ಉದ್ಯೋಗ ಖಾತ್ರಿ ಯೋಜನೆ ಮತ್ತು ಅಂತರ್ಜಲ ಸುಧಾರಣೆ

Most read

ಹಳ್ಳಿಗಳಲ್ಲಿ ಅಂತರ್ಜಲದ ರಕ್ಷಣೆಗಾಗಿ ಯೋಜನೆಯನ್ನು ಕೈ ಗೊಂಡು ಅದನ್ನು ಉದ್ಯೋಗ ಖಾತ್ರಿ ಯೋಜನೆಯ ಅಡಿಗೆ ತಂದು ಜನರಿಗೆ ಪ್ರೋತ್ಸಾಹ ನೀಡಿದರೆ ಜನರ ಕೈಗಳಿಗೆ ಉದ್ಯೋಗ ನೀಡಿದಂತೆಯೂ ಆಗುತ್ತದೆ ಮತ್ತು ಅಂತರ್ಜಲ ವೃದ್ಧಿಯಾದಂತೆಯೂ ಆಗುತ್ತದೆ. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸರ್ಕಾರಿ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮತ್ತು ಪ್ರೋತ್ಸಾಹ ಬಹು ಮುಖ್ಯ ಪಾತ್ರ ವಹಿಸುತ್ತದೆ – ಆನಂದ ಎಮ್ ಕೈವಾರ

ಮಸಕತ್ತಲಿಗೆ ಮನೆ ಬಿಟ್ಟು ಕೆಲಸಕ್ಕೆ ಅಪ್ಪ ಹಾಗೂ ಚಿಕ್ಕಮ್ಮನೊಂದಿಗೆ ಹಳ್ಳಿಯ ಸುಮಾರು 20 ಮಂದಿ ಹೋಗುತ್ತಿದ್ದರು. ಸುಮಾರು ಹನ್ನೊಂದು ಹನ್ನೆರಡು ಗಂಟೆ ಹೊತ್ತಿಗೆ ತಮ್ಮ ತಮ್ಮ ಶಕ್ತಿಗೆ ತಕ್ಕಂತೆ ಎರಡೆರಡು ಸ್ಟ್ರಂಚ್‌ಗಳನ್ನು ಮುಗಿಸಿರುತ್ತಿದ್ದರು. ಕೆಂಪು ಭೂಮಿ, ಕೆರೆಯ ಸುತ್ತಮುತ್ತ ಹಾಗೂ ಮಾವಿನ ತೋಪುಗಳಲ್ಲಿ ಕೆಲಸ ಸರಾಗವಾಗಿ ನಡೆಯುತ್ತಿತ್ತು. ಕೆಲವು ಕಡೆ ಸಣ್ಣ ಕಲ್ಲು ಮಿಶ್ರಿತ ಭೂಮಿಯಲ್ಲಿ ಹಳ್ಳ ತೋಡುವುದು ಕಷ್ಟವಾಗುತ್ತಿತ್ತು. ಅಂಥಹ ಸಂದರ್ಭಗಳಲ್ಲಿ ನೀರನ್ನು ತಂದು ಪಾತಿ ತೋಡಿ ನೀರು ಹಾಕಿ ನೆನೆಸಿ ಹಸಿ ಮಾಡಿಕೊಂಡು ಪಿಕಾಸಿಯಿಂದ ಅಗೆಯಲಾಗುತ್ತಿತ್ತು.

ಪ್ರಾರಂಭದಲ್ಲಿ ಮುತ್ತುಕದಹಳ್ಳಿಯ ಮುನೇಗೌಡಣ್ಣನು ಕೆಲಸ ನಡೆಯುವ ಸ್ಥಳಕ್ಕೆ ಬಂದು ಮಳೆ ನೀರು ಹರಿಯುವ ಇಳಿಜಾರನ್ನು ಅಂದಾಜಿಸಿ ಗುರ್ತು ಹಾಕಿಕೊಟ್ಟ ನಂತರ ಕೆಲಸ ಶುರು ಮಾಡಿಸುತ್ತಿದ್ದನು. ನಬಾರ್ಡ್ ಎಂಬ ಯೋಜನೆಯನ್ನು ನಮ್ಮ ಹಳ್ಳಿಗೆ ತಂದಿದ್ದೇ ಮುನೇಗೌಡಣ್ಣನ ತಂಡದವರು. ಮುನೇಗೌಡಣ್ಣನಿಗೆ ಶೀಗೆಹಳ್ಳಿಯವರೆಲ್ಲ ಪರಿಚಿತರಾಗಿದ್ದ ಕಾರಣ ಯೋಜನೆಯ ಅನುಷ್ಠಾನ ಸುಗಮವಾಯಿತು. ದಿನ ಕಳೆದಂತೆ, ಬಿಸಿಲ ಧಗೆ ಹೆಚ್ಚಿದಂತೆ ಹಳ್ಳಿಗರೆಲ್ಲ ಮುಂಜಾನೆ 5.30ಕ್ಕೆ ಮನೆ ಬಿಡುತ್ತಿದ್ದರು. ಆಗೆಲ್ಲ ಅಪ್ಪನಿಗೆ ಹಿಂದಿನ ದಿನವೇ ಮುನೇಗೌಡಣ್ಣ ಇಳಿಜಾರನ್ನು ತೋರಿಸಿ ಕೊಟ್ಟಿರುತ್ತಿದ್ದನು. ಮರುದಿನ ಬೆಳಗಿನ ಜಾವವೇ ಅಪ್ಪನ ಮುಂದಾಳತ್ವದಲ್ಲಿ ಕೆಲಸ ಆರಂಭವಾಗುತ್ತಿತ್ತು.

ವಾರಕ್ಕೊಂದು ದಿನ ತೋಡಿದ್ದ ಸ್ಟ್ರಂಚ್‌ಗಳ ಅಳತೆ ನಡೆಯುತಿತ್ತು. ಮರು ದಿನ ಹಣದ ಬ್ಯಾಗಿನೊಂದಿಗೆ ಮುನೇಗೌಡಣ್ಣ ಹಾಗೂ ನೀರಾವರಿ ಎಂಜಿನಿಯರ್ ಬಂದು ಡೈರಿಯ ಅಂಗಳದಲ್ಲಿ ಒಬ್ಬೊಬ್ಬರ ಹೆಸರನ್ನು ಕೂಗಿ ಬಟವಾಡೆ ಮಾಡುತ್ತಿದ್ದರು. ಒಬ್ಬರಾದ ನಂತರ ಒಬ್ಬರಂತೆ ಹಣ ಪಡೆದು ಗರಿ ಗರಿಯ ನೋಟುಗಳನ್ನು ಎಣಿಸಿ ಜೇಬಿಗಿಳಿಸಿಕೊಂಡು ಅಲ್ಲಿಂದಲೇ ಕೈವಾರದ ವಾರದ ಸಂತೆಗೆ ಹೋಗುತ್ತಿದ್ದರು. ವಾರಕ್ಕೆ ಆಗುವಷ್ಟು ತರಕಾರಿ ದಿನಸಿ ಸಾಮಾನುಗಳನ್ನು ಸಂತೆಯಿಂದ ತರುತ್ತಿದ್ದರು.

ಅಂತರ್ಜಲ ಮಟ್ಟ ಕುಸಿತ

ಶೀಗೆಹಳ್ಳಿಯ ಸುತ್ತಮುತ್ತ ಒಂದು ವರ್ಷದಲ್ಲಿ ಬದು ನಿರ್ಮಾಣ ಕಾರ್ಯ ಮುಗಿಯಿತು. ನಂತರದಲ್ಲಿ ಚಿಂತಡಪಿ, ಹಲಸೂರು ದಿನ್ನೆಯ ಸರಹದ್ದು, ಮಸ್ತೇನಹಳ್ಳಿ, ಕನ್ನಮಂಗಲ ತಳಗವಾರದ ಗಡಿಯವರೆಗೂ ಬದು ನಿರ್ಮಾಣ ಮಾಡಲಾಯಿತು. ನನಗೆ ಕಾಲೇಜು ರಜೆ ಇದ್ದಾಗ ಭಾನುವಾರ ಮತ್ತು ರಜೆದಿನಗಳಲ್ಲಿ ಹೋಗುತ್ತಿದ್ದೆ ಹಾಗೂ ಬೇಸಿಗೆ ರಜೆಯಲ್ಲಿ ತಪ್ಪದೆ ಹೋಗುತ್ತಿದ್ದೆ.

2004 ರಿಂದ 2006 ರವರೆಗೂ ನಬಾರ್ಡ್ ಕೆಲಸ ಯಾವುದೇ ಅಡೆತಡೆ ಇಲ್ಲದೆ ನಡೆಯಿತು. ಅಂತರ್ಜಲವೂ ವೃದ್ಧಿಸಿತು. ಯಾವ ಮಳೆಗಾಲದಲ್ಲೂ ಹೊಲಗಳಲ್ಲಿ ನೀರು ನಿಂತಿದ್ದನ್ನು ಕಂಡಿರದ ಹಳ್ಳಿಗರು ಬದು ನಿರ್ಮಿಸಿದ ಬಳಿಕ ಮಳೆಗಾಲದಲ್ಲಿ ತೋಡಿದ್ದ ಹಳ್ಳದಲ್ಲಿ ಮೂರು ಅಡಿ ನೀರು ನಿಂತಿರುವುದನ್ನು ಕಂಡು ಪುಳಕಿತರಾಗಿ ನಬಾರ್ಡಿನ ಕಾರ್ಯವನ್ನು ಶ್ಲಾಘಿಸಿದರು. ಮತ್ತು ಹಳ್ಳಗಳಲ್ಲಿ ನೀರು ನಿಂತಿದ್ದರಿಂದ ರಾಗಿ ಬೆಳೆ ಹಚ್ಚ ಹಸಿರಿನಿಂದ ನಳನಳಿಸುತ್ತಿತ್ತು.  ಮಾತ್ರವಲ್ಲ ಮರಗಿಡಗಳು ಹಸಿರನ್ನು ಹೊದ್ದು ನಲಿಯುತ್ತಿದ್ದವು. ಆಗೆಲ್ಲ  ಸುಮಾರು  300–500 ಅಡಿ ಕೊರೆಸಿದ್ದರೆ ನೀರು ಸಿಗುವಷ್ಟು ಅಂತರ್ಜಲ ಸುಧಾರಣೆ ಕಂಡಿತ್ತು. ಬದುಗಳ ಬೆಳೆ ಬಿತ್ತಿದ್ದರಿಂದ ಹತ್ತು  ವರ್ಷಗಳವರೆಗೂ ಉತ್ತಮ ಫಸಲು ಬೆಳೆಯಿತು. ನಂತರದಲ್ಲಿ ಜಮೀನುಗಳಲ್ಲಿ ಉಳುವಾಗ ಟ್ರ್ಯಾಕ್ಟರುಗಳು ಓಡಾಡಿ ಹಳ್ಳಗಳಲ್ಲಿ ಮಣ್ಣು ತುಂಬಿ ಮುಚ್ಚಿ ಹೋದ ಮೇಲೆ ನೀರು ನಿಲ್ಲದೆ ಹರಿದು ಹೋಯಿತು. ಪರಿಣಾಮವಾಗಿ ಅಂತರ್ಜಲ ಕುಸಿಯಿತು.  1500 ಅಡಿ ಕೊರೆಸಿದರೂ ನೀರು ಸಿಗದಷ್ಟು ಅಂತರ್ಜಲ ಪಾತಳ ಸೇರಿದೆ.

ಶೀಗೆಹಳ್ಳಿಯು ಚಿಂತಾಮಣಿ ತಾಲೂಕಿನ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರದ ಸಮೀಪವಿದೆ. ಹಳ್ಳಿಗಳಲ್ಲಿ ಇಂಥಹ ಕೆಲಸವನ್ನು ಉದ್ಯೋಗ ಖಾತ್ರಿ ಯೋಜನೆಯ ಅಡಿಗೆ ತಂದು ಜನರಿಗೆ ಪ್ರೋತ್ಸಾಹ ನೀಡಿದರೆ ಜನರ ಕೈಗಳಿಗೆ ಉದ್ಯೋಗ ನೀಡಿದಂತೆಯೂ ಆಗುತ್ತದೆ ಮತ್ತು ಅಂತರ್ಜಲ ವೃದ್ಧಿಯಾದಂತೆಯೂ ಆಗುತ್ತದೆ. ಯಾವುದೇ ಯೋಜನೆ ಯಶಸ್ವಿಯಾಗಬೇಕಾದರೆ ಸರ್ಕಾರಿ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮತ್ತು ಪ್ರೋತ್ಸಾಹ ಬಹು ಮುಖ್ಯ ಪಾತ್ರ ವಹಿಸುತ್ತದೆ.

ಆನಂದ ಎಮ್ ಕೈವಾರ

ಇದನ್ನೂ ಓದಿ- ರೈತರಿಗೆ ಮತ್ತೆ ಸೂಕ್ಷ್ಮ ನೀರಾವರಿಗೆ ಸಹಾಯಧನ : ಕೃಷಿ ಇಲಾಖೆ ಮಹತ್ವದ ಆದೇಶ

More articles

Latest article