ನವದೆಹಲಿ: ಇಂಗ್ಲಿಷ್ ಮಾತನಾಡುವವರು ನಾಚಿಕೆಪಟ್ಟುಕೊಳ್ಳುವ ದಿನ ದೂರವಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಅಮಿತ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಮುಖಂಡರೂ ಆಗಿರುವ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಇಂಗ್ಲಿಷ್ ಭಾಷೆ ‘ನಾಚಿಕೆಗೇಡಿನ ಭಾಷೆಯಲ್ಲ. ಪ್ರತಿ ಮಗುವಿಗೂ ಇಂಗ್ಲೀಷ್ ಕಲಿಸಬೇಕು. ಇಂಗ್ಲಿಷ್ ಅಣೆಕಟ್ಟು ಅಲ್ಲ, ಅದು ಸೇತುವೆ. ಇಂಗ್ಲಿಷ್ ನಾಚಿಕೆಗೇಡಿನದ್ದಲ್ಲ, ಅದು ಸಬಲೀಕರಣ. ಇಂಗ್ಲಿಷ್ ಸರಪಳಿಯಲ್ಲ, ಅದು ಸರಪಳಿಗಳನ್ನು ಮುರಿಯುವ ಸಾಧನವಾಗಿದೆ ಎಂದು ಎಕ್ಸ್ ನಲ್ಲಿ ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ನ ಮುಖಂಡ ಡೆರೆಕ್ ಒಬ್ರಿಯಾನ್ ಭಾರತದಲ್ಲಿ ಸುಮಾರು 19,500 ಭಾಷೆಗಳು ಹಾಗೂ ಉಪಭಾಷೆಗಳಿದ್ದು, ಇವುಗಳಲ್ಲಿ ಸಂವಿಧಾನವು 22 ಭಾಷೆಗಳಿಗೆ ಅಧಿಕೃತ ರಾಷ್ಟ್ರೀಯ ಭಾಷೆಯ ಸ್ಥಾನಮಾನ ನೀಡಿದೆ. ಇದು ಭಾರತದ ವಿವಿಧತೆಯಲ್ಲಿ ಏಕತೆಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ದೇಶದ ಶೇ 97ರಷ್ಟು ಜನರು ಅಧಿಕೃತ ಭಾಷೆಗಳಲ್ಲಿ ಒಂದನ್ನು ತಮ್ಮ ಮಾತೃಭಾಷೆಯಾಗಿ ಬಳಸುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರದ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇದನ್ನು ಎಂದಿಗೂ ಅರ್ಥ ಮಾಡಿಕೊಂಡಿಲ್ಲ ಎಂದು ವಿಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಎಂಸಿಯ ಮತ್ತೊಬ್ಬ ರಾಜ್ಯಸಭಾ ಸದಸ್ಯೆ ಸಾಗರಿಕಾ ಘೋಷ್ ಅವರೂ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, ಭಾರತೀಯರು ಯಾವುದೇ ಭಾಷೆಯ ಬಳಕೆಯನ್ನು ಅವಮಾನ ಎಂದುಕೊಳ್ಳಬಾರದು. ಭಾರತದಲ್ಲಿ ಇಂಗ್ಲಿಷ್ ಅನ್ನು ಸಂಪರ್ಕ ಭಾಷೆಯನ್ನಾಗಿ ಬಳಸಲಾಗುತ್ತಿದೆ. ಜಾಗತಿಕ ಜ್ಞಾನವನ್ನು ಪಡೆಯುವ ಲಕ್ಷಾಂತರ ಜನರ ಮಹತ್ವಾಕಾಂಕ್ಷೆಯ ಉದ್ದೇಶ ಇದರ ಹಿಂದಿದೆ. ಹೀಗಾಗಿ ಭಾರತೀಯರು ಯಾವುದೇ ಭಾಷೆಯ ಕುರಿತು ಕೀಳಿರಿಮೆ ಬೆಳೆಸಿಕೊಳ್ಳುವ ಅಗತ್ಯವಿಲ್ಲ ಎಂದು ಶಾ ಹೇಳಿಕೆಯನ್ನು ಟೀಕಿಸಿದ್ದಾರೆ.
1963ರ ಅಧಿಕೃತ ಭಾಷಾ ಕಾಯ್ದೆಯಲ್ಲಿ ಇಂಗ್ಲಿಷ್ ಅನ್ನು ಹಿಂದಿಯ ಜತೆಯಲ್ಲಿ ಅಧಿಕೃತ ಭಾಷೆಯಾಗಿ ಬಳಸಬಹುದು ಎಂದು ಹೇಳಲಾಗಿತ್ತು. ಇದು 1965ರ ಜ. 26ರಿಂದ ಜಾರಿಗೆ ಬಂದಿತು. ಸಂಸತ್ತಿನ ವ್ಯವಹಾರಗಳು ಮತ್ತು ಕೇಂದ್ರ ಸರ್ಕಾರದ ಅಧಿಕೃತ ಉದ್ದೇಶಗಳಿಗೆ ಇಂಗ್ಲಿಷ್ ಅನ್ನು ಬಳಸಬಹುದು ಎಂದು ಹೇಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ವ್ಯವಹಾರಕ್ಕೆ ಇಂಗ್ಲಿಷ್ ಭಾಷೆಯನ್ನು ಬಳಸಬಹುದು ಎಂದೂ ಈ ಕಾಯ್ದೆ ಹೇಳಿದೆ.