ಕರ್ನಾಟಕದಲ್ಲಿ ಸೃಷ್ಟಿಯಾಗುವ ಉದ್ಯೋಗಳು ಯಾರಿಗೆ? ಸ್ಪಷ್ಟಪಡಿಸಲು ಸರ್ಕಾರಕ್ಕೆ ಕರವೇ ಅಧ್ಯಕ್ಷ ನಾರಾಯಣಗೌಡ ಆಗ್ರಹ

Most read

ಬೆಂಗಳೂರು: ಕರ್ನಾಟಕದಲ್ಲಿ‌ ಬಂಡವಾಳ ಹೂಡಿಕೆ ಮಾಡಿದರೆ ಉತ್ತರ ಪ್ರದೇಶ, ಬಿಹಾರದ ಜನರಿಗೆ ಉದ್ಯೋಗ ಸಿಗುತ್ತದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥಸಿಂಗ್ ‘ಇನ್ವೆಸ್ಟ್ ಕರ್ನಾಟಕ’ದ ಭಾಷಣದಲ್ಲೇ ಹೇಳಿದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,‌ ಕೈಗಾರಿಕಾ ಸಚಿವರಾದಿಯಾಗಿ ಸರ್ಕಾರದ ಪ್ರತಿನಿಧಿಗಳು ದಿವ್ಯಮೌನ ತಾಳಿರುವುದು ಏಕೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಪ್ರಶ್ನಿಸಿದ್ದಾರೆ.  ಸಚಿವ ರಾಜನಾಥ ಸಿಂಗ್ ಅವರ ಈ ಅಪಾಯಕಾರಿ ಹೇಳಿಕೆಗೆ ರಾಜ್ಯ ಸರ್ಕಾರದ ಸಮ್ಮತಿ ಇದೆ ಎಂಬ ಅನುಮಾನ ಕಾಡುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದಲ್ಲಿ ಉದ್ಯಮಿಗಳು ಬಂಡವಾಳ ಹೂಡಿದಾಗ ಅದರ ಲಾಭ ಕರ್ನಾಟಕದ ಜನತೆಗೆ ಲಭಿಸಬೇಕು ಎನ್ನುವುದು ಸ್ವಾಭಾವಿಕ ನ್ಯಾಯ. ಆದರೆ ರಾಜ್ಯ ಸರ್ಕಾರದ ಬದ್ಧತೆ ಏನು ಎಂಬುದನ್ನು ಮುಖ್ಯಮಂತ್ರಿಗಳು, ಸಚಿವರುಗಳು ಬಹಿರಂಗಪಡಿಸಬೇಕು. ರಾಜನಾಥ ಸಿಂಗ್ ಅವರ ಹೇಳಿಕೆಗೆ ಸರ್ಕಾರದ ಪ್ರತಿನಿಧಿಗಳು ಮೌನ ತಾಳಿದರೆ ಇದರಿಂದ ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂಬ ತಿಳಿವಳಿಕೆ ನಮ್ಮ ಜನಪ್ರತಿನಿಧಿಗಳಿಗೆ ಇಲ್ಲವೇ? ಅಥವಾ ಕರ್ನಾಟಕದ ಉದ್ಯಮಗಳಲ್ಲಿ ಉತ್ತರ ಭಾರತೀಯರೇ ತುಂಬಿಕೊಳ್ಳಲಿ, ನಮಗೇನಾಗಬೇಕು ಎಂಬ ಅಸಡ್ಡೆ ಇದೆಯೇ ಎಂದು ಅವರು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

ರಾಜನಾಥ ಸಿಂಗ್ ಅವರು ಈ ಹೇಳಿಕೆ ನೀಡುವಾಗ ವೇದಿಕೆಯಲ್ಲೇ ಇದ್ದ ನಮ್ಮ ಜನಪ್ರತಿನಿಧಿಗಳು ಪ್ರತಿಭಟಿಸಬೇಕಿತ್ತು. ಅದು ಸಾಧ್ಯವಾಗದೇ ಇದ್ದಲ್ಲಿ  ನಂತರವಾದರೂ ಆ ಕುರಿತು ಪ್ರತಿಕ್ರಿಯೆ ನೀಡಬಹುದಿತ್ತು. ಆದರೆ ಯಾವೊಬ್ಬ ಜನಪ್ರತಿನಿಧಿಗೂ ಈ ಕುರಿತು ಆಸಕ್ತಿ ಇದ್ದ ಹಾಗೆ ತೋರುತ್ತಿಲ್ಲ. ಕನ್ನಡಿಗರ ಬದುಕಿನ ಕುರಿತು, ಕನ್ನಡದ ಮಕ್ಕಳಿಗೆ ಲಭಿಸಬೇಕಾದ ಉದ್ಯೋಗದ ಕುರಿತು ಇವರಿಗೆ ಇರುವ ತಾತ್ಸಾರ, ಉಪೇಕ್ಷೆ ಎದ್ದು ಕಾಣುತ್ತಿದೆ ಎಂದು ಟೀಕಿಸಿದ್ದಾರೆ..

ಇನ್ವೆಸ್ಟ್ ಕರ್ನಾಟಕದಿಂದಾಗಿ 20 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತವೆ ಎಂದು ಸಚಿವರುಗಳೇ ಹೇಳುತ್ತಿದ್ದಾರೆ. ಈ ಉದ್ಯೋಗಗಳನ್ನು ಯಾರಿಗೆ ಕೊಡುತ್ತೀರಿ? ರಾಜನಾಥ ಸಿಂಗ್ ಹೇಳಿದಂತೆ ಯುಪಿ, ಬಿಹಾರಿ ಹಿಂದಿವಾಲಾಗಳಿಗಾ? ಅಥವಾ ಕನ್ನಡಿಗರಿಗಾ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರು ಸ್ಪಷ್ಟಪಡಿಸಬೇಕು. ಹಿಂದಿವಾಲಾಗಳಿಗೆ ಉದ್ಯೋಗ ಕೊಡುವುದಾದರೆ ಕರ್ನಾಟಕದ ರೈತರು ತಮ್ಮ ಬೆಲೆಬಾಳುವ ಜಮೀನನ್ನು ಯಾಕೆ ಸರ್ಕಾರಕ್ಕೆ ನೀಡಬೇಕು? ಕನ್ನಡಿಗರನ್ನು ಭಿಕಾರಿಗೊಳಿಸಿ, ಹಿಂದಿವಾಲಾಗಳನ್ನು ಉದ್ಧಾರ ಮಾಡುವ ನೀತಿಗೆ ನಮ್ಮ ಧಿಕ್ಕಾರವಿದೆ ಎಂದಿದ್ದಾರೆ.

ನಮ್ಮ ಜನಪ್ರತಿನಿಧಿಗಳು ಈಗಲಾದರೂ ಬಾಯಿಬಿಟ್ಟು ಮಾತಾಡಬೇಕು. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡಿಗರು ಆಕ್ರೋಶ ತೋಡಿಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಬಾಯಿ ಬಿಡದಿದ್ದರೆ ಬಾಯಿ ಬಿಡಿಸುವ ಕಾರ್ಯವನ್ನು ಕರವೇ  ಮಾಡಬೇಕಾಗುತ್ತದೆ.  ಕರ್ನಾಟಕದಲ್ಲಿ ಉದ್ಯಮಗಳನ್ನು ಸ್ಥಾಪಿಸುವುದು, ಕನ್ನಡಿಗರ ಒಳಿತಿಗಾಗಿಯೇ ಹೊರತು ಯುಪಿ, ಬಿಹಾರಿಗಳ ಅನುಕೂಲಕ್ಕಾಗಿ ಅಲ್ಲ ಎಂದು ಹೇಳುವ ಧೈರ್ಯ ಇಲ್ಲದ ಜನಪ್ರತಿನಿಧಿಗಳು ಇದ್ದರೇನು ಪ್ರಯೋಜನ? ಇಂಥ ಹೇಡಿ‌ ರಾಜಕಾರಣವನ್ನು ಕನ್ನಡ ಜನತೆಯ ಮುಂದೆ ಬಯಲುಗೊಳಿಸುವ ಕಾರ್ಯವನ್ನು ನಾವು ಮಾಡುತ್ತೇವೆ ಎಂದು ನಾರಾಯಣ ಗೌಡ ಅವರು ಎಚ್ಚರಿಎಕ ನೀಡಿದ್ದಾರೆ.  

More articles

Latest article