ನವದೆಹಲಿ: ದೇಶದ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತುಹೋಗಿದೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಅಕ್ರಮಗಳು ನಡೆದಿರುವುದು ನೂರರಷು ಸತ್ಯ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅವರು ಸಾಂವಿಧಾನಿಕ ಸವಾಲುಗಳು: ದೃಷ್ಟಿಕೋನ ಮತ್ತು ಮಾರ್ಗಗಳು ಕುರಿತ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದರು.
ಪ್ರಧಾನಿ ಮೋದಿ ಅಲ್ಪ ಬಹುಮತ’ದೊಂದಿಗೆ ಅಧಿಕಾರದಲ್ಲಿದ್ದಾರೆ. ಅದರಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಅವರು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವುದನ್ನು ಅವರು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದರು.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲೂ ಭಾರಿ ಪ್ರಮಾಣದಲ್ಲಿ ಮತಗಳ ಕಳ್ಳತನ ಆಗಿರುವುದು ನನ್ನ ಗಮನಕ್ಕೆ ಬಂದಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮತದಾರರ ಪಟ್ಟಿಯಲ್ಲಿದ್ದವರ ಭಾವಚಿತ್ರಗಳು ಮತ್ತು ಮತದಾರರನ್ನು ಪರಿಶೀಲಿಸಿದ್ದಾರೆ. ಸುಮಾರು1.5 ಲಕ್ಷ ಮತದಾರರು ‘ನಕಲಿ’ಮತದಾರರಿದ್ದಾರೆ ಎಂದು ತಿಳಿದು ಬಂದಿದೆ. ಈ ದತ್ತಾಂಶವನ್ನು ಬಿಡುಗಡೆಯಾದರೆ ಚುನಾವಣಾ ವ್ಯವಸ್ಥೆ ಬಗ್ಗೆ ಆಘಾತ ಮೂಡುತ್ತದೆ. ಆ ದಾಖಲೆಗಳು ನಿಜಕ್ಕೂ ‘ಆಟಂ ಬಾಂಬ್’ ಎಂದರೆ ಅತಿಶಯೋಕ್ತಿಯಾಗಲಾರದು ಎಂದು ಅವರು ಪ್ರತಿಪಾದಿಸಿದರು.
ದೇಶದ ಚುನಾವಣಾ ವ್ಯವಸ್ಥೆ ಈಗಾಗಲೇ ಸತ್ತಿದೆ ಎನ್ನುವುದು ಸತ್ಯ. ಕೇಂದ್ರ ಸರ್ಕಾರ ಸರಳ ಬಹುಮತ ಹೊಂದಿದೆ. ಅದರಲ್ಲಿ 10–15 ಸೀಟುಗಳು ಈ ಅಕ್ರಮ ಮತದಾನದ ದ ಮೂಲಕ ಗಳಿಸಿದ್ದಾರೆ. ವಾಸ್ತವವಾಗಿ 70ರಿಂದ 100 ಸ್ಥಾನಗಳನ್ನು ಅಕ್ರಮವಾಗಿ ಗಳಿಸಿರಬಹುದು ಎಂಬ ಶಂಕೆಯಿದೆ. ಇದು ಬಹಿರಂಗವಾದರೆ ಅವರು ಆ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ ಹೇಗೆ ಅಕ್ರಮ ಎಸಗಲಾಗಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತೇವೆ. ಈ ಅಕ್ರಮಗಳ ಬಗ್ಗೆ ನನ್ನ ಬಳಿ ಹಿಂದೆ ದಾಖಲೆಗಳು ಇರಲಿಲ್ಲ. ಆದರೆ ಈಗ ಶೇ. 100ರಷ್ಟು ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದರು.
ಚುನಾವಣಾ ವ್ಯವಸ್ಥೆಯಲ್ಲಿ ಏನೋ ತಪ್ಪು ನಡೆಯುತ್ತಿದೆ ಎಂಬ ಸಂಶಯ 2014ರಿಂದಲೂ ಬಂದಿತ್ತು. ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲಿ ಗೆಲ್ಲದೇ ಹೋದಾಗ ಆಶ್ಚರ್ಯವಾಗಿತ್ತು ಎಂದು ಅವರು ಹೇಳಿದರು.