ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಏರಿಕೆಯ ಶಾಕ್ ನೀಡಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವಿದ್ಯುತ್ ದರವನ್ನು ಪ್ರತಿ ಯೂನಿಟ್ಗೆ 36 ಪೈಸೆ ಹೆಚ್ಚಳ ಮಾಡಿಆದೇಶ ಹೊರಡಿಸಿದೆ. ಎಪ್ರಿಲ್ 1 ರಿಂದಲೇ ಹೊಸ ಆದೇಶ ಜಾರಿಯಾಗಲಿದೆ. ಕರ್ನಾಟಕ ಇಂಧನ ಇಲಾಖೆಯ ಸಿಬ್ಬಂದಿಗಳ ಪಿಂಚಣಿ, ಗ್ರಾಚ್ಯುಟಿ ಹಣವನ್ನು ಹೊಂದಾಣಿಕೆ ಮಾಡಲು ಈ ದರ ಏರಿಕೆ ಮಾಡಲಾಗಿದೆ ಎಂದು ಕೆಇಆರ್ ಸಿ ತಿಳಿಸಿದೆ. ಮುಂದಿನ ಮೂರು ವರ್ಷಗಳ ಕಾಲ ಪ್ರತಿ ವರ್ಷ ವಿದ್ಯುತ್ ಬೆಲೆ ಹೆಚ್ಷಳವಾಗಲಿದೆ.
ಆದರೆ ಆಡಳಿತಾರೂಢ ಸರ್ಕಾರ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದೆ. ಸಚಿವ ಶರಣಪ್ರಕಾಶ್ ಪಾಟೀಲ ಪ್ರತಿಕ್ರಿಯಿಸಿ, ವಿದ್ಯುತ್ ದರ ಏರಿಕೆಯಿಂದ ಸಾಮಾನ್ಯ ಜನರಿಗೆ ತೊಂದರೆ ಆಗುವುದಿಲ್ಲ. ಗೃಹಜ್ಯೋತಿ ಯೋಜನೆಯಿಂದಾಗಿ ನಷ್ಟ ಆಗಿಲ್ಲ. ಗೃಹಜ್ಯೋತಿ ನಷ್ಟದ ಕಾರಣಕ್ಕೆ ವಿದ್ಯುತ್ ದರ ಏರಿಕೆ ಮಾಡಲಾಗಿಲ್ಲ. ನಾವು 200 ಯೂನಿಟ್ ವಿದ್ಯುತ್ ಉಚಿತ ಕೊಟ್ಟಿದ್ದೇವೆ. 200 ಯೂನಿಟ್ ಮೇಲೆ ಬಳಸಿದವರಿಗೆ ದರ ಏರಿಕೆ ಅನ್ವಯವಾಗುತ್ತದೆ. ಬಿಜೆಪಿ ಶ್ರೀಮಂತರ ಪರವಾಗಿ ಮಾತನಾಡುತ್ತಿದೆ. ಈ ವಿಚಾರದಲ್ಲಿ ಬಿಜೆಪಿ ಆರೋಪ ಸರಿಯಲ್ಲ ಎಂದರು.