ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಅಧಿಕಾರವೇ ಇಲ್ಲ: ಲೋಕಸಭೆಯಲ್ಲಿ ಮನೀಶ್ ತಿವಾರಿ ವಾದ

Most read

ನವದೆಹಲಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಮಾಡುವುದು ಕಡ್ಡಾಯ ಎಂಬ ಅಂಶವೇ ಸಂವಿಧಾನದಲ್ಲಿ ಇಲ್ಲವಾದ್ದರಿಂದ ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಅಧಿಕಾರ ಇಲ್ಲ ಎಂದು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಲೋಕಸಭೆಯಲ್ಲಿ ಹೇಳಿದ್ದಾರೆ.

ಸದನದಲ್ಲಿ ಎಸ್‌ ಐಆರ್‌ ಕುರಿತ ಚರ್ಚೆಯನ್ನು ಆರಂಭಿಸಿ ಅವರು ಚುನಾವಣಾ ಆಯೋಗದ ವಿರುದ್ಧ ಹರಿಹಾಯ್ದರು. ಚುನಾವಣೆಗಿಂತ ಮೊದಲು ನೇರ ನಗದು ವರ್ಗಾವಣೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು, ಬಿಹಾರ ವಿಧಾನಸಭಾ ಚುನಾವಣೆಗೂ ಮುನ್ನ ಹಣ ವರ್ಗಾಯಿಸಲು ಎನ್‌ಡಿಎ ಸರ್ಕಾರಕ್ಕೆ ಅವಕಾಶ ನೀಡಿದ್ದು ಏಕೆ ಎಂದೂ ಅವರು ಪ್ರಶ್ನಿಸಿದರು.

1950ರ ಜನಪ್ರತಿನಿಧಿಗಳ ಕಾಯ್ದೆಯ ಸೆ. 21 ರ ಪ್ರಕಾರ ಚುನಾವಣಾ ಆಯೋಗಕ್ಕೆ ಎಸ್‌ಐಆರ್ ನಡೆಸುವ ಹಕ್ಕು ಇಲ್ಲ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ದೋಷಗಳು ಕಂಡು ಬಂದಲ್ಲಿ ಎಸ್‌ಐಆರ್ ನಡೆಸುವುದು ಚುನಾವಣಾ ಆಯೋಗದ ಮುಂದಿರುವ ಆಯ್ಕೆ ಮಾತ್ರ. ಆಗಲೂ ನಿರ್ಧಿಷ್ಟ ಅದಕ್ಕೆ ಕಾರಣಗಳನ್ನು ನೀಡಿ ಮುಂದುವರೆಯಬೇಕು. ಆದರೆ ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗ ಕಾರಣಗಳನ್ನು ನೀಡಿಲ್ಲ ಎಂದು ತಿವಾರಿ ಹೇಳಿದರು.

ಎಲೆಕ್ಟ್ರಾನಿಕ್‌ ಮತ ಯಂತ್ರ (ಇವಿಎಂ)ಗಳನ್ನುಕುರಿತು ಪ್ರಸ್ತಾಪಿಸಿದ ಅವರು, ಇವಿಎಂಗಳ ಸೋರ್ಸ್ ಕೋಡ್ ಯಾರ ಬಳಿ ಇರುತ್ತದೆ ಎಂಬ ಮಾಹಿತಿಯೇ ಇಲ್ಲ. ಕಂಪನಿ ಬಳಿ ಇರುತ್ತದೆಯೋ ಅಥವಾ ಚುನಾವಣಾ ಆಯೋಗದ ಬಳಿ ಇರುತ್ತದೆಯೋ ಎಂದೂ ತಿಳಿದಿಲ್ಲ. ಈ ಬಗ್ಗೆ ಸಂಶಯಗಳಿರುವುದರಿಂದ  ಹಿಂದಿನಂತೆ ಮತಪತ್ರಗಳ ಮೂಲಕ ಚುನಾವಣೆ ನಡೆಸಬೇಕು ಎಂದು ತಿವಾರಿ ಆಗ್ರಹಪಡಿಸಿದರು.

ಚುನಾವಣಾ ಸುಧಾರಣೆ ಆಗಬೇಕಿದೆ. ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ಆಯ್ಕೆಗೆ ಸಂಬಂಧಿಸಿದ 2023 ರ ಕಾನೂನನ್ನು ತಿದ್ದುಪಡಿ ಮಾಡಬೇಕಿದೆ. ಆಯ್ಕೆ ಸಮಿತಿಗೆರೆ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಾಧೀಶರನ್ನು ಸೇರಿಸಬೇಕು ಎಂದು ಸಲಹೆ ನೀಡಿದರು.

More articles

Latest article