ಹಾವೇರಿ ಲೋಕಸಭಾ ಟಿಕೆಟ್ ಪುತ್ರ ಕಾಂತೇಶ್‍ಗೆ ಸಿಗದ ಕಾರಣ ನಿಗಿನಿಗಿ ಕೆಂಡವಾಗಿರುವ ಆಗಿರುವ ಈಶ್ವರಪ್ಪ ಬಿಜೆಪಿಗರ ಯಾರ ಮಾತಿಗೂ ಬಗ್ಗುತ್ತಿಲ್ಲ. ಇದರ ನಡುವೆಯೇ ಪ್ರಧಾನಿ ಮೋದಿ ಇಂದು ಶಿವಮೊಗ್ಗದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.
ಶಿವಮೊಗ್ಗಕ್ಕೆ ಸೋಮವಾರ ಪ್ರಧಾನಿ ಮೋದಿ (Narendra Modi) ಆಗಮಿಸ್ತಿರುವ ಹಿನ್ನೆಲೆಯಲ್ಲಿ ಇಂದು ಈಶ್ವರಪ್ಪ ಮನವೊಲಿಕೆಗೆ ಯತ್ನ ನಡೀತ್ತಿದಾರೂ ಯಾವುದಕ್ಕೂ ಸಂಧಾನವಾಗದೇ ಈಶ್ವರಪ್ಪ ಹೊರನಡೆದಿದ್ದಾರೆ. ಸಂಧಾನಕ್ಕೆ ಬಂದಿದ್ದ ಚುನಾವಣಾ ಉಸ್ತುವಾರಿ ರಾಧಾಮೋಹನ್ ಅಗರ್ವಾಲ್ ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುವ ಮೋದಿ ಕಾರ್ಯಕ್ರಮಕ್ಕೆ ಹೋಗಲ್ಲ
ನಾನು ಯಾವ ಕಾರಣಕ್ಕೆ ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ರಾಧಾಮೋಹನ್ ಅಗರ್ವಾಲ್ ಅವರಿಗೆ ಹೇಳಿದ್ದೇನೆ. ಗೆದ್ದ ನಂತರ ಮೋದಿಗೆ ಬೆಂಬಲ ಕೊಡ್ತೆನೆ. ಆದರೆ ಈಗ ಶಿವಮೊಗ್ಗದಲ್ಲಿ ನಡೆಯುವ ಮೋದಿ ಕಾರ್ಯಕ್ರಮಕ್ಕೆ ನಾನು ಹೋಗಲ್ಲ. ತಾಯಿಯಂತಿರುವ ಪಕ್ಷದ ಕತ್ತನ್ನು ಅಪ್ಪ, ಮಗ ಹಿಸುಕುತ್ತಿದ್ದಾರೆ. ಇದರಿಂದ ತಪ್ಪಿಸಲು ನಾನು ಶಿವಮೊಗ್ಗದಿಂದ ಸ್ಪರ್ಧಿಸುತ್ತಿದ್ದೇನೆ. ಚುನಾವಣಾ ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಈಶ್ವರಪ್ಪ ಖಡಕ್ಕಾಗಿ ನುಡಿದಿದ್ದಾರೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರವಾಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್, ಶಾಸಕರಾದ ಆರಗ ಜ್ಞಾನೇಂದ್ರ, ಡಿ.ಎಸ್.ಅರುಣ್, ಎನ್.ರವಿಕುಮಾರ್ ಅವರು ಈಶ್ವರಪ್ಪ ಅವರನ್ನು ಭಾನುವಾರ ಭೇಟಿ ಮಾಡಿ ಸಂಧಾನಕ್ಕೆ ಯತ್ನಿಸಿದ್ದಾರೆ. ಪಕ್ಷದ ಪ್ರಮುಖರನ್ನು ಮನೆಯಲ್ಲಿಯೇ ಬಿಟ್ಟು ಈಶ್ವರಪ್ಪ ಹೊರನಡೆದಿದ್ದು, ಅವರು ಸುಮಾರು ಹೊತ್ತು ಕಾದು ಅಲ್ಲಿಂದ ಬೇಸರದಿಂದ ಹೊರನಡೆದಿದ್ದಾರೆ.