ಇಂದು ಏರುತ್ತಿರುವ ಭೂಮಿಯ ಬಿಸಿಯ ನಡುವೆ ಮನುಷ್ಯನ ಜೀವನೋಪಾಯ, ಜೀವವೈವಿಧ್ಯದ ಉಳಿವು ಅಪಾಯದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಹವಾಗುಣ ಬದಲಾವಣೆ ಬಗೆಗೆ ಅರಿವು ಹೆಚ್ಚಿಸಿಕೊಳ್ಳುವ, ಅದನ್ನು ಸಾಮಾಜಿಕ ನೆಲೆಯಲ್ಲಿ ಸಾಧ್ಯವಾದಷ್ಟು ಮಿತಿಗೊಳಿಸುವ ವಿಧಾನಗಳನ್ನು ಅರಿಯುವ ಮತ್ತು ಅದರೊಂದಿಗೆ ಬದುಕುವ ಕೌಶಲ್ಯಗಳನ್ನು ನಾವು ಕಲಿತುಕೊಳ್ಳಬೇಕಿದೆ. ಇದಕ್ಕೆ ನಮ್ಮಲ್ಲಿನ ಪರಿಸರ ಪ್ರಜ್ಞೆ ಹೆಚ್ಚಾಗಬೇಕಿದೆ – ನಾಗರಾಜ ಕೂವೆ, ಪರಿಸರ ಬರಹಗಾರರು.
ಈ ವರ್ಷದ ಮುಂಗಾರು ನಿಧಾನಗತಿಯಲ್ಲಿ ಸಾಗುತ್ತಿದೆ. ಕಳೆದ ಬೇಸಿಗೆಯ ತೀವ್ರತೆಗೆ ದೇಶದ ಎಲ್ಲಾ ಭಾಗಗಳೂ ನಲುಗಿದ್ದವು. ಬಿಸಿಗಾಳಿಗೆ ದೇಶ ತತ್ತರಿಸಿತ್ತು. ಕುಡಿಯುವ ನೀರಿಗಾಗಿ ಹಾಹಾಕಾರ ಎದ್ದಿತ್ತು. ಪಶ್ಚಿಮ ಘಟ್ಟದ ಆಗುಂಬೆ, ಕುದುರೆಮುಖಗಳಲ್ಲೇ ತಾಪಮಾನ 40 ಕ್ಕೆ ಮುಟ್ಟಿತ್ತು ಎಂದರೆ ಬೇಸಿಗೆ ಎಷ್ಟು ಭೀಕರವಾಗಿತ್ತು ಎಂದು ನಾವು ಊಹಿಸಬಹುದು. ಕಳೆದ ನಾಲ್ಕೈದು ವರ್ಷಗಳಿಂದ ಹವಾಗುಣ ಬದಲಾವಣೆಯ ದಟ್ಟ ಪರಿಣಾಮಗಳು ಎಲ್ಲರ ಅನುಭವಕ್ಕೂ ಬರುತ್ತಿದೆ.
ಸಾಮಾನ್ಯವಾಗಿ ನಮ್ಮ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್ , ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈಆಕ್ಸೈಡ್ ಮೊದಲಾದ ಹಸಿರುಮನೆ ಅನಿಲಗಳು ಒಂದು ಮಿತಿಯಲ್ಲಿ ಇರುವುದರಿಂದ ಅದು ಜೀವಸಂಕುಲಗಳಿಗೆ ಬೇಕಾದ ಬೆಚ್ಚನೆಯ ವಾತಾವರಣವನ್ನು ಹೊಂದಿದೆ. ಆದರೆ ಇವತ್ತು ಮನುಷ್ಯನ ವಿವಿಧ ಚಟುವಟಿಕೆಗಳಿಂದ ಈ ಹಸಿರುಮನೆ ಅನಿಲಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ವಾತಾವರಣವನ್ನು ಸೇರುತ್ತಿವೆ. ಇದರಿಂದಾಗಿ ಗಾಳಿಯಲ್ಲಿರುವ ಅನಿಲ ಸಂಯೋಜನೆಯಲ್ಲಿ ಅಸಮತೋಲನ ಉಂಟಾಗುತ್ತಿದೆ. ಈ ಹಸಿರುಮನೆ ಅನಿಲಗಳ ಹೊರಸೂಸುವಿಕೆ ಜಾಸ್ತಿಯಾಗಿರುವುದರಿಂದ ಅವುಗಳು ವಾತಾವರಣದಲ್ಲಿ ಸಂಗ್ರಹಿಸುವ ಸೂರ್ಯನ ಶಾಖದ ಪ್ರಮಾಣವೂ ಹೆಚ್ಚುತ್ತಿದೆ. ಇದರಿಂದಾಗಿ ಭೂಮಿಯ ಬಿಸಿ ಏರುತ್ತಿದೆ. ಸರಳವಾಗಿ ಹೇಳುವುದಾದರೆ ಭೂಮಿಗೆ ಜ್ವರ ಬಂದಿದೆ. ಮನುಷ್ಯರಿಗೆ ಬಂದ ಜ್ವರ ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ. ಆದರೆ ಭೂಮಿಗೆ ಬಂದಿರುವ ಜ್ವರ ಕಡಿಮೆಯೇ ಆಗುತ್ತಿಲ್ಲ. ದಿನದಿಂದ ದಿನಕ್ಕೆ ಏರುತ್ತಿದೆ. ಇದೇ ಜಾಗತಿಕ ತಾಪಮಾನ ಹೆಚ್ಚಳ. ಇದರಿಂದಾಗಿ ‘ಹವಾಗುಣ ಬದಲಾವಣೆ’ ಆಗುತ್ತಿದೆ.
ವಾಸ್ತವವಾಗಿ ಭೂಗ್ರಹದಲ್ಲಿ ಋತುಮಾನಗಳು ಕಾಲಕಾಲಕ್ಕೆ ಬದಲಾಗುತ್ತವೆ. ಪ್ರದೇಶದಿಂದ ಪ್ರದೇಶಕ್ಕೆ ಮಳೆ, ಬಿಸಿಲು, ಚಳಿ ಬೀಳುವ ಪ್ರಮಾಣದಲ್ಲಿ ವ್ಯತ್ಯಾಸಗಳಿರುತ್ತವೆ. ಇಲ್ಲಿನ ಎಲ್ಲದೂ ಒಂದು ಸಂಕೀರ್ಣ ವ್ಯವಸ್ಥೆಗೊಳಪಟ್ಟಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾಗತಿಕ ತಾಪಮಾನ ಹೆಚ್ಚಳದಿಂದಾಗಿ ಈ ಸಂಕೀರ್ಣ ವ್ಯವಸ್ಥೆಯಲ್ಲಿ ಅನಿರೀಕ್ಷಿತ ಏರುಪೇರುಗಳುಂಟಾಗುತ್ತಿದೆ. ಅದೇ ‘ಹವಾಗುಣ ಬದಲಾವಣೆ’.
ಭೂಮಿಯ ಬಿಸಿ ಏರಿಕೆಯಿಂದಾಗಿ ಹಿಮ ನದಿಗಳು ಕರಗುತ್ತಿವೆ. ಅದರಿಂದಾಗಿ ಸಮುದ್ರದ ವಿಸ್ತಾರ ಹೆಚ್ಚುತ್ತಿದೆ. ಏರುತ್ತಿರುವ ಜಲರಾಶಿಯಿಂದಾಗಿ ಸಮುದ್ರ ತೀರದ ಪ್ರದೇಶಗಳು ಮುಳುಗುತ್ತಿವೆ. ಪೆಸಿಫಿಕ್ ಮಹಾಸಾಗರದ ಮಧ್ಯದಲ್ಲಿರುವ ವನ್ವಾಟು, ಕಿರಿಬಾಟಿ ಮೊದಲಾದ ದ್ವೀಪರಾಷ್ಟ್ರಗಳು ಕಣ್ಮರೆಯಾಗುವ ಆತಂಕದಲ್ಲಿವೆ.
ಇವತ್ತು ಸಮುದ್ರಗಳ ಉಷ್ಣತೆ ಅಪಾಯಕಾರಿ ಮಟ್ಟಕ್ಕೆ ತಲುಪುತ್ತಿದೆ. ಹವಳದ ದಿಬ್ಬಗಳು ತೀವ್ರವಾಗಿ ನಾಶಗೊಳ್ಳುತ್ತಿವೆ. ಇದು ಜೀವವೈವಿಧ್ಯದ ನಾಶದ ಜೊತೆಗೆ ಆಹಾರ ಭದ್ರತೆಗೂ ಪೆಟ್ಟು ಕೊಡುತ್ತಿದೆ. ತೀರ ಪ್ರದೇಶದ ಮೀನುಗಾರರು ಜೀವನೋಪಾಯ ಕಳೆದುಕೊಳ್ಳುತ್ತಿದ್ದರೆ, ಜಗತ್ತಿನಾದ್ಯಂತ ಬಡಜನರ ಆಹಾರ ಪೌಷ್ಟಿಕತೆಗೂ ಕುತ್ತು ಬರುತ್ತಿದೆ.
ಮಾನ್ಸೂನ್ ಮಳೆಯಾಧಾರಿತ ಪಶ್ಚಿಮ ಘಟ್ಟಗಳು ಹವಾಗುಣ ಬದಲಾವಣೆಯ ದುಷ್ಪರಿಣಾಮಗಳನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಎದುರಿಸುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಇಲ್ಲಿನ ಬೆಳೆಯಾದ ಅಡಿಕೆಗೆ ತಗುಲುವ ಕೊಳೆರೋಗ, ಎಲೆಚುಕ್ಕಿ ರೋಗದ ತೀವ್ರತೆ ಹೆಚ್ಚಿತ್ತು. ನೆರೆ, ಪ್ರವಾಹ, ಭೂಕುಸಿತ ಮೊದಲಾದ ಅವಘಡಗಳು ಇಲ್ಲಿನ ಜನರ ನೆಮ್ಮದಿ ಕೆಡಿಸಿತ್ತು. ಕಳೆದ ಮೂರ್ನಾಲ್ಕು ವರ್ಷಗಳ ಹಿಂದೆ ವಿಪರೀತ ಸುರಿದಿದ್ದ ಮಳೆ ಈ ಎರಡು ವರ್ಷಗಳಿಂದ ಕಾಣೆಯಾಗಿದೆ. ಇದು ಜೀವನದಿಗಳ ಹರಿವು, ಕಪ್ಪೆಗಳ ಸಂತಾನೋತ್ಪತ್ತಿ ಸೇರಿದಂತೆ ಕಣ್ಣಿಗೆ ಕಾಣಿಸದ ಅಸಂಖ್ಯ ವಿದ್ಯಮಾನಗಳಿಗೆ ಅಡ್ಡಿಪಡಿಸುತ್ತಿದೆ. ಅತಿಯಾದ ಮಳೆಯಿಂದ ನಲುಗಿದ್ದ ಜನಜೀವನಕ್ಕೆ ಈಗ ಮಳೆಯ ಕೊರತೆ ಹೊಸ ಸಮಸ್ಯೆಗಳನ್ನು ಆಹ್ವಾನಿಸಿದೆ.
ಹವಾಗುಣ ಬದಲಾವಣೆಯ ಪರಿಣಾಮಗಳು ಜೀವಸಂಕುಲಗಳನ್ನು ಮಾತ್ರವಲ್ಲದೇ ಸಮಾಜದ ಎಲ್ಲಾ ವರ್ಗದ ಜನರನ್ನು ಬಾಧಿಸುತ್ತಿದೆ. ಇದನ್ನು ಮಿತಿಗೊಳಿಸಲು ಜಾಗತಿಕವಾಗಿ ಶೃಂಗಸಭೆಗಳು, ಸಮಾವೇಶಗಳು, ಒಪ್ಪಂದಗಳು ಜರುಗುತ್ತಿವೆ. ಆದರೆ ಅದರ ಪರಿಣಾಮಕಾರಿ ಅನುಷ್ಠಾನ ಸಾಧ್ಯವಾಗುತ್ತಿಲ್ಲ. ಹವಾಗುಣ ಬದಲಾವಣೆಯನ್ನು ಮಿತಿಗೊಳಿಸಲು ಸರ್ಕಾರಗಳ ಮಟ್ಟದಲ್ಲಿ ಅಭಿವೃದ್ಧಿಯ ಪರಿಕಲ್ಪನೆ ಬದಲಾಗಬೇಕಿದೆ. ಅವುಗಳಿಂದ ಹೊಸ ದೃಷ್ಟಿಕೋನದ ನೀತಿ ನಿರೂಪಣೆ ನಡೆಯಬೇಕಿದೆ. ಹೀಗಾಗಬೇಕಾದರೆ ಜನರಲ್ಲಿ ಜಾಗೃತಿ ಮೂಡಬೇಕಾಗಿದೆ.
ಹವಾಗುಣ ಬದಲಾವಣೆ ಎಂಬುದು ಇವತ್ತಿನ ವಾಸ್ತವವಾಗಿದೆ. ಇಂದು ಏರುತ್ತಿರುವ ಭೂಮಿಯ ಬಿಸಿಯ ನಡುವೆ ಮನುಷ್ಯನ ಜೀವನೋಪಾಯ, ಜೀವವೈವಿಧ್ಯದ ಉಳಿವು ಅಪಾಯದಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಹವಾಗುಣ ಬದಲಾವಣೆ ಬಗೆಗೆ ಅರಿವು ಹೆಚ್ಚಿಸಿಕೊಳ್ಳುವ, ಅದನ್ನು ಸಾಮಾಜಿಕ ನೆಲೆಯಲ್ಲಿ ಸಾಧ್ಯವಾದಷ್ಟು ಮಿತಿಗೊಳಿಸುವ ವಿಧಾನಗಳನ್ನು ಅರಿಯುವ ಮತ್ತು ಅದರೊಂದಿಗೆ ಬದುಕುವ ಕೌಶಲ್ಯಗಳನ್ನು ನಾವು ಕಲಿತುಕೊಳ್ಳಬೇಕಿದೆ. ಇದಕ್ಕೆ ನಮ್ಮಲ್ಲಿನ ಪರಿಸರ ಪ್ರಜ್ಞೆ ಹೆಚ್ಚಾಗಬೇಕಿದೆ.
ನಾಗರಾಜ ಕೂವೆ
ಪರಿಸರ ಬರಹಗಾರರು
ಇದನ್ನೂ ಓದಿ-http://ಪಶ್ಚಿಮ ಘಟ್ಟದ ಕಣಿವೆ ಕಾಡು ಸಂರಕ್ಷಣೆಯ ಕಹಿ ಸತ್ಯಗಳು…https://kannadaplanet.com/bitter-truths-of-western-ghats-valley/