ಸಮಾನತೆಯ ಹೋರಾಟಗಾರ ಜಯಕುಮಾರ್‌ ನಿಧನಕ್ಕೆ ಕಂಬನಿಯ ಮಹಾಪೂರ

Most read

ಬೆಂಗಳೂರು: ವೃತ್ತಿಯಿಂದ ಪತ್ರಕರ್ತರಾದರೂ ಸಾಮಾಜಿಕ ಹೋರಾಟವನ್ನೇ ತಮ್ಮ ಬದುಕಿನ ಮಾರ್ಗವನ್ನಾಗಿಸಿಕೊಂಡಿದ್ದ ಆರ್.ಜಯಕುಮಾರ್‌ ನಿಧನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ನಾಡಿನ ಗಣ್ಯರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಕಂಬನಿ ಮಿಡಿದಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಸ್ಟ್‌ ಹಾಕಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿರಿಯ ಪತ್ರಕರ್ತ ಮತ್ತು ಸಾಮಾಜಿಕ ಹೋರಾಟಗಾರ ಆರ್. ಜಯಕುಮಾರ್ ನಿಧನದಿಂದ ದು:ಖಿತನಾಗಿದ್ದೇನೆ. ಕಮ್ಯುನಿಸ್ಟ್ ಸಿದ್ದಾಂತಕ್ಕೆ ಒಲಿದು ಸಂಘಟನೆ ಮತ್ತು ಹೋರಾಟದ ಹಾದಿಯನ್ನು ಆರಿಸಿಕೊಂಡಿದ್ದ ಜಯಕುಮಾರ್ ಬದುಕಿನುದ್ದಕ್ಕೂ ಬಡವರು, ಶೋಷಿತರು ಮತ್ತು ಅವಕಾಶ ವಂಚಿತರ ಪರವಾಗಿ ದನಿ ಎತ್ತುತ್ತಾ ಬಂದವರು. ಜಯಕುಮಾರ್ ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವೂ ಸೇರಿದಂತೆ ನಾನಾ ಪತ್ರಕರ್ತ ಸಂಘಟನೆಗಳು ಜಯಕುಮಾರ್‌ ಅವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿವೆ.

ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಹೋರಾಟ, ಸಂಘಟನೆ, ಭ್ರಷ್ಟಾಚಾರ ವಿರೋಧಿ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಜಯಕುಮಾರ್, ಬಿ.ಕಾಂ. ಪದವಿ ನಂತರ ಸಂಯುಕ್ತ ಕರ್ನಾಟಕ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪಾದಾರ್ಪಣೆ ಮಾಡಿದ್ದರು. ನಂತರ ವಿಜಯ ಕರ್ನಾಟಕ, ಉದಯ ಟಿವಿ, ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದರು. ಇದಕ್ಕೂ ಮುನ್ನ ವಿದ್ಯಾರ್ಥಿಯಲ್ಲಿ ಸಕ್ರಿಯವಾಗಿದ್ದ ಅವರು, ಭಾರತ ವಿದ್ಯಾರ್ಥಿ ಫೆಡರೇಷನ್(SFI) ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 

ಇತ್ತೀಚಿನ ವರ್ಷಗಳಲ್ಲಿ ಪತ್ರಿಕಾ ವೃತ್ತಿಯಿಂದ ಹೊರಬಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಸ್ಥಾಪಿಸಿರುವ ಮಾನವ ಬಂಧುತ್ವ ವೇದಿಕೆಯ ಬೆಂಗಳೂರು ವಿಭಾಗೀಯ ಸಂಚಾಲಕರಾಗಿ ಸೇವೆ ಸಲ್ಲಿಸುತ್ತ, ಬುದ್ಧ, ಬಸವ, ಅಂಬೇಡ್ಕರ್, ಸಂವಿಧಾನ ವಿಷಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದರು.

ಜಯಕುಮಾರ್‌ ಅವರ ಆತ್ಮ ಕಥನ ‘ಕಾಡು ಹಾದಿಯ ಬೆಳಕಿನ ಜಾಡು’ ಕೃತಿ ಇತ್ತೀಚೆಗೆ ಬಿಡುಗಡೆಯಾಗಿ, ಎರಡನೇ ಮುದ್ರಣ ಕಂಡಿತ್ತು. ಗಾಂಧಿ ಮರೆತ ನಾಡಿನಲ್ಲಿ ಕೃತಿ ಬಿಡುಗಡೆಗೆ ಸಿದ್ಧವಾಗಿತ್ತು.

ಕಾಲೇಜು ದಿನಗಳಿಂದಲೇ ವೈಚಾರಿಕ ಚಿಂತನೆ, ಸಾಮಾಜಿಕ ನ್ಯಾಯ, ಸಮಾಜವಾದಿ ಸಮಾಜದ ಗುರಿಯ ಕಡೆ ಆಕರ್ಷಿತರಾಗಿದ್ದ ಇವರು, ವಿದ್ಯಾರ್ಥಿ ಮುಖಂಡನಾಗಿ ಬೆಳೆದರು. ಕೊಡಗು ಜಿಲ್ಲೆಯ ಬೋಯಿಕೇರಿ ಗ್ರಾಮದಲ್ಲಿ ಹುಟ್ಟಿದ ಇವರು ಅಲ್ಲೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಬಳಿಕ ಮಡಿಕೇರಿ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ನಡೆಸಿದರು. ಮುಂದಿನ ವಿದ್ಯಾಭ್ಯಾಸವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರದ ಭಂಡಾರ್‌ಕರ್ ಕಾಲೇಜಿನಲ್ಲಿ ಮುಂದುವರೆಸಿ ಬಿ.ಕಾಂ. ಪದವಿ ಗಳಿಸಿದರು. ಈ ಸಂದರ್ಭದಲ್ಲಿ ದೇಶದ ಪ್ರಮುಖ ವಿದ್ಯಾರ್ಥಿ ಸಂಘಟನೆಯಾದ ಭಾರತ ವಿದ್ಯಾರ್ಥಿ ಫೆಡರೇಷನ್ (SFI) ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದರು. ರಾಜ್ಯದ ಎಲ್ಲೆಡೆ ಈ ಸಂಘಟನೆ ಮತ್ತು ವಿದ್ಯಾರ್ಥಿಗಳಲ್ಲಿ ವೈಚಾರಿಕ ಚಿಂತನೆ ಬೆಳೆಸಲು ಕಾರ್ಯವನ್ನು ನಡೆಸಿದರು. ಬಳಿಕ ಡಿವೈಎಫ್‌ಐ ಯುವ ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ರಾಜ್ಯದಲ್ಲಿ ಸೇವೆ ಸಲ್ಲಿಸಿದರು. ನ್ಯಾಯಮೂರ್ತಿ ನಾಗಮೋಹನ್ ದಾಸ್, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಅವರು ಈ ಚಳವಳಿಯಲ್ಲಿ ಇವರ ಒಡನಾಡಿಗಳಾಗಿದ್ದರು.

ಡಿ.ಆರ್. ನಾಗರಾಜ್, ದಲಿತ ಕವಿ ಸಿದ್ಧಲಿಂಗಯ್ಯ, ಉಡುಪಿಯ ಜಿ.ರಾಜಶೇಖರ್, ಚಿಂತಕ ಡಾ. ಭಾಸ್ಕರ ಮಯ್ಯ, ಡಾ. ಪುರುಷೋತ್ತಮ ಬಿಳಿಮಲೆ, ಡಾ. ಎಲ್. ಹನುಮಂತಯ್ಯ, ರಂಗಕರ್ಮಿ ಪ್ರಸನ್ನ, ಸಿ.ಜಿ.ಕೆ., ಕಾರ್ಮಿಕ ಮುಖಂಡರಾದ ಎಂ.ಕೆ.ಭಟ್, ಕೇರಳದ ಮಾಜಿ ಶಿಕ್ಷಣ ಸಚಿವ ಎಂ.ಎ.ಬೇಬಿ ಮೊದಲಾದವರು ಇವರ ಸಹಪಾಠಿಗಳು, ಮಾರ್ಗದರ್ಶಕರೂ ಆಗಿದ್ದರು.

‘ಸಮುದಾಯ’ ರಂಗಚಳವಳಿ, ದಸಂಸ ಚಳವಳಿ ಸ್ಥಾಪನೆಯ ದಿನಗಳಲ್ಲೂ ಜಯಕುಮಾರ್ ಅವರು ಜೊತೆಗೆ ಹೆಜ್ಜೆ ಹಾಕಿದ್ದಾರೆ. ರಾಷ್ಟ್ರದಲ್ಲಿ ಬಲಪಂಥೀಯ ಕೋಮು ರಾಜಕಾರಣ ಬಲಗೊಂಡು ಅದು ಬಾಬ್ರಿ ಮಸೀದಿ ಧ್ವಂಸದಲ್ಲಿ ಪರ್ಯವಸಾನಗೊಂಡಾಗ ಇವರು  ಯುವಜನ ಮುಖಂಡರಾಗಿ ಈ ನಡೆಯನ್ನು ಪ್ರತಿರೋಧಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನೆರವೇರಿಸಿದರು. ಮಂಗಳೂರಿನಿಂದ ಕುಂದಾಪುರದವರೆಗೆ ಐತಿಹಾಸಿಕ ಹಿಂದೂ-ಮುಸ್ಲಿಂ-ಕ್ರೈಸ್ತ ಏಕತೆ ಸಾರುವ ‘ಮಾನವ ಸರಪಳಿ’ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಮಾನವ ಬಂಧುತ್ವ ವೇದಿಕೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿ ರಾಜ್ಯಾದ್ಯಂತ ವೈಚಾರಿಕ ಚಿಂತನೆ, ಸಂವಿಧಾನ ಅರಿವು, ತರಬೇತಿ, ಉಪನ್ಯಾಸ, ಸಂಘಟನೆ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. 

1993ರಲ್ಲಿ ಸಂಯುಕ್ತ ಕರ್ನಾಟಕದಿಂದ ಪತ್ರಿಕಾರಂಗದ ವೃತ್ತಿಯನ್ನು ಆರಂಭಿಸಿದ ಆರ್.ಜಯಕುಮಾರ್ ಅವರು, ಪತ್ರಿಕೆಯ ಉಪಸಂಪಾದಕನಾಗಿ ಹಲವು ವರ್ಷ ಸೇವೆ ಸಲ್ಲಿಸಿದರು. ಇವರ ವೃತ್ತಿಕೌಶಲ್ಯವನ್ನು ಗುರುತಿಸಿದ ಸಂಸ್ಥೆ ಪತ್ರಿಕೆಯ ಚೀಫ್ ಸಬ್ ಎಡಿಟರ್ ಆಗಿ ಬಡ್ತಿ ನೀಡಿತು. ಅನಂತರ ವರದಿಗಾರಿಕೆಗೆ ನಿಯಮಿಸಲಾಯಿತು. ಈ ಸಂದರ್ಭದಲ್ಲಿ ಸಾಮಾಜಿಕ, ರಾಜಕೀಯ ಸುದ್ದಿಗಳ ವರದಿಗಾರರಾಗಿ ಸೇವೆ ಸಲ್ಲಿಸಿದರು. ಅನಂತರ ಸಂಯುಕ್ತ ಕರ್ನಾಟಕದ ಚಿತ್ರದುರ್ಗ, ಮಂಡ್ಯ, ಹಾಸನದಲ್ಲಿ ಸೇವೆ ಸಲ್ಲಿಸಿದರು. ಪತ್ರಿಕಾರಂಗದ ಭೀಷ್ಮ ಎಂದೇ ಖ್ಯಾತರಾಗಿದ್ದ ಸಂಯುಕ್ತ ಕರ್ನಾಟಕದ ಸಂಪಾದಕರಾದ ಶಾಮರಾಯರು ಜಯಕುಮಾರ್ ಅವರ ಮಾರ್ಗದರ್ಶಕರೂ ಪ್ರೋತ್ಸಾಹಕರೂ ಆಗಿದ್ದರು.

ಅನಂತರ ‘ವಿಜಯ ಕರ್ನಾಟಕ’ ಪತ್ರಿಕೆಯಲ್ಲಿ ಕೆಲವು ವರ್ಷ ಮುಖ್ಯ ಉಪಸಂಪಾದಕನಾಗಿ ಸೇವೆ ಸಲ್ಲಿಸಿದರು. ಈ ನಡುವೆ ಕನ್ನಡದಲ್ಲಿ ಆರಂಭವಾದ ಮೊದಲ ಖಾಸಗಿ ಸುದ್ದಿವಾಹಿನಿ ‘ಉದಯ ಟಿವಿ’ಯಲ್ಲಿ ಹಿರಿಯ ಉಪ ಸಂಪಾದಕನಾಗಿ ಸೇವೆ ಸಲ್ಲಿಸಿದರು. ‘ಟೈಮ್ಸ್ ಆಫ್ ಕರ್ನಾಟಕ’ ದಿನಪತ್ರಿಕೆ ಮತ್ತು ‘ಟೈಮ್ಸ್ ಆಫ್ ಕರ್ನಾಟಕ’ ವಾರಪತ್ರಿಕೆಯ ಸಂಪಾದಕನಾಗಿಯೂ ಹಲವು ವರ್ಷ ಸೇವೆ ಸಲ್ಲಿಸಿದರು.

ಕೃಷಿಯ ವಿಚಾರಗಳಲ್ಲಿ ಆಸಕ್ತಿಯಿದ್ದ ಇವರು ರಾಷ್ಟ್ರಮಟ್ಟದ ಕೃಷಿ ವಾರಪತ್ರಿಕೆ ‘ಕೃಷಿ ಜಾಗರಣ’ದ ಕನ್ನಡ ಆವೃತ್ತಿಯ ಸಂಪಾದಕನಾಗಿಯೂ ಸೇವೆ ಸಲ್ಲಿಸಿದರು. ಸರಿಸುಮಾರು ಮೂರು ದಶಕಗಳಿಗೂ ಅಧಿಕ ಅವಧಿಯ ಪತ್ರಿಕಾರಂಗದ ಸೇವೆಯಲ್ಲಿ ಅತ್ಯುತ್ತಮ ಸಮರ್ಥ ಪತ್ರಕರ್ತನೆಂದು ಗುರುತಿಸಲ್ಪಟ್ಟಿದ್ದರು. ಈ ಅವಧಿಯಲ್ಲಿ ಅವರು ಬರೆದ ಹಲವು ಸುದ್ದಿ-ವಿಶ್ಲೇಷಣೆಗಳು, ವರದಿಗಳು ಪರಿಣಾಮಕಾರಿಯಾಗಿ ಸಮಾಜದ ಸರಕಾರದ ಕಣ್ಣು ತೆರೆಸಿದ್ದವು.

ಸಮಾಜದ ತೀರಾ ತಳಮಟ್ಟದ ತೀಯಾ ಸಮುದಾಯಕ್ಕೆ ಸೇರಿದ ಜಯಕುಮಾರ್ ಸಮಾಜಪರ ಚಿಂತನೆ ರೂಢಿಸಿಕೊಂಡು ಬಂದಿದ್ದರು. ಬೋಯಿಕೇರಿಯ ಕಾಫಿತೋಟದಲ್ಲಿ ಕೂಲಿ ಕಾರ್ಮಿಕರಾಗಿ ದುಡಿದ ನನ್ನ ಅಮ್ಮನೇ ನನ್ನ ಸ್ಫೂರ್ತಿ ಎಂದು ಜಯಕುಮಾರ್ ಅವರು ಹೇಳುತ್ತಿದ್ದರು. ತಮ್ಮ ಅಣ್ಣನ ಬದುಕಿನಿಂದ ಗಾಢವಾಗಿ ಪ್ರಭಾವಿತರಾಗಿದ್ದರು.  ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಅಣ್ಣ ಚಂದ್ರಶೇಖರ್ ಇವರ  ಮಾರ್ಗದರ್ಶಕರಾಗಿದ್ದರು. ಜಾತಿ ಧರ್ಮವನ್ನು ಮೀರಿ ಕುವೆಂಪು ಅವರ ವಿಶ್ವಮಾನವ ಸಂದೇಶದ ಆದರ್ಶದಂತೆ ಬದುಕಿದ ಇವರು ಅಂತರ್ಜಾತೀಯ ವಿವಾಹವಾಗಿ ಡಾ. ಲೀಲಾ ಸಂಪಿಗೆಯವರನ್ನು ಬಾಳಸಂಗಾತಿಯನ್ನಾಗಿಸಿಕೊಂಡಿದ್ದರು. ಇವರ ಏಕೈಕ ಪುತ್ರಿಯನ್ನು ಅಂತರ್ಜಾತೀಯ, ಮಂತ್ರಮಾಂಗಲ್ಯದ ಸರಳ ವಿವಾಹ ಮಾಡಿಸುವ ಮೂಲಕ ತಾವು ನಡೆದ ಹಾದಿಯಲ್ಲೇ ತಮ್ಮ ಮಗಳನ್ನೂ ನಡೆಯುವಂತೆ ಪ್ರೇರಣೆ ನೀಡಿದ್ದರು.

ಪದವಿ ವಿದ್ಯಾಭ್ಯಾಸದ ಬಳಿಕ ರಾಜ್ಯ ಸರಕಾರಿ ನೌಕರಿ (ಕೆಪಿಎಸ್‌ಸಿಯಲ್ಲಿ ಆರ್‌ಟಿಓ ಕಚೇರಿಯಲ್ಲಿ ನೇಮಕಾತಿ) ಗೆ ಆಯ್ಕೆಯಾಗಿದ್ದರಾದರೂ  ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಹೊಂದಿಕೊಳ್ಳಲಾರದೆ ವೃತ್ತಿಗೆ ರಾಜೀನಾಮೆ ನೀಡಿ ಬಳಿಕ ಪತ್ರಕರ್ತರಾಗಿ ವೃತ್ತಿಯನ್ನು ಆರಿಸಿಕೊಂಡಿದ್ದರು.

More articles

Latest article