ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬಹಿರಂಗವಾಗಿ ಸಂಸದ ಡಿಕೆ ಸುರೇಶ್ ಅವರನ್ನು ಗುರಿಯಾಗಿಸಿಕೊಂಡು ಮಾಜಿ ಡಿಸಿಎಂ ಕೆ.ಎಸ್.ಈಶ್ವಪ್ಪ ನೀಡಿದ್ದ ಹೇಳಿಕೆ ವಿರುದ್ಧ ದಾವಣಗೆರೆ ನಗರದ ಬಡಾವಣೆ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇತ್ತ ಬೆಂಗಳೂರಿನಲ್ಲೂ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಾಗಿದೆ.
ನಿಜಲಿಂಗಪ್ಪ ಬಡಾವಣೆಯ ಕಾಂಗ್ರೆಸ್ ಮುಖಂಡ ಹನುಮಂತ ಎಂಬುವರು ನೀಡಿದ ದೂರನ್ನು ಆಧರಿಸಿ ಇಲ್ಲಿನ ಬಡಾವಣೆ ಠಾಣೆಯಲ್ಲಿ ಐಪಿಸಿ ಸೆಕ್ಷನ್ 505 (1) (ಸಿ), 505 (2) ಮತ್ತು 506 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಗುರುವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕೆಎಸ್ ಈಶ್ವರಪ್ಪ ನೀಡಿರುವ ಹೇಳಿಕೆ ಜನ, ಸಮುದಾಯ, ಗುಂಪುಗಳ ನಡುವೆ ದ್ವೇಷ ಭಾವನೆ ಉಂಟುಮಾಡುತ್ತದೆ. ಗಲಭೆಗಳು ಜರುಗಬಹುದೆಂದು ಗೊತ್ತಿದ್ದರೂ ಪ್ರಚೋದನಾಕಾರಿ ಹೇಳಿಕೆ ನೀಡಿದ್ದು, ಜನರ ಮಧ್ಯೆ ಗಲಭೆಗಳಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವವಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹನುಮಂತ ದೂರು ನೀಡಿದ್ದರು. ಈ ಆಧಾರದ ಮೇಲೆ ಪೊಲೀಸರು FIR ದಾಖಲಿಸಿದ್ದಾರೆ.
ಈಶ್ವರಪ್ಪ ವಿರುದ್ಧ ಬೆಂಗಳೂರಲ್ಲೂ ಕೇಸ್ ದಾಖಲು
ದಾವಣಗೆರೆಯ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರಾದ ಡಿಕೆ ಸುರೇಶ್ ಹಾಗೂ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿನಯ್ ಕುಲಕರ್ಣಿ ಅವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ಬಹಿರಂಗವಾಗಿ ಭಾಷಣದ ಮೂಲಕ ಭಯೋತ್ಪಾದನೆಗೆ ಪ್ರಚೋದಿಸಿರುವ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪನ ವಿರುದ್ಧ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಮತ್ತು ಸಂಸದ ಡಿಕೆ ಸುರೇಶ್ ಅವರಿಗೆ ಪೊಲೀಸ್ ಭದ್ರತೆ ನೀಡಬೇಕು ಎಂದು ಯಶವಂತಪುರ ಕಾಂಗ್ರೆಸ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಶಶಾಂಕ್ ಎಸ್ ಗೌಡ ಯಶವಂತಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಈಶ್ವರಪ್ಪ ಹೇಳಿದ್ದೇನು?
‘ದೇಶದ ವಿಭಜನೆ ಮಾಡುವ, ಭಾರತವನ್ನು ಛಿದ್ರಗೊಳಿಸುವ ಮನಸ್ಥಿತಿ ಹೊಂದಿರುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತರಬೇಕು,’’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದ್ದರು. ದಾವಣಗೆರೆ ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಬಿಜೆಪಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದದ್ದರು,
ಕಾಂಗ್ರೆಸ್ ಮುಖಂಡರಾದ ಡಿ.ಕೆ. ಸುರೇಶ್ ಹಾಗೂ ವಿನಯ್ ಕುಲಕರ್ಣಿ, ದಕ್ಷಿಣ ಭಾರತವನ್ನು ಪ್ರತ್ಯೇಕ ದೇಶ ಘೋಷಿಸಬೇಕು ಎನ್ನುತ್ತಿದ್ದಾರೆ. ಆದರೆ ದೇಶದ್ರೋಹಿಗಳ ಈ ಕನಸು ನನಸಾಗಲು ಬಿಜೆಪಿ ಎಂದೂ ಅವಕಾಶ ನೀಡುವುದಿಲ್ಲ,’’ ಎಂದು ಹೇಳಿದ್ದರು.