಕಾರ, ಸಂಪತ್ತಿನ ಅಹಂಕಾರದ ಮದದಿಂದ ನಡೆದಿದೆ. ಅದು ನಡೆಯಲ್ಲ ಅನ್ನೋ ಸಂದೇಶ ಕೊಡಲು ನಾವಿಂದು ಸೇರಿದ್ದೇವೆ. ಇದು ಹಾಸನಕ್ಕೆ ಮಾತ್ರ ಸೀಮಿತವಲ್ಲ. ಬಸವಣ್ಣ, ಕುವೆಂಪು ಹುಟ್ಟಿರುವ ನಾಡಿನಲ್ಲಿ, ಘನತೆ ಗೌರವಕ್ಕೆ ಚ್ಯುತಿ ತಂದಿರುವ ಈ ರೀತಿಯ ಪ್ರಕರಣಗಳು ಇನ್ನು ಮುಂದೆ ಎಲ್ಲಿಯೇ ನಡೆದರೂ ನಾವು ಬಿಡುವುದಿಲ್ಲ. ಮುಖ್ಯವಾಗಿ ಜೂನ್ 4ರಂದು ಪ್ರಜ್ವಲ್ ಗೆದ್ದರೂ ಆತನನ್ನು ರಾಜಿನಾಮೆ ಕೊಡಿಸುವ ನಿಟ್ಟಿನಲ್ಲಿ ಮುಂದಿನ ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು.

More articles

Latest article