ELECTOROL BOND: ಇಡಿ ಪ್ರಕರಣದ ನಂತರ ಬಿಜೆಪಿಗೆ 320 ಕೋಟಿ ರೂ ಕೊಟ್ಟ ಕೆವೆಂಟರ್

Most read

ಹೊಸದಿಲ್ಲಿ: ಎಸ್‌ ಬಿಐ ಚುನಾವಣಾ ಬಾಂಡ್‌ ಗಳಿಗೆ ಸಂಬಂಧಿಸಿದಂತೆ ಎಲ್ಲ ಮಾಹಿತಿಗಳನ್ನು ನೀಡಿದ ನಂತರ, ಯಾವ ಸಂಸ್ಥೆ, ವ್ಯಕ್ತಿ ಯಾವ ರಾಜಕೀಯ ಪಕ್ಷಕ್ಕೆ ಚುನಾವಣಾ ಬಾಂಡ್‌ ಗಳ ಮೂಲಕ ಹಣ ನೀಡಿದ್ದಾರೆ ಎಂಬುದು ಬಯಲಾಗಿದ್ದು, ಕೋಲ್ಕತ್ತಾ ಮೂಲದ ಕೆವೆಂಟರ್‌ ಸಂಸ್ಥೆ ಇಡಿ ಪ್ರಕರಣದ ಬಿಸಿ ಅನುಭವಿಸಿದ ನಂತರ ಬಿಜೆಪಿಗೆ 320 ಕೋಟಿ ರುಪಾಯಿ ಬಾಂಡ್‌ ಮೂಲಕ ದೇಣಿಗೆ ನೀಡಿರುವುದು ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳ ಸರ್ಕಾರ ತನ್ನ ಡೈರಿ ಸಂಸ್ಥೆಯಾದ ಮೆಟ್ರೋ ಡೈರಿಯಲ್ಲಿನ ತನ್ನ ಶೇರುಗಳನ್ನು ಕಡಿಮೆ ಬೆಲೆಗೆ ಕೆವೆಂಟರ್ ಸಂಸ್ಥೆಗೆ ಮಾರಾಟ ಮಾಡಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೆವೆಂಟರ್‌ ಸಂಸ್ಥೆ ವಿರುದ್ಧ ಜಾರಿ ನಿರ್ದೇಶನಾಲಯದ ತನಿಖೆ ಆರಂಭಗೊಂಡಿತ್ತು.

ಯಾವಾಗ ಇಡಿ ತನಿಖೆಗೆ ಇಳಿಯಿತೋ , ಆ ನಂತರವೇ ಅದು ತಾನು ನೀಡಿರುವ ಬಾಂಡ್‌ ಗಳ ಪೈಕಿ ಅರ್ಧದಷ್ಟು ಬಾಂಡ್‌ ಗಳನ್ನು ಬಿಜೆಪಿ ಹೆಸರಿಗೆ ಖರೀದಿಸಿ ನೀಡಿತು.

2018 ರಲ್ಲಿ, ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೋಲ್ಕತ್ತಾ ಹೈಕೋರ್ಟ್ನಲ್ಲಿ ಅರ್ಜಿಯೊಂದನ್ನು ಸಲ್ಲಿಸಿ ರಾಜ್ಯ ಸರ್ಕಾರ ಮೆಟ್ರೋ ಡೈರಿಯ 47% ಶೇರುಗಳನ್ನು ಕೆವೆಂಟರ್ ಆಗ್ರೋ ಲಿಮಿಟೆಡ್‌ಗೆ ಕಡಿಮೆ ಮಾರಾಟ ಮಾಡಿದ್ದಕ್ಕಾಗಿ ರಾಜ್ಯ ಸರ್ಕಾರದ ವಿರುದ್ಧ ತನಿಖೆಯನ್ನು ಕೋರಿದ್ದರು. 85.5 ಕೋಟಿ ರುಪಾಯಿಗಳಿಗೆ ಶೇರು ಖರೀದಿಸಿದ್ದ ಕೆವೆಂಟರ್‌ ನಂತರ ಅದೇ ಶೇರುಗಳನ್ನು 170 ಕೋಟಿ ರುಪಾಯಿಗಳಿಗೆ ಮಾರಾಟ ಮಾಡಿತ್ತು. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿತ್ತು.

2019ರ ಆಗಸ್ಟ್‌ ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪಶ್ಚಿಮ ಬಂಗಾಳ ಸರ್ಕಾರದ ಪ್ರಮುಖ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. ಆದರೆ 2022ರ ಸೆಪ್ಟೆಂಬರ್‌ ನಲ್ಲಿ ಸುಪ್ರೀಂಕೋರ್ಟ್‌ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಇದ್ದ ಆರೋಪವನ್ನು ನಿರಾಧಾರ ಎಂದು ಹೇಳಿ, ಸರ್ಕಾರದ ನೀತಿಯನ್ನು ಎತ್ತಿಹಿಡಿದಿತ್ತು.

ಇದಕ್ಕೂ ಮುನ್ನ ಇಡಿ ತನಿಖೆಗೆ ಬೆದರಿದ ಕೆವೆಂಟರ್‌ ಚುನಾವಣಾ ಬಾಂಡ್ ಗಳ ಮೂಲಕ ಒಟ್ಟು 616 ಕೋಟಿ ರುಪಾಯಿಗಳನ್ನು ದೇಣಿಗೆಯಾಗಿ ನೀಡಿತು. ಇದರಲ್ಲಿ ಭಾರತೀಯ ಜನತಾ ಪಕ್ಷದ್ದೇ ಸಿಂಹಪಾಲು. 2020ರ ಹಣಕಾಸು ವರ್ಷದಲ್ಲಿ ಅದು ಬಿಜೆಪಿಗೆ 320 ಕೋಟಿ ರುಪಾಯಿಗಳನ್ನು ನೀಡಿತು. ಇದೇ ಸಂದರ್ಭದಲ್ಲಿ ಅದು ಇಡಿ ಸಂಸ್ಥೆಯಿಂದ ವಿಚಾರಣೆಯ ಬಿಸಿಯನ್ನು ಅನುಭವಿಸುತ್ತಿತ್ತು.

ಕೆವೆಂಟರ್‌ ಫುಡ್‌ ಪಾರ್ಕ್‌ ಇನ್ಫ್ರಾ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆ 2019-20ನೇ ಸಾಲಿನಲ್ಲಿ ಒಟ್ಟು 195 ಕೋಟಿ ರುಪಾಯಿಗಳನ್ನು ದೇಣಿಗೆ ನೀಡಿದೆ. ಆದರೆ ಆ ಹಣಕಾಸು ವರ್ಷದಲ್ಲಿ ಅದರ ಒಟ್ಟು ಲಾಭ ಕೇವಲ 12.4 ಲಕ್ಷ ರುಪಾಯಿ ಮಾತ್ರ. ದೇಣಿಗೆಯಲ್ಲಿ ಅದು 144.5 ಕೋಟಿ ರುಪಾಯಿಗಳನ್ನು ಬಿಜೆಪಿಗೆ ಸುರಿದರೆ, ತಲಾ 20 ಕೋಟಿ ರುಪಾಯಿಗಳನ್ನು ತೃಣಮೂಲ ಕಾಂಗ್ರೆಸ್‌, ಕಾಂಗ್ರೆಸ್‌ ಮತ್ತು ಶಿರೋಮಣಿ ಅಕಾಲಿದಳ ಪಕ್ಷಗಳಿಗೆ ನೀಡಿದೆ.

ಹಿಂದೆ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಸಂಸ್ಥೆಗಳು ತಮ್ಮ ಆದಾಯದ ಶೇ.7.5 ರಷ್ಟು ಹಣವನ್ನು ಮಾತ್ರ ದೇಣಿಗೆ ನೀಡಬಹುದು ಎಂಬ ನೀತಿಯನ್ನು ಅನುಸರಿಸಲಾಗುತ್ತಿತ್ತು. 2017ರಲ್ಲಿ ಚುನಾವಣಾ ಬಾಂಡ್‌ ಯೋಜನೆ ಪ್ರಕಟಿಸಿದ ಬಿಜೆಪಿ ಸರ್ಕಾರ ಈ ನಿಯಮವನ್ನು ತೆಗೆದುಹಾಕಿತ್ತು. ಹೀಗಾಗಿ ತಮ್ಮ ಲಾಭದ ನೂರು-ಇನ್ನೂರು ಪಟ್ಟು ಹಣವನ್ನು ಕೆಲವು ಸಂಸ್ಥೆಗಳು ಬಿಜೆಪಿಗೆ ದೇಣಿಗೆಯಾಗಿ ನೀಡಿವೆ.

ಕೆವೆಂಟರ್‌ ನ ಇನ್ನೊಂದು ಸೋದರ ಸಂಸ್ಥೆ ಮದನ್‌ ಲಾಲ್‌ ಲಿಮಿಟೆಡ್‌ 2020ರ ಆರ್ಥಿಕ ವರ್ಷದಲ್ಲಿ ಬಿಜೆಪಿಗೆ 175.5 ಕೋಟಿ ರುಪಾಯಿ ದೇಣಿಗೆ ನೀಡಿದ್ದು, ಅದೇ ವರ್ಷ ಕಂಪೆನಿಯ ಆದಾಯ ಕೇವಲ 5.18 ಕೋಟಿ ರುಪಾಯಿಗಳಾಗಿತ್ತು.

More articles

Latest article