‘ಚುನಾವಣಾ ಬಾಂಡ್’ ಅಸಾಂವಿಧಾನಿಕ | ಕೇಂದ್ರಕ್ಕೆ ಪ್ರಹಾರ ನೀಡಿದ ಸುಪ್ರೀಂ ಕೋರ್ಟ್ ತೀರ್ಪು

Most read

ಇದು ಸ್ಟೇಟ್ ಬ್ಯಾಂಕ್ ಮೂಲಕ ನಡೆಯುವ ವ್ಯವಹಾರವಾದುದರಿಂದ ಇದನ್ನು ತಿಳಿಯುವುದು ಕೇಂದ್ರ ಸರ್ಕಾರಕ್ಕೆ  ಬಲು ಸುಲಭ. ಇದರ ಮುಂದುವರಿಕೆಯಾಗಿ ತನಗೆ ಹಣ ಕೊಡದೆ ವಿಪಕ್ಷಗಳಿಗೆ ಹಣ ದೇಣಿಗೆ ಕೊಟ್ಟವರನ್ನು ಟಾರ್ಗೆಟ್ ಮಾಡುವುದೂ ಕೇಂದ್ರ ಸರ್ಕಾರಕ್ಕೆ ಬಲು ಸುಲಭ. ಈ ಅರ್ಥದಲ್ಲಿ ಆಮಿಷ ಮತ್ತು ಬೆದರಿಕೆಯ ಕಾರಣ ಚುನಾವಣಾ ಬಾಂಡ್ ಮೂಲಕ ಗರಿಷ್ಠ ಹಣ ಸಂದಾಯವಾಗುವುದು ಅಧಿಕಾರದಲ್ಲಿರುವ ಪಕ್ಷಕ್ಕೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ಶ್ರೀನಿವಾಸ ಕಾರ್ಕಳ.

2017 ರಲ್ಲಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರಕಾರ ಚುನಾವಣಾ ಬಾಂಡ್ ಯೋಜನೆಯನ್ನು ಜಾರಿಗೆ ತಂದಿತು. ಆ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ಬಿಲಿಯಾಧಿಪತಿಗಳಿಗೆ ಸೀಮಾತೀತ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಲು ಮತ್ತು ದೇಣಿಗೆ ನೀಡಿಯೂ ಅನಾಮಿಕವಾಗಿ ಉಳಿಯಲು ಅವಕಾಶ ಮಾಡಿಕೊಟ್ಟಿತು.

ಇದನ್ನು ಜಾರಿ ಮಾಡುವಾಗ ಸರಕಾರವು ಆರ್ ಬಿ ಐ ಯ ಹಣದ ಅಕ್ರಮ ವರ್ಗಾವಣೆ ಕುರಿತ ಎಚ್ಚರಿಕೆಯನ್ನು ಕಡೆಗಣಿಸಿತು. ಚುನಾವಣಾ ಆಯೋಗ ವ್ಯಕ್ತಪಡಿಸಿದ ಆತಂಕವನ್ನು ಬದಿಗೆ ಸರಿಸಿತು. ಕಾನೂನು ಅಂಗೀಕರಿಸುವಾಗ ಕುತಂತ್ರದ ಹಾದಿಯ ಮೂಲಕ ರಾಜ್ಯಸಭೆಯನ್ನು ಬೈಪಾಸ್ ಮಾಡಿತು.

ಚುನಾವಣೆಗೆ ಸಂಬಂಧ ಪಟ್ಟ ವಿಷಯವಾದ ಕಾರಣ, ಇಲ್ಲಿ ಹಣ ಯಾರು ಕೊಟ್ಟದ್ದು, ಯಾರಿಗೆ ಕೊಟ್ಟದ್ದು ಎಂದು ತಿಳಿಯಬೇಕಾದುದು ಮುಖ್ಯವಾಗಿ ಮತದಾರರಿಗೆ. ಮಾಹಿತಿ ಹಕ್ಕಿನ ಅಡಿಯಲ್ಲಿಯೂ ಅದು ಅವರ ಹಕ್ಕು. ಆದರೆ ಇಲ್ಲಿ ಮತದಾರರಿಗೆ ಬಿಡಿ, ವಿಪಕ್ಷಗಳಿಗೂ ಇದನ್ನು ತಿಳಿಯುವ ಅವಕಾಶವಿಲ್ಲ.!

ಯಾರಿಗೆ ಸಿಂಹ ಪಾಲು?

ಆದರೆ, ಇದು ಸ್ಟೇಟ್ ಬ್ಯಾಂಕ್ ಮೂಲಕ ನಡೆಯುವ ವ್ಯವಹಾರವಾದುದರಿಂದ ಇದನ್ನು ತಿಳಿಯುವುದು ಕೇಂದ್ರ ಸರ್ಕಾರಕ್ಕೆ (ಅಂದರೆ ಕೇಂದ್ರ ಸರಕಾರವನ್ನು ನಡೆಸುತ್ತಿರುವ ಪಕ್ಷಕ್ಕೆ) ಬಲು ಸುಲಭ. ಇದರ ಮುಂದರಿಕೆಯಾಗಿ ತನಗೆ ಹಣ ಕೊಡದೆ ವಿಪಕ್ಷಗಳಿಗೆ ಹಣ ದೇಣಿಗೆ ಕೊಟ್ಟವರನ್ನು ಟಾರ್ಗೆಟ್ ಮಾಡುವುದೂ ಕೇಂದ್ರ ಸರ್ಕಾರಕ್ಕೆ ಬಲು ಸುಲಭ. ಈ ಅರ್ಥದಲ್ಲಿ ಆಮಿಷ ಮತ್ತು ಬೆದರಿಕೆಯ ಕಾರಣ ಚುನಾವಣಾ ಬಾಂಡ್ ಮೂಲಕ ಗರಿಷ್ಠ ಹಣ ಸಂದಾಯವಾಗುವುದು ಅಧಿಕಾರದಲ್ಲಿರುವ ಪಕ್ಷಕ್ಕೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 

ದೇಶದಲ್ಲಿ ಸುಮಾರು 105 ರಾಜಕೀಯ ಪಕ್ಷಗಳಿದ್ದರೆ ಅವುಗಳಲ್ಲಿ ಚುನಾವಣಾ ಬಾಂಡ್ ‍ಲಾಭ ಸಿಕ್ಕಿದ್ದು ಕೇವಲ 17 – 19 ಪಕ್ಷಗಳಿಗೆ. ಜಾರಿಗೊಂಡ ಬಳಿಕ ಮಾರಾಟವಾದ ಬಾಂಡ್ ಗಳ ಒಟ್ಟು ಮೊತ್ತ ಸುಮಾರು 12,000  ಕೋಟಿ ರುಪಾಯಿ. ಕೇವಲ ಬಿಜೆಪಿ ಪಕ್ಷವೊಂದಕ್ಕೆ ಸಿಕ್ಕಿದ ದೇಣಿಗೆಯ ವಿವರ ಹೀಗಿದೆ-

(ಇಸವಿ ಮತ್ತು ಮೊತ್ತ ಕೋಟಿ ರುಪಾಯಿಗಳಲ್ಲಿ)

2018- 210,

2019-1,450,

2020-2,555,

2021-22.38,

2022-1,033,

2023-1,294. ಒಟ್ಟು ಮೊತ್ತ 6,564 ಕೋಟಿ.

ಇದು ಜಾರಿಗೆ ಬಂದ 2017 ರಿಂದಲೂ ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೋರಾಡಲಾಗುತ್ತಿದೆ. ಆದರೆ ಕೋರ್ಟ್ ಸರಕಾರದ ಪರವೇ ನಿಲ್ಲುತ್ತ ಹೋಯಿತು. ಕಳೆದ ನವೆಂಬರ್‌, 2023 ರ ಕೊನೆಗೆ ಸುಪ್ರೀಂ ಕೋರ್ಟ್ ನಲ್ಲಿ ಸಿಜೆಐ ಚಂದ್ರಚೂಡ ನೇತೃತ್ವದ ಸಂವಿಧಾನ ಪೀಠದಲ್ಲಿ ಮತ್ತೆ ವಿಚಾರಣೆ ನಡೆದು ತೀರ್ಪು ಕಾಯ್ದಿರಿಸಲಾಗಿತ್ತು.

ಚುನಾವಣಾ ಬಾಂಡ್ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಇದೀಗ (15.02.2024) ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಸಂಬಂಧ ತನ್ನ ಐತಿಹಾಸಿಕ ತೀರ್ಪು ಘೋಷಿಸಿದೆ. ಸಿಜೆಐ ಚಂದ್ರಚೂಡ್, ಜಸ್ಟಿಸ್ ಸಂಜೀವ ಖನ್ನಾ, ಜಸ್ಟಿಸ್ ಬಿ ಆರ್ ಗವಾಯಿ, ಜಸ್ಟಿಸ್ ಜೆ ಬಿ ಪರದಿವಾಲಾ,  ಮತ್ತು ಮನೋಜ್ ಮಿಶ್ರಾ ಇದ್ದ ಐವರು ನ್ಯಾಯಾಧೀಶರ ಪೀಠ, “ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ, ಈ ಸಂಬಂಧ ಕಂಪನೀಸ್ ಆಕ್ಟ್ ಗೆ ತಂದ ತಿದ್ದುಪಡಿ (S 182)ಕೂಡಾ ಅಸಾಂವಿಧಾನಿಕ” ಎಂದು ಘೋಷಿಸಿದೆ.  “ರಾಜಕೀಯ ದೇಣಿಗೆಗಳು ದೇಣಿಗೆದಾರರಿಗೆ ವಿಶೇಷ ಅಧಿಕಾರ ನೀಡುತ್ತದೆ, ಅವರು ಶಾಸನಸಭೆಯ ಸದಸ್ಯರೊಡನೆ ಆಪ್ತರಾಗುವ ಅವಕಾಶ ಹೆಚ್ಚಿಸುತ್ತದೆ, ಇದು ಕಾರ್ಯನೀತಿ ತಯಾರಿಯ ಮೆಲೆ ಪ್ರಭಾವ ಬೀರಿ ಪರಿವರ್ತನೆಯಾಗುತ್ತದೆ, ಹಣಕಾಸು ದೇಣಿಗೆಗಳು ಕೊಡುಪಡೆಯ (ಕ್ವಿಡ್ ಪ್ರೊ ಕೊ) ವ್ಯವಸ್ಥೆಗೂ ದಾರಿಮಾಡಿಕೊಡುವ ಎಲ್ಲ ಸಾಧ್ಯತೆ ಇದೆ, ಯಾಕೆಂದರೆ ಇಲ್ಲಿ ಹಣ ಮತ್ತು ರಾಜಕೀಯದ ನಡುವೆ ಆಪ್ತ ಸಂಬಂಧವಿದೆ, ಚುನಾವಣಾ ಬಾಂಡ್ ಮತ್ತು ಅಲ್ಲಿನ ಪ್ರಾವಧಾನಗಳು ಮತದಾರನ ಮಾಹಿತಿ ಹಕ್ಕನ್ನು ಉಲ್ಲಂಘಿಸುತ್ತವೆ, ಯಾಕೆಂದರೆ ಅಲ್ಲಿ ಹಣ ನೀಡಿದ್ದು ಯಾರು ಎನ್ನುವುದೇ ತಿಳಿಯುವುದಿಲ್ಲ, ಇದು ಪರಿಚ್ಚೇದ 19 (1) (A)  ಯ ಉಲ್ಲಂಘನೆ ಕೂಡಾ” ಎಂದು ಅದು  ಹೇಳಿದೆ. “ಚುನಾವಣಾ ಬಾಂಡ್ ನ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು” ಎಂದು ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಆದೇಶಿಸಿದೆ. “ರಾಜಕೀಯ ಪಕ್ಷಗಳು ನಗದೀಕರಿಸಿದ ಚುನಾವಣಾ ಬಾಂಡ್ ಗಳ ಮಾಹಿತಿಯನ್ನು ಎಸ್ ಬಿ ಐ ಸಲ್ಲಿಸಬೇಕು, ಇದರ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು, ಚುನಾವಣಾ ಆಯೋಗ ಈ ಮಾಹಿತಿಗಳನ್ನು ತನ್ನ ವೆಬ್ ಸೈಟಿನಲ್ಲಿ ಮಾರ್ಚ್ 13, 2024 ರ ಒಳಗೆ ಪ್ರಕಟಪಡಿಸಬೇಕು” ಎಂದೂ ಅದು ತನ್ನ ತೀರ್ಪಿನಲ್ಲಿ ಹೇಳಿದೆ.


ಜಸ್ಟಿಸ್ ಜೆ ಬಿ ಪರದಿವಾಲಾ,
ಸಂಜೀವ ಖನ್ನಾ,
ಸಿಜೆಐ ಚಂದ್ರಚೂಡ್,
ಜಸ್ಟಿಸ್ ಬಿ ಆರ್ ಗವಾಯಿ
ಜಸ್ಟಿಸ್ ಮನೋಜ್ ಮಿಶ್ರಾ

ಚುನಾವಣಾ ಬಾಂಡ್ ಯೋಜನೆಯ ವಿರುದ್ಧ ಮೇಲ್ಮನವಿ ಸಲ್ಲಿಸಿದವರು- ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್, ಕಾಮನ್ ಕಾಸ್, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್). ವಾದಿಸಿದ ವಕೀಲರು ಅಡ್ವೋಕೇಟ್ ಪ್ರಶಾಂತ ಭೂಷಣ್, ಸೀನಿಯರ್ ಅಡ್ವೋಕೇಟ್ ಕಪಿಲ್ ಸಿಬಲ್, ಅಡ್ವೋಕೇಟ್ ಶದಾನ ಫರಾಶತ್, ಅಡ್ವೋಕೇಟ್ ನಿಝಾಮ್ ಪಾಶಾ, ಸೀನಿಯರ್ ಅಡ್ವೋಕೇಟ್ ವಿಜಯ ಹನಸರಿಯಾ.

ಚುನಾವಣಾ ಬಾಂಡ್ ಕುರಿತ ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಪ್ರಜ್ಞಾವಂತ ನಾಗರಿಕ ವಲಯದಿಂದ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ‘ಸುಪ್ರೀಂ ಕೋರ್ಟ್ ನ ಮೇಲೆ ಜನರ ವಿಶ್ವಾಸ ಹೆಚ್ಚುವಂತಾಗಿದೆ’ ಎಂದು ಕೆಲವರು ಪ್ರತಿಕ್ರಿಯಿಸಿದರೆ.  ‘ಇದು ಚುನಾವಣೆಗಳಲ್ಲಿ ಆರ್ಥಿಕ ವಿಚಾರದಲ್ಲಿ ಅಸಮ ಅವಕಾಶ ಇಲ್ಲವಾಗಿಸುವ ನಿಟ್ಟಿನಲ್ಲಿ ಸಣ್ಣದೊಂದು ಹೆಜ್ಜೆ’ ಎಂದು ಇನ್ನು ಕೆಲವರು ಹೇಳಿದ್ದಾರೆ. ‘ಆದರೂ ಫ್ಯಾಸಿಸ್ಟ್ ಸರಕಾರವನ್ನು ನಂಬಬೇಡಿ, ಅವರು ಏನಾದರೂ ಕಳ್ಳದಾರಿಯನ್ನು ಹುಡುಕಿಯೇ ಹುಡುಕುತ್ತಾರೆ’ ಎಂದೂ ಕೆಲವರು ಎಚ್ಚರಿಕೆಯ ಮಾತು ಆಡಿದ್ದಾರೆ.

ಅದೇನೇ ಇರಲೀ, ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ನ ನಡೆವಳಿಕೆಗಳು ಅನೇಕ ಬಾರಿ ಅನುಮಾನಕ್ಕೆ ಕಾರಣವಾಗಿದ್ದವು. ಸರಕಾರದ ಅನೇಕ ತೀರ್ಮಾನಗಳನ್ನು ಸಂವಿಧಾನದ ಚೌಕಟ್ಟಿನಲ್ಲಿ ಪ್ರಶ್ನಿಸುವ ದಿಟ್ಟತನವನ್ನು ಅದು ತೋರಿದ್ದು ಕಡಿಮೆ. ಅಲ್ಲದೆ ಚುನಾವಣಾ ಬಾಂಡ್ ಒಂದು ಅಕ್ರಮ ಮತ್ತು ಅಸಾಂವಿಧಾನಿಕ ಯೋಜನೆ ಎನ್ನುವುದು ಜನಸಾಮಾನ್ಯರಿಗೂ ಗೊತ್ತಿತ್ತು, ಆದರೆ ಐದಾರು ವರ್ಷಗಳು ಕಳೆದರೂ ಅದು ಸುಪ್ರೀಂ ಕೋರ್ಟ್ ಗೆ ಗೊತ್ತಾಗಲಿಲ್ಲ! ಇಂತಹ ಹೊತ್ತಿನಲ್ಲಿ ಚುನಾವಣಾ ಬಾಂಡ್ ರದ್ದುಪಡಿಸುವ ಈ ತೀರ್ಪು ಮರುಭೂಮಿಯಲ್ಲಿ ಓಯಸಿಸ್ ನಂತೆ ಮೂಡಿಬಂದಿದೆ.

ಶ್ರೀನಿವಾಸ ಕಾರ್ಕಳ

ಸಾಮಾಜಿಕ ಚಿಂತಕರು

More articles

Latest article