ಬೆಂಗಳೂರು: ಜರ್ಮನಿಯ ನಾಜಿ ಕಾಲಘಟ್ಟದಲ್ಲಿ ಹಿಟ್ಲರ್ ಎಲ್ಲೇ ಹೋದರೂ ಬಂದರೂ, ಏ ಹಿಟ್ಲರ್, ಏ ಹಿಟ್ಲರ್ ಎನ್ನುವ ಅವನ ಬಾಲಬಡುಕರಿದ್ದರು. ಅದೇ ರೀತಿ ಈಗ ಜೈ ಮೋದಿ ಜೈ ಮೋದಿ ಎನ್ನುತ್ತಾರೆ. ಮೋದಿ ಹೆಸರಿನ ಜೊತೆ ಜೀ ಕೂಡ ಸೇರಿಸಿಕೊಂಡಿದ್ದಾರೆ. ಈಗೀಗ ಅವರು ಪಕ್ಷದ ಬಗ್ಗೆಯೂ ಮಾತಾಡಲ್ಲ, ಮೋದಿ ಸರ್ಕಾರ, ಮೋದಿ ಗ್ಯಾರಂಟಿ ಎಂದು ಹೇಳುತ್ತಾರೆ, ವ್ಯಕ್ತಿಪೂಜೆ ಪರಾಕಾಷ್ಠೆ ತಲುಪಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿ ನಾಯಕರನ್ನು ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಮೋದಿಯವರು ಮೈಸೂರು ಭಾಷಣ ಮುಗಿಸಿ ಮಂಗಳೂರಿನಲ್ಲಿ ರೋಡ್ ಶೋ ಮಾಡಿದ್ದಾರೆ. ಜನರ ಪ್ರಶ್ನೆಗಳಿಗೆ, ಸರ್ಕಾರ ಎತ್ತಿರುವ ವಿಷಯಗಳಿಗೆ ಉತ್ತರ ಕೊಡುತ್ತಾರೆ. ಕರ್ನಾಟಕಕ್ಕೆ ಆಗಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಾರೆ ಎಂದು ಭಾವಿಸಿದ್ದೆವು. ʻಬಂದ ಪುಟ್ಟ, ಹೋದ ಪುಟ್ಟʼ ಎನ್ನುವ ರೀತಿಯಲ್ಲಿ ಬಂದು ಕೈಬೀಸಿಕೊಂಡು ಹೋಗಿದ್ದಾರೆ ಎಂದು ಗುಂಡೂರಾವ್ ಕಿಡಿಕಾರಿದರು
ಹಿಟ್ಲರ್ ಹೇಗೆ ತನ್ನ ಹೆಸರಲ್ಲಿ, ತನ್ನ ಬಗ್ಗೆ ಯೋಜನೆ ಮಾಡುತ್ತಿದ್ದನೋ ಅದೇ ರೀತಿಯಲ್ಲಿ ಮೋದಿ ವರ್ತಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹೊಸ ಸಮಸ್ಯೆ ಉದ್ಭವಿಸಿದಂತೆ ಮಾತನಾಡಿದ್ದಾರೆ. ಐಟಿ ಕ್ಯಾಪಿಟಲ್ ಯಾರು ಮಾಡಿದ್ದು? ಮೋದಿ ಬರುವ ಮೊದಲು ಇಂಟರ್ನೆಟ್ ಇರಲಿಲ್ಲವೇ?. ಕಂಪ್ಯೂಟೀಕರಣ ಇರಲಿಲ್ಲವೇ? ಡಿಜಿಟಲ್ ಇಂಡಿಯಾ ಬಂದು ಬಹಳ ದಶಕವಾಗಿದೆ. ಮೋದಿ ಸರ್ಕಾರದ ಮೊದಲು ಸಾಕಷ್ಟು ಉಪಗ್ರಹಗಳನ್ನು ಉಡಾವಣೆ ಮಾಡಿಲ್ಲವೇ? ಎಂದು ಪ್ರಶ್ನಿಸಿದರು.
ಎಕ್ಸ್ ಪ್ರೆಸ್ ವೇ ನಾವು ಮಾಡುತ್ತೇವೆ ಎನ್ನುತ್ತಾರೆ. ಅದಕ್ಕೂ ಮೊದಲು ಹೈವೇಗಳೇ ಇರಲಿಲ್ವೇ? 10 ವರ್ಷಗಳಲ್ಲಿ ಇವರ ವಿನೂತನ ಕೊಡುಗೆ ಏನು? ಅವರಿಗೆ ಹೇಳೋಕೆ ಏನೂ ಇಲ್ಲ. ರಾಮಮಂದಿರ ನಿರ್ಮಾಣ ಮಾಡಿದ್ವಿ ಅಂತಾರೆ. ಕೋರ್ಟ್ ತೀರ್ಪು ಬಂದ ಮೇಲೆ ಆಯ್ತು. ಹೇಳಿಕೊಳ್ಳಲಿ ಬಿಡಿ ಪರವಾಗಿಲ್ಲ. ಪಿಎಂ ಅವಾಜ್ ಯೋಜನೆಯಲ್ಲಿ 3 ಕೋಟಿ ಮನೆ ಅಂತಾರೆ. ಆದರೆ 1 ಲಕ್ಷ 80 ಸಾವಿರ ಮನೆಗಳು ಪೂರ್ಣ ಆಗಲೇ ಇಲ್ಲ.
ಇವರ ಮನೆಗಳು ಆಗಲೇ ಇಲ್ಲ ಬಿಡಿ. ವಸತಿ ಯೋಜನೆ ಇವರೊಬ್ಬರದ್ದೇ ಅಲ್ಲ ಬಿಡಿ. ಫಲಾನುಭವಿಗಳೂ ಕೂಡ 4.5 ಲಕ್ಷ ರುಪಾಯಿ ಲಕ್ಷ ಕೊಡಬೇಕು. ಆದರೆ ನಾವು ಬಂದ ಮೇಲೆ 3.5 ಲಕ್ಷ ಕೊಟ್ಟಿದ್ದೇವೆ. ಮೇಜರ್ ಕಾಂಟ್ರಿಬ್ಯೂಶನ್ ನಮ್ದು. ಹೆಸರು ಮಾತ್ರ ಅವರದ್ದು. ಕೇಂದ್ರದ ವಸತಿ ಯೋಜನೆಗಳಿಗೆ ನಾವು ಶೇ. 65ರಷ್ಟು ಹಣ ಕೊಡುತ್ತೇವೆ. ಹೆಸರು ಅವರು ತೆಗೆದುಕೊಳ್ಳುತ್ತಾರೆ ಎಂದರು.