ಒಳಮೀಸಲಾತಿ ಸಮೀಕ್ಷೆಯಲ್ಲಿ ಕೊರಚ ಇಲ್ಲವೆ ಕೊರಚರ್ ಎಂದು ನಮೂದಿಸಿ : ಕೊರಚ ಮಹಾಸಭಾ ಮನವಿ

Most read

ಬೆಂಗಳೂರು: ಒಳ ಮೀಸಲಾತಿ ವಿಂಗಡಣೆಗಾಗಿ ನಡೆಸುವ ಸಮೀಕ್ಷೆ ಸಂದರ್ಭದಲ್ಲಿ ನಿಗದಿಪಡಿಸಿದ ಕಾಲಂಗಳಲ್ಲಿ, ಕೊರಚ ಸಮುದಾಯದವರು ಜಾತಿಯನ್ನು ಕಡ್ಡಾಯವಾಗಿ ಕೊರಚ ಇಲ್ಲವೆ ಕೊರಚರ್ ಎಂದು ಮಾತ್ರ ನಮೂದಿಸಬೇಕು ಎಂದು ಅಖಿಲ ಕರ್ನಾಟಕ ಕೊರಚ ಮಹಾಸಭಾ ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಅಧ್ಯಕ್ಷ ಆದರ್ಶ ಯಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ಪರಿಶಿಷ್ಟರ ಉಪಜಾತಿಯಾದ ಕೊರಚ ಸಮುದಾಯ ಎಲ್ಲಾ ಜಿಲ್ಲೆಗಳಲ್ಲೂ ಅಸ್ತಿತ್ವ ಹೊಂದಿವೆ. ಗಣತಿದಾರರು ಆಂತರಿಕ ಹಿಂದುಳಿದಿರುವಿಕೆಯ ಬಗ್ಗೆ ಸರಿಯಾದ ದತ್ತಾಂಶ ಕಲೆಹಾಕಲು ಮನೆ ಮನೆಗೆ ಭೇಟಿ ನೀಡಿದಾಗ ತಪ್ಪದೇ ಕೊರಚ ಇಲ್ಲವೆ ಕೊರಚರ್ ಎಂದು ಕಾಲಂಗಳಲ್ಲಿ ನಮೂದಿಸಬೇಕು. ಕೊರಚ ಜನಾಂಗದಲ್ಲಿ ದಬ್ಬೆ ಕೊರಚ, ಹಗ್ಗ ಕೊರಚ, ಕುಂಚಿ ಕೊರಚ ಎಂಬ ಉಪ ಪಂಗಡಗಳಿದ್ದು ಈ ಮೂರು ಉಪ ಪಂಗಡಗಳನ್ನು ಕೊರಚ ಎಂದು ಪರಿಗಣಿಸಬೇಕು. ಇದರಿಂದ ಮುಂಬರುವ ದಿನಗಳಲ್ಲಿ ಸಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪತ್ತೆ ಮಾಡಲು ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.

ಪ್ರತಿ ಜಿಲ್ಲೆಗಳಲ್ಲಿ ಕೊರಚ ಸಮುದಾಯ ಭವನ, ವಸತಿ ನಿಲಯಗಳ ನಿರ್ಮಾಣ, ಪ್ರತ್ಯೇಕ ಅಭಿವೃದ್ಧಿ ನಿಗಮ, ಸಮುದಾಯದ ಸಂಪ್ರದಾಯ ಆಚರಣೆ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವ, ವಚನಕಾರ ನುಲಿಯಾ ಚಂದಯ್ಯ ಅವರ ಹೆಸರಿನಲ್ಲಿ ಶರಣ ನುಲಿಯ ಚಂದಯ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮುದಾಯದ ಏಳಿಗೆಗೆ ಸಹಕರಿಸುವ ಸಂಘದಿಂದ ಕೊರಚ ಜನಾಂಗಕ್ಕೆ ಬಿದಿರು ಪುಟ್ಟಿ ಹೆಣೆಯಲು ಬೊಂಬು ಮತ್ತು ಗಳಗಳನ್ನು ಒದಗಿಸಿಕೊಡಲು ಬಿದಿರು ಸೊಸೈಟಿ ಆರಂಭಿಸುವ, ಕೊರಚ ಕುಲಶಾಸ್ತ್ರ ಅಧ್ಯಯನಕ್ಕೆ ಆದ್ಯತೆ ನೀಡಲಾಗುವುದು ಎಂದರು.

ಕೊರಚರ ಹಟ್ಟಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ, ಅಲೆಮಾರಿ ಜನಾಂಗದವರಿಗೆ ಸರ್ಕಾರಿ ಜಾಗ ಗುರುತಿಸಿ ಮಂಜೂರು ಮಾಡಿಸಿಕೊಡುವುದು, ಮಹಿಳಾ ಸಬಲೀಕರಣ ಅಡಿಯಲ್ಲಿ ಸಮುದಾಯದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಸಹಾಯಧನ ನೀಡುವ, ಸರ್ಕಾರದಿಂದ ದೊರೆಯುವ ಪ್ರೇರಣಾ ಸಾಲ ಯೋಜನೆ, ಸ್ವಯಂ ಉದ್ಯೋಗ ಯೋಜನೆ, ಉದ್ಯಮಶೀಲತಾ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆಗಳ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಗಂಗಪ್ಪ.ಕೆ, ಹಿರಿಯ ಮುಖಂಡರಾದ ವಿನಾಯಕ ಪೆನುಗೊಂಡ ಧನಂಜಯ.ಎನ್, ಸಂಘದ ಪದಾಧಿಕಾರಿಗಳಾದ ಸಿದ್ದೇಶ್ ಮಾದಪುರ, ಮಾರುತಿ ಮಾಕಡವಾಲೆ, ಹೆಚ್.ಯಶೋಧ ಮತ್ತಿತರರು ಉಪಸ್ಥಿತರಿದ್ದರು.

More articles

Latest article